ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ
ಕಳೆದ 10 ವರ್ಷಗಳಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ವಿನಯ್ ಕುಲಕರ್ಣಿ ಸೇರಿ 17 ಮಂದಿ ಅಪರಾಧಿಗಳು ಎಂದು ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ಬುಧವಾರ ತೀರ್ಪು ಪ್ರಕಟಿಸಿದ್ದರು. ಸದ್ಯ ವಿನಯ್ ಕುಲಕರ್ಣಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ.
ಯೋಗೀಶ್ ಗೌಡ, ವಿನಯ ಕುಲಕರ್ಣಿ -
ಬೆಂಗಳೂರು, ಏ. 17: ಧಾರವಾಡ (Dharawada) ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ (yogesh gowda murder case) ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (vinay kulakarni) ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ. ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ತೀರ್ಪು ಓದಿದರು. ವಿನಯ್ ಸೇರಿದಂತೆ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ.
ವಿನಯ ಕುಲಕರ್ಣಿ ದೋಷಿ ಎಂದು ಬುಧವಾರವೇ ಕೋರ್ಟ್ ಘೋಷಿಸಿತ್ತು. ಗುರುವಾರ ಆರೋಪಿಗಳ ಹೇಳಿಕೆ ದಾಖಲಿಸಿದ ನ್ಯಾಯಾಲಯ, ತೀರ್ಪನ್ನು ಶುಕ್ರವಾರಕ್ಕೆ ಮುಂದೂಡಿತ್ತು. ಇದೀಗ ತೀರ್ಪು ಬಂದಿದೆ. ಇದರೊಂದಿಗೆ, ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವೂ ಇಲ್ಲದಾಗಲಿದೆ. ಈ ತೀರ್ಪಿನ ಕುರಿತು ವಿನಯ್ ಅವರು ಮೇಲಿನ ಕೋರ್ಟ್‌ಗೆ ಅಪೀಲು ಸಲ್ಲಿಸಲು ಅವಕಾಶವಿದೆ.
ಹತ್ತು ವರ್ಷಗಳಿಂದ ವಿಚಾರಣೆ
ಕಳೆದ 10 ವರ್ಷಗಳಿಂದ ಪ್ರಕರಣದ ತನಿಖೆ ನಡೆಯುತ್ತಿದ್ದು, ವಿನಯ್ ಕುಲಕರ್ಣಿ ಸೇರಿ 17 ಮಂದಿ ಅಪರಾಧಿಗಳು ಎಂದು ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ಬುಧವಾರ ತೀರ್ಪು ಪ್ರಕಟಿಸಿದ್ದರು. ಕೂಡಲೇ ಅವರನ್ನು ಸಿಬಿಐ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿತ್ತು.
ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್120(ಬಿ) ಜೊತೆಗೆ 302, 217, 201, 143, 147, 148 ಜೊತೆಗೆ 149, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 25 ಜೊತೆಗೆ 3, 5, 8, 29 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 13(2) ಜೊತೆಗೆ 13(1)(ಡಿ) ಅಡಿ ಆರೋಪ ಪಟ್ಟಿ ಸಲ್ಲಿಸಿತ್ತು. ವಿನಯ್ ಕುಲಕರ್ಣಿ, ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 21 ಆರೋಪಿಗಳನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಆ ಪೈಕಿ 17 ಮಂದಿ ಮೇಲೆ ಅಪರಾಧ ಸಾಭೀತಾಗಿದೆ. 2016ರ ಜೂನ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣ ಇದಾಗಿದ್ದು 10 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ತೀರ್ಪು ಪ್ರಕಟವಾಗಿದೆ.
ಕೊಲೆ ಪ್ರಕರಣದ ಹಿನ್ನೆಲೆ
2016 ಜೂನ್ 15 ರಂದು ಧಾರವಾಡದ ಸಪ್ತಾಪುರದಲ್ಲಿರುವ ಯೋಗೇಶ್ ಗೌಡ ಅವರದ್ದೇ ಒಡೆತನದ ಉದಯ್ ಜಿಮ್‌ನಲ್ಲಿ ಬೆಳಗಿನ ಜಾವ ಅವರು ದಿನಪತ್ರಿಕೆ ಓದುತ್ತಿದ್ದಾಗ, ಅಲ್ಲಿಗೆ ಬಂದ ದುಷ್ಕರ್ಮಿಗಳ ಗುಂಪೊಂದು ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿತ್ತು.
ಆರಂಭದಲ್ಲಿ ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ರಿಯಲ್ ಎಸ್ಟೇಟ್ (ಆಸ್ತಿ) ವಿವಾದ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ತನಿಖೆ ನಡೆಸಿ, ಬಸವರಾಜ ಮುತ್ತಗಿ ಸೇರಿದಂತೆ ಆರು ಜನರನ್ನು ಬಂಧಿಸಿದ್ದರು. ಆದರೆ, ಯೋಗೇಶ್ ಗೌಡ ಅವರ ಸಹೋದರ ಗುರುನಾಥ ಗೌಡ ಮತ್ತು ಇತರ ಕುಟುಂಬಸ್ಥರು ಇದೊಂದು ರಾಜಕೀಯ ಪ್ರೇರಿತ ಹತ್ಯೆ ಎಂದು ಆರೋಪಿಸಿದರು.
ಈ ಹತ್ಯೆಯ ಹಿಂದೆ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದ ಹಾಗೂ ಧಾರವಾಡದ ಪ್ರಭಾವಿ ನಾಯಕ ವಿನಯ್ ಕುಲಕರ್ಣಿ ಅವರ ಕೈವಾಡವಿದೆ ಎಂದು ಯೋಗೇಶ್ ಗೌಡ ಕುಟುಂಬಸ್ಥರು ಮತ್ತು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದರು. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಯೋಗೇಶ್ ಗೌಡ ಅವರು ವಿನಯ್ ಕುಲಕರ್ಣಿ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಿದ್ದರು, ಇದೇ ರಾಜಕೀಯ ದ್ವೇಷವೇ ಹತ್ಯೆಗೆ ಕಾರಣ ಎಂದು ಆರೋಪಿಸಲಾಯಿತು.
ಪ್ರಮುಖ ಆರೋಪಿಗಳು: ಸಂತೋಷ್, ಅಶ್ವತ್ಥ, ಸುನೀಲ್ ನಜ್ಮೀರ್ ಅಹ್ಮದ್, ಹರ್ಷಿತ್, ವಿನಯ್ ಕುಲಕರ್ಣಿ , ಶಿವಾನಂದ್, ಚನ್ನಕೇಶವ, ಬಸವರಾಜ್ ಮುತ್ತಗಿ , ಕೀರ್ತಿ ಕುಮಾರ್, ವಿನಾಯಕ್, ದಿನೇಶ್, ಶಹನವಾಜ್, ನೂತನ್, ಹರ್ಷಿತ್, ಚಂದ್ರಶೇಖರ ಇಂಡಿ, ಶಿವಾನಂದ್, ವಿಕಾಸ್, ವಾಸುದೇವ, ವಿಕ್ರಂ.
ಸಿಬಿಐ ತನಿಖೆಗೆ ಹಸ್ತಾಂತರ
2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ಯೋಗೇಶ್ ಗೌಡ ಕುಟುಂಬದ ಒತ್ತಾಯದ ಮೇರೆಗೆ 2019ರ ಸೆಪ್ಟೆಂಬರ್‌ನಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಯಿತು. ಸಿಬಿಐ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡ ನಂತರ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿತು. ಸಾಕ್ಷ್ಯ ನಾಶ, ಬೆದರಿಕೆ ಮತ್ತು ಹತ್ಯೆಯ ಸಂಚು ರೂಪಿಸಿದ ಆರೋಪದ ಮೇಲೆ ನವೆಂಬರ್ 5, 2020 ರಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿತು. ವಿನಯ್ ಕುಲಕರ್ಣಿ ಅವರ ಸಂಬಂಧಿ ಚಂದ್ರಶೇಖರ್ ಇಂಡಿ ಸೇರಿದಂತೆ ಇತರ ಕೆಲವರನ್ನೂ ಬಂಧಿಸಲಾಯಿತು. ಸಿಬಿಐ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು ಪ್ರಮುಖ ಆರೋಪಿ (A1) ಎಂದು ಉಲ್ಲೇಖಿಸಲಾಯಿತು.
ವಿನಯ್ ಕುಲಕರ್ಣಿ ಅವರು ಸುಮಾರು 9 ತಿಂಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದರು. ಆಗಸ್ಟ್ 2021ರಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತು. ಪ್ರಮುಖ ಷರತ್ತೆಂದರೆ, ನ್ಯಾಯಾಲಯದ ಅನುಮತಿ ಇಲ್ಲದೆ ಅವರು ಧಾರವಾಡ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ. ಈ ಷರತ್ತಿನ ಕಾರಣದಿಂದಲೇ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ಅವರು, ಜಿಲ್ಲೆಯ ಗಡಿಯ ಹೊರಗಿದ್ದುಕೊಂಡೇ ಡಿಜಿಟಲ್ ಮತ್ತು ಪರೋಕ್ಷ ಪ್ರಚಾರ ಮಾಡಿ ಭಾರಿ ಬಹುಮತದಿಂದ ಜಯಗಳಿಸಿ ಶಾಸಕರಾದರು.