ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಪೊಲೀಸರಿಂದ ಹಲ್ಲೆ; ಕಮಿಷನರ್ ಸ್ಪಷ್ಟನೆ ಏನು?
ಹುಬ್ಬಳ್ಳಿಯಲ್ಲಿ ಗಲಾಟೆ ಪ್ರಕರಣದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯನ್ನು ಬಂಧಿಸಲು ಪೊಲೀಸರು ತೆರಳಿದಾಗ ಹೈಡ್ರಾಮಾ ನಡೆದಿದೆ. ಪೊಲೀಸರು ಆಕೆಯನ್ನು ಬಂಧಿಸಿ ಕರೆದೊಯ್ಯುವ ವೇಳೆ, ತನ್ನ ಬಟ್ಟೆ ಬಿಚ್ಚಿ ಥಳಿಸಿದ್ದಾರೆಂದು ಕಾರ್ಯಕರ್ತೆ ಆರೋಪಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ಬಂಧಿಸಿ ಕರೆದೊಯ್ಯುತ್ತಿರುವ ಪೊಲೀಸರು. -
ಹುಬ್ಬಳ್ಳಿ, ಜ.7: ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತೆಯನ್ನು (BJP worker assaulted) ನಗರದ ಕೇಶ್ವಾಪುರ ಪೊಲೀಸರು ಬಂಧಿಸಿ, ಕರೆದೊಯ್ಯುವ ವೇಳೆ ವಿವಸ್ತ್ರಗೊಳಿಸಿ ಹಲ್ಲೆಗೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಕಾರ್ಪೊರೇಟರ್ ನೀಡಿದ ದೂರಿನ ಮೇಲೆ ಬಿಜೆಪಿ ಮಹಿಳಾ ಕಾರ್ಯಕರ್ತೆಯ ಬಂಧನಕ್ಕೆ ಪೊಲೀಸರು ಮುಂದಾದಾಗ ಘಟನೆ ನಡೆದಿದೆ.
ಜನವರಿ 1ರಂದು ಮತಪಟ್ಟಿ ಪರಿಷ್ಕರಣೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಬಿಜೆಪಿಯ ಸುಜಾತಾ ಹಂಡಿ ಎಂಬುವರು ಅಧಿಕಾರಿಗಳ ಜತೆ ಸೇರಿ ಮತಪಟ್ಟಿಯಿಂದ ಮತದಾರರ ಹೆಸರು ಡಿಲೀಟ್ ಮಾಡುತ್ತಿದ್ದಾರೆಂದು, ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲ್ವಕುಂಟ್ಲಾ ವಿರುದ್ಧ ಆರೋಪ ಮಾಡಿದ್ದರು. ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಸುಜಾತಾ ವಿರುದ್ಧ ದೂರು ದಾಖಲಾಗಿತ್ತು.
ದೂರಿನ ಹಿನ್ನೆಲೆ ಪೊಲೀಸರು ಸುಜಾತಾ ಬಂಧನಕ್ಕೆ ತೆರಳಿದ್ದರು. ಈ ವೇಳೆ ಪೊಲೀಸರು ಆಕೆಯನ್ನು ಬಂಧಿಸಿ ಕರೆದೊಯ್ಯುವ ವೇಳೆ ಹೈಡ್ರಾಮಾ ನಡೆದಿದೆ. ಪೊಲೀಸರು ಬಟ್ಟೆ ಬಿಚ್ಚಿ ತನ್ನನ್ನು ಥಳಿಸಿದ್ದಾರೆಂದು ಕಾರ್ಯಕರ್ತೆ ಆರೋಪಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿವೆ.
ಇನ್ನು ಬಂಧನದ ಸಂದರ್ಭದಲ್ಲಿ ಪೊಲೀಸರ ಜತೆ ಅನುಚಿತ ವರ್ತನೆ ತೋರಿದ್ದಾರೆ ಎಂದು ಮಹಿಳೆ ಮೇಲೆ ಮತ್ತೊಂದು ದೂರು ದಾಖಲಾಗಿದೆ. ಹೀಗಾಗಿ ಕೇಶ್ವಾಪುರ ಪೊಲೀಸರೇ ಆಕೆಯನ್ನು ಬಂಧಿಸಿದ್ದಾರೆ.
ಪೊಲೀಸ್ ಕಮಿಷನರ್ ಸ್ಪಷ್ಟನೆ ಏನು?
ಪ್ರಕರಣದ ಕುರಿತು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರತಿಕ್ರಿಯಿಸಿ, 'ಸುಜಾತಾ ಅವರನ್ನು ವಶಕ್ಕೆ ಪಡೆಯುವಾಗ ಅವರೇ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳಾ ಸಿಬ್ಬಂದಿ ಹಾಗೂ ಪುರುಷ ಸಿಬ್ಬಂದಿಯನ್ನು ನೂಕಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ದೊಡ್ಡ ಮಟ್ಟದಲ್ಲಿ ಡ್ರಾಮಾ ಮಾಡಿದ್ದರು. ನಂತರ ಅವರನ್ನು ವಾಹನಕ್ಕೆ ಹತ್ತಿಸಿದಾಗ ತಾವೇ ಬಟ್ಟೆಯನ್ನು ಬಿಚ್ಚಿಕೊಂಡಿದ್ದರು. ಆಗ ನಮ್ಮ ಸಿಬ್ಬಂದಿ ಬೇರೆ ಬಟ್ಟೆ ತಂದು ಕೊಟ್ಟಿದ್ದಾರೆ' ಎಂದು ತಿಳಿಸಿದ್ದಾರೆ.
ಮಹಿಳೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ಕಿರುಕುಳ; ಪ್ರಶ್ನಿಸಿದ ಪತಿ, ಮಗನಿಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ
'ಸುಜಾತಾ ಅವರ ವಿರುದ್ಧ 2020ರಿಂದ 2025ರ ಅಂತ್ಯದವರೆಗೆ ವಿವಿಧ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ನಾಲ್ಕು ಪ್ರಕರಣಗಳು ಸೇರಿ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿವೆ. ಅವರ ನಡವಳಿಕೆ ಬಗ್ಗೆ ಮಾಹಿತಿಯಿದ್ದ ಹಿನ್ನೆಲೆಯಲ್ಲಿ ಬಂಧನದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದರು. ನಮ್ಮ ಸಿಬ್ಬಂದಿಗೆ ಹಲ್ಲಿನಿಂದ ಅವರೇ ಕಚ್ಚಿದ್ದಾರೆ. ನಮ್ಮಿಂದ ಯಾವುದೇ ಅಚಾತುರ್ಯ ನಡೆದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.