Pralhad Joshi: ರಾಜ್ಯಕ್ಕೆ ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚೇ ತೆರಿಗೆ ಹಂಚಿಕೆ: ಪ್ರಲ್ಹಾದ್ ಜೋಶಿ
Pralhad Joshi: 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ₹51,876 ಕೋಟಿ ತೆರಿಗೆ ಹಂಚಿಕೆ ಮಾಡಿದೆ. 2014-15 ರಲ್ಲಿ 24,789.78 ಕೋಟಿ ತೆರಿಗೆ ಹಂಚಿಕೆ ಆಗಿದ್ದರೆ, 2025-26 ರ ಆರ್ಥಿಕ ವರ್ಷ ಇದಕ್ಕಿಂತ ಶೇ.108 ರಷ್ಟು (51876 ಕೋಟಿ ರೂ.) ಅಧಿಕ ತೆರಿಗೆ ಹಂಚಿಕೆ ಮೊತ್ತವನ್ನು ಕರ್ನಾಟಕಕ್ಕೆ ಭರಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರ (Central Government) ಕರ್ನಾಟಕಕ್ಕೆ ಕಳೆದ ವರ್ಷಕ್ಕಿಂತ ಶೇ.10 ರಷ್ಟು ಹೆಚ್ಚೇ ತೆರಿಗೆ ಹಂಚಿಕೆ ಮಾಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ʼಎಕ್ಸ್ʼ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ₹51,876 ಕೋಟಿ ತೆರಿಗೆ ಹಂಚಿಕೆ ಮಾಡಿದೆ ಎಂದು ಹೇಳಿದ್ದಾರೆ.
2014-15 ರಲ್ಲಿ 24,789.78 ಕೋಟಿ ತೆರಿಗೆ ಹಂಚಿಕೆ ಆಗಿದ್ದರೆ, 2025-26 ರ ಆರ್ಥಿಕ ವರ್ಷ ಇದಕ್ಕಿಂತ ಶೇ.108 ರಷ್ಟು (51876 ಕೋಟಿ ರೂ.) ಅಧಿಕ ತೆರಿಗೆ ಹಂಚಿಕೆ ಮೊತ್ತವನ್ನು ಕರ್ನಾಟಕಕ್ಕೆ ಭರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕರ್ನಾಟಕ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದೆ. ರಾಜ್ಯಕ್ಕೆ ಅತ್ಯಧಿಕ ರೈಲ್ವೆ ಯೋಜನೆಗಳ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
15ನೇ ಹಣಕಾಸು ಆಯೋಗದಿಂದ ಕರ್ನಾಟಕದ ತೆರಿಗೆ ಪಾಲು ಶೇ.3.647 ರಷ್ಟು ಎಂದು ನಿಗದಿಪಡಿಸಲಾಗಿದೆ. 2004-2014ರ ದಶಕದ ಅವಧಿಯಲ್ಲಿ ರಾಜ್ಯಕ್ಕೆ ಕೇವಲ ₹81,795 ಕೋಟಿ ರೂಪಾಯಿ ನೀಡಲಾಗಿತ್ತು. 2014-2024ರ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬರೋಬ್ಬರಿ ₹2,85,452 ಕೋಟಿ ತೆರಿಗೆ ಹಂಚಿಕೆ ಮಾಡಿದೆ ಎಂದು ಅಂಕಿ ಅಂಶ ಸಹಿತ ವಿವರಣೆ ನೀಡಿದ್ದಾರೆ.
15 ರೈಲ್ವೆ ಯೋಜನೆ
ಕೇಂದ್ರ ಸರ್ಕಾರ ರಾಜ್ಯಕ್ಕೆ ಬರೊಬ್ಬರಿ ₹7,564 ಕೋಟಿ ವೆಚ್ಚದಲ್ಲಿ 15 ನಿರ್ಣಾಯಕ ರೈಲ್ವೇೆ ಯೋಜನೆಗಳನ್ನು ನೀಡಿದೆ. ಇದು ರಾಜ್ಯಕ್ಕೆ ಅತ್ಯಧಿಕ ರೈಲ್ವೆ ಯೋಜನೆಗಳ ಕೊಡುಗೆಯಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಸ್ಟಾರ್ಟ್ ಅಪ್‌ಗೆ ತೆರಿಗೆ ವಿನಾಯಿತಿ
ಇನ್ನು, ಸ್ಟಾರ್ಟ್ ಅಪ್‌ಗಳಿಗೆ 10 ವರ್ಷಗಳ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿದ್ದು, (ಏಪ್ರಿಲ್ 2030 ರವರೆಗೆ ಅನ್ವಯಿಸಲಿದೆ) ಜತೆಗೆ ₹10,000 ಕೋಟಿ ಅನುದಾನ ಸಹ ನೀಡಲಾಗಿದೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Pralhad Joshi: ರಾಜ್ಯದಲ್ಲಿ ಗ್ಯಾರಂಟಿ ಪರಿಣಾಮ ಬಗ್ಗೆ ಶಾಸಕರೇ ಧ್ವನಿ ಎತ್ತುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ಕರ್ನಾಟಕದ ಬೆಳವಣಿಗೆಗೆ ಈ ಬಲಿಷ್ಠ ಸುಧಾರಣೆ ಕ್ರಮಗಳು ಮತ್ತು ದೊಡ್ಡ ಅವಕಾಶಗಳು ಉಜ್ವಲ ಭವಿಷ್ಯ ರೂಪಿಸಲಿವೆ. ಇದರೊಂದಿಗೆ ಕರ್ನಾಟಕ ನಾವೀನ್ಯತೆಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.