ಕೇಂದ್ರ ಬಜೆಟ್; ಕರ್ನಾಟಕಕ್ಕೆ ಈ ಬಾರಿ ಇನ್ನೂ ಹೆಚ್ಚಿನ ಕೊಡುಗೆಯ ನಿರೀಕ್ಷೆಯಿದೆ ಎಂದ ಜೋಶಿ
Pralhad Joshi: ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಕೆಲವೊಂದು ಅಡೆತಡೆಗಳಿವೆ. ಅವನ್ನು ಪರಿಹರಿಸುವ ಪ್ರಯತ್ನ ನಡೆದಿದೆ. ಇದರಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ. -
ಹುಬ್ಬಳ್ಳಿ, ಜ.27: ಕೇಂದ್ರ ಬಜೆಟ್ ಅಲ್ಲಿ ಕರ್ನಾಟಕ ಸೇರಿದಂತೆ ಪ್ರತಿ ರಾಜ್ಯಗಳಿಗೂ ಯೋಗ್ಯ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೊಡುತ್ತಲೇ ಇದೆ. ಈ ಬಾರಿಯೂ ಎಲ್ಲಾ ರಾಜ್ಯಗಳಿಗೆ ನ್ಯಾಯಸಮ್ಮತ ಕೊಡುಗೆಗೆ ಒತ್ತು ನೀಡುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ (Central Government) ರಸ್ತೆ, ಕೈಗಾರಿಕೆ, ರೈಲ್ವೆ, ವಿಮಾನ ನಿಲ್ದಾಣ, ಕೃಷಿ, ಉತ್ಪಾದನಾ ವಲಯ ಹೀಗೆ ಎಲ್ಲದರ ಕಡೆಯೂ ದೃಷ್ಟಿ ಹರಿಸಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್ 60 ವರ್ಷ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಎನ್‌ಡಿಎ (NDA) ಸರ್ಕಾರ ಐದೇ ವರ್ಷದಲ್ಲಿ ಸಾಧಿಸಿದೆ. ದೇಶಾದ್ಯಂತ ರೈಲ್ವೆ, ಉತ್ಪಾದನಾ ವಲಯವನ್ನು ಬಲಪಡಿಸಿದೆ. ಮೋದಿ ಸರ್ಕಾರ PLI ಯೋಜನೆಯಲ್ಲಿ ಕೈಗಾರಿಕೆ, ಉತ್ಪಾದನೆ ವಲಯಕ್ಕೆ ಉತ್ತೇಜನ ನೀಡುತ್ತಿದೆ. ರಾಹುಲ್ ಗಾಂಧಿ ಇದನ್ನೆಲ್ಲ ತಮ್ಮ ಕಾಲದಲ್ಲಿ ಆದದ್ದೆಂದು ಬರೀ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯಕ್ಕೆ ಇನ್ನೂ ಹೆಚ್ಚಿನ ಕೊಡುಗೆ
ರಾಜ್ಯಕ್ಕೆ ಮೋದಿ ಸರ್ಕಾರವೇ ಹೆಚ್ಚಿನ ಕೊಡುಗೆ ನೀಡಿದೆ. ರೈಲ್ವೆ ಯೋಜನೆಗಳನ್ನು ಕೊಡಮಾಡಿದೆ. ಈ ಬಾರಿಯೂ ಕೇಂದ್ರ ಬಜೆಟ್ ಅಲ್ಲಿ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಕೊಡುಗೆಗಳಿರುವ ನಿರೀಕ್ಷೆಯಿದೆ ಎಂದು ಜೋಶಿ ಭರವಸೆ ನೀಡಿದರು.
ಹಿಂದೆಲ್ಲಾ ಬಜೆಟ್ ಅಲ್ಲಿ 700-800 ಕೋಟಿ ಕೊಡುತ್ತಿದ್ದರು. ನಾವಿಂದು 8000 ಕೋಟಿ ಕೊಡುತ್ತಿದ್ದೇವೆ. ರಾಜ್ಯಕ್ಕೆ ಇದು ಬಂಪರ್ ಅಲ್ಲವೇ? ಎಂದು ಪ್ರಶ್ನಿಸಿದ ಜೋಶಿ, ಕರ್ನಾಟಕ ಒಳಗೊಂಡಂತೆ ಎಲ್ಲಾ ರಾಜ್ಯಗಳಿಗೂ ಯೋಗ್ಯ ಬಜೆಟ್ ಆಗಿರಲಿದೆ ಎಂದು ಸ್ಪಷ್ಟಪಡಿಸಿದರು.
ವಿಶ್ವ ಆರ್ಥಿಕ ವೇದಿಕೆ ಸಭೆಗೆ ಪ್ರಲ್ಹಾದ್ ಜೋಶಿ; ಹೂಡಿಕೆಗೆ ಆಕರ್ಷಣೆಗೆ ವಿವಿಧ ರಾಷ್ಟ್ರಗಳ ಪ್ರಮುಖರೊಂದಿಗೆ ಮಾತುಕತೆ
ಮಹದಾಯಿಗೆ ಕೇಂದ್ರ ಬದ್ಧವಿದೆ
ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಕೆಲವೊಂದು ಅಡೆತಡೆಗಳಿವೆ. ಅವನ್ನು ಪರಿಹರಿಸುವ ಪ್ರಯತ್ನ ನಡೆದಿದೆ. ಇದರಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ಡಿಸಿಎಂ ಡಿ ಕೆ ಶಿವಕುಮಾರ್ ಸಹ ಇದಕ್ಕೊಂದು ಮಾರ್ಗ ಕಂಡುಕೊಳ್ಳೋಣ ಎಂದಿದ್ದಾರೆ. ವನ್ಯ ಜೀವಿ ಮಂಡಳಿ ಅನುಮತಿ ಸಿಕ್ಕ ಬಳಿಕ ಎಲ್ಲಾ ಸುಸೂತ್ರವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದರು.