Dharmasthala case: ಧರ್ಮಸ್ಥಳಕ್ಕೆ ಮಸಿ ಬಳಿದವರಿಗೆ ತಕ್ಕ ಶಾಸ್ತಿ ಯಾವಾಗ?: ಪ್ರಲ್ಹಾದ್ ಜೋಶಿ ಪ್ರಶ್ನೆ
Dharmasthala case: ಜನರ ಧಾರ್ಮಿಕ ನಂಬಿಕೆಯ, ಪವಿತ್ರ ಕ್ಷೇತ್ರದ ಹೆಸರು ಹಾಳು ಮಾಡಿದ ಮೇಲೆ ಸರ್ಕಾರ ಆರೋಪಿಗಳನ್ನು ಬಂಧಿಸುವ ನಾಟಕವಾಡುತ್ತಿದೆ. ಸರ್ಕಾರದ ನಡೆಯಿಂದ ಸರ್ವ ಸಮುದಾಯದವರಿಗೂ ನೋವಾಗಿದೆ. ಅಸಂಖ್ಯಾತ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದಲ್ಲಿ 'ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿದ ಬಳಿಕ ಸರ್ಕಾರ ಆರೋಪಿಗಳನ್ನು ಬಂಧಿಸುವ ನಾಟಕವಾಡಿದೆ' ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ ಆರಂಭದಲ್ಲೇ ಎಡವಿದೆ. ಹಾಗಾಗಿ ಇಷ್ಟೆಲ್ಲಾ ರಾದ್ಧಾಂತವಾಗಿದೆ. ಇದಕ್ಕೆಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.
ಜನರ ಧಾರ್ಮಿಕ ನಂಬಿಕೆಯ, ಪವಿತ್ರ ಕ್ಷೇತ್ರದ ಹೆಸರು ಹಾಳು ಮಾಡಿದ ಮೇಲೆ ಸರ್ಕಾರ ಆರೋಪಿಗಳನ್ನು ಬಂಧಿಸುವ ನಾಟಕವಾಡುತ್ತಿದೆ. ಸರ್ಕಾರದ ನಡೆಯಿಂದ ಸರ್ವ ಸಮುದಾಯದವರಿಗೂ ನೋವಾಗಿದೆ. ಅಸಂಖ್ಯಾತ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇದೊಂದು ಪ್ರಾಯೋಜಿತ ದಾಳಿ: ಧರ್ಮಸ್ಥಳದಲ್ಲಿನ ಈ ಪ್ರಹಸನ
'ಹಿಂದೂ ಧಾರ್ಮಿಕ ನಂಬಿಕೆ ಮೇಲೆ ನಡೆದ ಪ್ರಾಯೋಜಿತ ದಾಳಿ' ಎಂಬುದೀಗ ಬಹಿರಂಗಗೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಧಾರ್ಮಿಕತೆ ಮೇಲೆ ದಾಳಿ ನಡೆಸಿ, ಪುರಾತನ, ಪ್ರಸಿದ್ಧ ಹಿಂದೂ ದೇವಾಲಯದ ವಿರುದ್ಧ ಇಲ್ಲ-ಸಲ್ಲದ ಷಡ್ಯಂತ್ರದ ಟೂಲ್‌ಕಿಟ್ ಬಳಸಿಕೊಂಡಿತು ಎಂದು ಜೋಶಿ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ, ಧರ್ಮಸ್ಥಳ ವಿಚಾರದಲ್ಲಿ ಹಿನ್ನೆಲೆ-ಮುನ್ನೆಲೆ ಯೋಚಿಸದೆ, ಸೂಕ್ತ ಪರಿಶೀಲನೆ ಮಾಡದೇ ಮುಸುಕುಧಾರಿ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿ ತನ್ನ ನಿಜ ಸ್ವರೂಪವನ್ನು ಪ್ರದರ್ಶಿಸಿದ್ದು, ಐತಿಹಾಸಿಕ ದುರಂತ ಎಂದು ಖಂಡಿಸಿದ್ದಾರೆ.
ಮುಖವಾಡಿಗನಿಂದ ಹಿಡಿದು ಪ್ರಾಯೋಜಿತ ಯೂಟ್ಯೂಬರ್‌ಗಳವರೆಗೆ ಯಾವುದೇ ಸತ್ಯಾಸತ್ಯತೆ ಪರಿಶೀಲಿಸದೆ ಸರ್ಕಾರವೇ ಧರ್ಮಸ್ಥಳದ ಪವಿತ್ರ್ಯವನ್ನು ಹಾಳುಗೆಡವಿದೆ. ಧಾರ್ಮಿಕ ನಂಬಿಕೆ ವೈಯಕ್ತಿಕವಾದರೂ ಆಡಳಿತದಲ್ಲಿ ಸಮತೋಲನ ಪ್ರಾಮುಖ್ಯವಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ ಸಚಿವ ಜೋಶಿ.
ಅಲ್ಲದೇ, ಧರ್ಮಸ್ಥಳ ಪ್ರಹಸನದಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯ ಸರ್ಕಾರಕ್ಕೆ ಕೆಲ ಪ್ರಮುಖ ಪ್ರಶ್ನೆಗಳನ್ನೂ ಮುಂದಿಟ್ಟು ಉತ್ತರಕ್ಕೆ ಒತ್ತಾಯಿಸಿದ್ದಾರೆ.
- ಕಾಣದ ಕೈಗಳಿಂದ ಉದ್ದೇಶಪೂರ್ವಕ ಪ್ರಯತ್ನ ನಡೆದಿದೆಯಾ? ಯಾರ ಆಜ್ಞೆಯ ಮೇರೆಗೆ ಇಂತಹ ದುಸ್ಸಾಹಸಕ್ಕೆ ಕೈಹಾಕಲಾಯಿತು?
- ಪ್ರಕರಣದಲ್ಲಿ ಸತ್ಯಾಸತ್ಯಗಳು ಕಣ್ಣೆದುರೇ ಇದ್ದರೂ, ಕಾಂಗ್ರೆಸ್ ಸರ್ಕಾರ ಏಕೆ ಮೌನವಹಿಸಿದೆ?
ಈ ಸುದ್ದಿಯನ್ನೂ ಓದಿ | Dharmasthala case: ಧರ್ಮಸ್ಥಳದಲ್ಲಿ ಶೀಘ್ರದಲ್ಲೇ ಬೃಹತ್ ಸಂತ ಸಂಗಮ ಆಗಲಿದೆ: ವಸಂತ್ ಗಿಳಿಯಾರ್
ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಹಾಗಿದ್ದ ಮೇಲೆ ಇಡೀ ನಾಟಕದ ರೂವಾರಿಗೆ ಯಾವಾಗ ತಕ್ಕ ಶಾಸ್ತಿ ಮಾಡೋದು? ಹಾಗೂ ಹಣಕಾಸಿನ ವ್ಯವಹಾರದ ಮೂಲವನ್ನು ಯಾವಾಗ ಬಹಿರಂಗಪಡಿಸುತ್ತಿರಿ? ಎಂಬೆಲ್ಲಾ ಪ್ರಶ್ನೆಗಳನ್ನು ಮುಂದಿಟ್ಟಿರುವ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸರ್ಕಾರ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಹೊಣೆಗಾರಿಕೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.