ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಿಯಕರನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಅಳುತ್ತಿದ್ದ ಮಗುವನ್ನು ಕೊಂದ ಪಾಪಿ ತಾಯಿ

Crime News: ಉತ್ತರ ಪ್ರದೇಶದ ಮಥುರಾದಲ್ಲಿ 32 ವರ್ಷದ ಮಹಿಳೆಯೊಬ್ಬಳು ಫೋನ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ಮಾತನಾಡುತ್ತಿದ್ದ ವೇಳೆ ಮಗು ಅಳುತ್ತಿದ್ದ ಕಾರಣ ಕತ್ತು ಹಿಸುಕಿ ಕೊಂದಿದ್ದಾಳೆ. ಪತಿಯ ಅನುಮಾನದಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ.

ಮಥುರಾದಲ್ಲಿ 3 ವರ್ಷದ ಮಗನ ಹತ್ಯೆಗೈದ ತಾಯಿ

ಸಾಂದರ್ಭಿಕ ಚಿತ್ರ -

Profile
Sushmitha Jain Jul 28, 2026 11:30 PM

ಲಖನೌ, ಜು. 28: ಉತ್ತರ ಪ್ರದೇಶದ ಮಥುರಾದಲ್ಲಿ ಮೂರು ವರ್ಷದ ಮಗನನ್ನು ಕತ್ತು ಹಿಸುಕಿ ಕೊಂದ ಆರೋಪದ ಮೇಲೆ 32 ವರ್ಷದ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಫೋನ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ಮಾತನಾಡುತ್ತಿದ್ದ ವೇಳೆ ಮಗು ನಿರಂತರವಾಗಿ ಅಳುತ್ತಿದ್ದ ಕಾರಣ ಕೋಪಗೊಂಡು ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 28ರಂದು ಛೌಲಿ ಗ್ರಾಮದಲ್ಲಿ ಬಾಲದೇವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸೋಮವಾರ (ಜುಲೈ 27) ಮಹಿಳೆ ತನ್ನ ಪ್ರಿಯಕರನೊಂದಿಗೆ ಮಗುವಿನ ಸಾವಿನ ಬಗ್ಗೆ ಮಾತನಾಡುತ್ತಿದ್ದುದನ್ನು ಪತಿ ಕೇಳಿಸಿಕೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ರುಚಿ ಜಿಂದಾಲ್ ತನ್ನ ಪತಿ ಕೃಷ್ಣ ಮುರಾರಿ ಗುಪ್ತ ಅವರಿಗೆ ಕರೆ ಮಾಡಿ, ಮಗ ಅಸ್ವಸ್ಥನಾಗಿದ್ದು, ನಿರಂತರ ಅಳುತ್ತಿದ್ದ ಬಳಿಕ ಪ್ರತಿಕ್ರಿಯಿಸುತ್ತಿಲ್ಲ ಎಂದು ತಿಳಿಸಿದ್ದಳು. ಬಳಿಕ ಕುಟುಂಬಸ್ಥರು ಮಗುವನ್ನು ಹಲವು ವೈದ್ಯರ ಬಳಿ ಕರೆದುಕೊಂಡು ಹೋಗಿ, ಮಥುರಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ಅಂದು ಮಗುವಿಗೆ ಪೋಲಿಯೋ ಹನಿ ಹಾಕಿಸಿದ್ದರಿಂದಲೇ ಸಾವು ಸಂಭವಿಸಿದೆ ಎಂದು ಭಾವಿಸಿದ್ದ ಕುಟುಂಬ, ಯಾವುದೇ ಅನುಮಾನವಿಲ್ಲದೆ ಅಂತ್ಯಕ್ರಿಯೆ ನಡೆಸಿತ್ತು.

ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು

ಆದರೆ ಸೋಮವಾರ ಪತಿ ತನ್ನ ಪತ್ನಿ ಫೋನ್‌ನಲ್ಲಿ ಮಗುವಿನ ಸಾವಿನ ಕುರಿತು ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡ ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಮಹಿಳೆಯ ಮೈದುನ ಗೋವಿಂದ್ ಗುಪ್ತಾ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ, ಆಕೆ ಒಬ್ಬ ವ್ಯಕ್ತಿಯೊಂದಿಗೆ ದೀರ್ಘ ಸಮಯ ಮಾತನಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಗೋವಿಂದ್ ಗುಪ್ತಾ ನೀಡಿದ ದೂರಿನ ಆಧಾರದ ಮೇಲೆ ಬಾಲದೇವ್ ಠಾಣಾಧಿಕಾರಿ ಅಜಯ್ ಶರ್ಮಾ ಕೊಲೆ ಉದ್ದೇಶವಿಲ್ಲದ ಮಾನವ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಥುರಾ ಮಹಾವನ್ ಡಿಎಸ್‌ಪಿ ಸಂಜೀವ್ ಕುಮಾರ್ ರಾಯ್‌ ಮಾತನಾಡಿ, ʼʼಮಗುವಿನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ವರದಿ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದುʼʼ ಎಂದು ಹೇಳಿದ್ದಾರೆ.