ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Special train service: ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೇಂದ್ರದಿಂದ ಸಿಹಿ ಸುದ್ದಿ; ಹುಬ್ಬಳ್ಳಿ-ಕೊಲ್ಲಂಗೆ ವಿಶೇಷ ರೈಲು

ರಾಜ್ಯದ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೇಂದ್ರ ಸರ್ಕಾರ ದಸರಾ ಹಬ್ಬದಲ್ಲಿ ಸಿಹಿ ಸುದ್ದಿ ನೀಡಿದೆ. ಶಬರಿಮಲೈಗೆ ತೆರಳುವ ಯಾತ್ರಿಕರಿಗೆ ಅನುಕೂಲವಾಗುವಂತೆ ವಿಶೇಷ ರೈಲು ಸಂಚಾರ ಆರಂಭಿಸಿದೆ. ಹುಬ್ಬಳ್ಳಿ ಮತ್ತು ಕೊಲ್ಲಂ ಮಧ್ಯೆ ಪ್ರತಿ ಭಾನುವಾರ ಮತ್ತು ಸೋಮವಾರ ಈ ವಿಶೇಷ ಎಕ್ಸ್‌ಪ್ರೆಸ್‌ ರೈಲು ಒಟ್ಟು 14 ವಾರ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಸೆ.28ರಿಂದ ಹುಬ್ಬಳ್ಳಿ-ಕೊಲ್ಲಂಗೆ ವಿಶೇಷ ರೈಲು ಸಂಚಾರ ಆರಂಭ

-

Profile Siddalinga Swamy Sep 24, 2025 1:45 PM

ನವದೆಹಲಿ: ರಾಜ್ಯದ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೇಂದ್ರ ಸರ್ಕಾರ (Central Government) ದಸರಾ ಹಬ್ಬದಲ್ಲಿ (Dasara Festival) ಸಿಹಿ ಸುದ್ದಿ ನೀಡಿದೆ. ಶಬರಿಮಲೈಗೆ ತೆರಳುವ ಯಾತ್ರಿಕರಿಗೆ ಅನುಕೂಲವಾಗುವಂತೆ ವಿಶೇಷ ರೈಲು ಸಂಚಾರ ಆರಂಭಿಸಿದೆ. ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರ ಪ್ರಯತ್ನದ ಫಲವಾಗಿ ʼಹುಬ್ಬಳ್ಳಿ To ಕೊಲ್ಲಂʼ ವರೆಗೆ 22 ಕೋಚ್‌ಗಳುಳ್ಳ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಇದೇ ಸೆಪ್ಟೆಂಬರ್‌ 28 ರಿಂದ ಸಂಚಾರ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.

Special train

ರಾಜ್ಯದ ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಬೆಂಗಳೂರು ಮಾರ್ಗವಾಗಿ ಹಾಗೂ ಕೃಷ್ಣರಾಜಪುರಂ, ಬಂಗಾರಪೇಟ್, ಸೇಲಂ, ಇರೋಡ್‌, ತಿರುಪುರ, ಪೊದನೂರ, ತ್ರಿಸ್ಸೂರ, ಅಲುವಾ, ಎರ್ನಾಕುಲಂ ಟೌಣ್‌, ಕೊಟ್ಟಯಾಂ, ಚಂಗನಸ್ಸೇರಿ, ತಿರುವಳ್ಳಾ, ಚೆಂಗನ್ನೂರ್‌, ಕರುನಾಗಪಲ್ಲಿ, ಸಸ್ಥನಕೊಟ್ಟಾ ಮಾರ್ಗದಲ್ಲಿ ಈ ವಿಶೇಷ ರೈಲು ಸಂಚರಿಸಲಿದೆ.

ಉತ್ತರ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಕೊಲ್ಲಂ ಮಧ್ಯೆ ಪ್ರತಿ ಭಾನುವಾರ ಮತ್ತು ಸೋಮವಾರ ಈ ವಿಶೇಷ ಎಕ್ಸ್‌ಪ್ರೆಸ್‌ ರೈಲು ಒಟ್ಟು 14 ವಾರ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ರೈಲು ಸಂಖ್ಯೆ 07313 ಸೆ.28ರಿಂದ ಪ್ರತಿ ಭಾನುವಾರ ಮಧ್ಯಾಹ್ನ 3.15ಕ್ಕೆ ಹುಬ್ಬಳ್ಳಿಯಿಂದ ಸಂಚರಿಸಲಿದ್ದರೆ, ರೈಲು ಸಂಖ್ಯೆ 07314 ಸೆ.29 ರಿಂದ ಪ್ರತಿ ಸೋಮವಾರ ಸಂಜೆ 5 ಗಂಟೆಗೆ ಕೊಲ್ಲಂನಿಂದ ಸಂಚಾರ ಆರಂಭಿಸಲಿದೆ.

ದಸರಾ ಹಬ್ಬದ ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಸೇರಿದಂತೆ, ರಾಜ್ಯದಿಂದ ಸಂಚರಿಸುವ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ರೈಲು ಸಂಚಾರ ವ್ಯವಸ್ಥೆಗಾಗಿ ಭಾರತೀಯ ಅಯ್ಯಪ್ಪ ಸೇವಾ ಸಂಘ, ಸಚಿವ ಪ್ರಲ್ಹಾದ್‌ ಜೋಶಿ ಅವರಿಗೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಜೋಶಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನ ಸೆಳೆದು ವಿಶೇಷ ರೈಲು ಸಂಚಾರ ಸೇವೆ ಕಲ್ಪಿಸಿದ್ದಾರೆ.

ಅಯ್ಯಪ್ಪ ಸೇವಾ ಸಂಘದಿಂದ ಸಚಿವರಿಗೆ ಅಭಿನಂದನೆ

ಇದೇ ವೇಳೆ ಸಚಿವ ಪ್ರಲ್ಹಾದ್‌ ಜೋಶಿ ಅವರು ತಮ್ಮ ಮನವಿಗೆ ಸ್ಪಂದಿಸಿ ರಾಜ್ಯದ ಶ್ರೀ ಅಯ್ಯಪ್ಪ ಭಕ್ತರಿಗೆ ವಿಶೇಷ ರೈಲು ಒದಗಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇತ್ತ ಭಾರತೀಯ ಅಯ್ಯಪ್ಪ ಸೇವಾ ಸಂಘದವರೂ ಸಹ ಸಚಿವ ಪ್ರಲ್ಹಾದ್‌ ಜೋಶಿ ಸೇರಿದಂತೆ ನೈರುತ್ಯ ರೈಲ್ವೆ ವಲಯದ ಅಧಿಕಾರಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Solar Power Generation: ಭಾರತದಲ್ಲಿ 3,343 GW ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ: ಪ್ರಲ್ಹಾದ್‌ ಜೋಶಿ