ಯಾರಿಗೂ ಬಗ್ಗದ ʼಬಂಡೆʼ ಡಿ.ಕೆ. ಶಿವಕುಮಾರ್‌ಗೆ ಕೊನೆಗೂ ಒಲಿದ ಮುಖ್ಯಮಂತ್ರಿ ಪಟ್ಟ; ಕಾಂಗ್ರೆಸ್ ನಾಯಕನ ರಾಜಕೀಯ ಜರ್ನಿ ಹೇಗಿತ್ತು?
D.K. Shivakumar: ʼಟ್ರಬಲ್ ಶೂಟರ್ʼ ಖ್ಯಾತಿಯ ಡಿ.ಕೆ. ಶಿವಕುಮಾರ್ ಇದೀಗ ಉಪಮುಖ್ಯಮಂತ್ರಿಯಿಂದ ಮುಖ್ಯಮಂತ್ರಿಯಾಗಿದ್ದಾರೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಮಹತ್ವದ ಕೊಡುಗೆ ನೀಡಿದ ಅವರಿಗೆ ಸಿಎಂ ಪಟ್ಟ ಲಭಿಸಿದೆ. ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪ್ರವೇಶ ಹೇಗಿತ್ತು? ವಿಪಕ್ಷಗಳ, ಪಕ್ಷದೊಳಗಿನ ಸವಾಲು ಮೆಟ್ಟಿ ಮುಖ್ಯಮಂತ್ರಿಯಾಗಿದ್ದು ಹೇಗೆ? ಅವರ ರಾಜಕೀಯ ಹೋರಾಟ ಹೇಗಿತ್ತು? ಇಲ್ಲಿದೆ ವಿವರ.
ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು, ಮೇ 30: ಕೆಲವು ತಿಂಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ನಾಯಕತ್ವ ಬಿಕ್ಕಟ್ಟಿಗೆ ತಾರ್ಕಿಕ ಅಂತ್ಯ ಸಿಕ್ಕಿದ್ದು, ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (D.K. Shivakumar) ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ಸರ್ಕಾರದ 3ನೇ ವಾರ್ಷಿಕೋತ್ಸವ ಆಚರಿಸಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿದ್ದಾರೆ. ಆ ಮೂಲಕ ಡಿಕೆಶಿ ಮತ್ತು ಅವರ ಬೆಂಬಲಿಗರ ಹಲವು ವರ್ಷಗಳ ಕನಸು ನನಸಾದಂತಾಗಿದೆ. ರಾಜಕೀಯದಲ್ಲಿ ʼಟ್ರಬಲ್ ಶೂಟರ್ʼ ಎಂದೇ ಕರೆಯಲ್ಪಡುವ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಮಹತ್ವದ ಕೊಡುಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಸಿಎಂ ಪಟ್ಟ ದೊರೆಯಲೇ ಬೇಕು ಎಂಬ ಆಗ್ರಹ ಕೆಲವು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಸದ್ಯ ಈ ಬೇಡಿಕೆಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಮಣಿದಿದ್ದು, ಮುಖ್ಯಮಂತ್ರಿ ಹುದ್ದೆ ನೀಡಿದೆ.
64 ವರ್ಷದ ಡಿ.ಕೆ. ಶಿವಕುಮಾರ್ ಕಾಲೇಜು ದಿನಗಳಲ್ಲೇ ರಾಜಕೀಯಕ್ಕೆ ಪ್ರವೇಶ ಮಾಡಿದವರು. ಕಟ್ಟಾ ಕಾಂಗ್ರೆಸ್ ಬೆಂಬಲಿಗರಾಗಿರುವ ಅವರು ಯಾವುದೇ ಹಂತದಲ್ಲಿ ಪಕ್ಷವನ್ನು ಬಿಟ್ಟು ಕೊಟ್ಟೇ ಇಲ್ಲ. ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪ್ರವೇಶ ಹೇಗಿತ್ತು? ವಿಪಕ್ಷಗಳ, ಪಕ್ಷದೊಳಗಿನ ಸವಾಲು ಮೆಟ್ಟಿ ಮುಖ್ಯಮಂತ್ರಿಯಾಗಿದ್ದು ಹೇಗೆ? ಅವರ ಮುಂದಿರುವ ಸವಾಲುಗಳೇನು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದ ಉತ್ತರ.
ಕನಕಪುರದಲ್ಲಿ ಜನನ
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲದಹಳ್ಳಿಯ ಜಮೀನ್ದಾರರ ಕುಟುಂಬದಲ್ಲಿ ಜನಿಸಿದ ಡಿಕೆಶಿ ಅವರ ಪೂರ್ಣ ಹೆಸರು ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್. 1962ರಲ್ಲಿ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಯ ಮಗನಾಗಿ ಜನಿಸಿದ ಅವರು ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಆಗಮಿಸಿದರು. ಅಲ್ಲಿಂದ ಅವರ ಜೀವನದ ದಿಕ್ಕೇ ಬದಲಾಯಿತು.

ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಪ್ರವೇಶ
ಡಿಕೆಶಿ ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯಕ್ಕೆ ಕಾಲಿಟ್ಟರು. ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಅವರು, 1980ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡರು. ಆರಂಭದಿಂದಲೂ ಕಾಂಗ್ರೆಸ್ ಅನುಯಾಯಿಯಾಗಿದ್ದ ಅವರು 1989ರಲ್ಲಿ ಸಾತನೂರು ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಅದಾದ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಪ್ರಬಲ ಒಕ್ಕಲಿಗ ನಾಯಕರಾಗಿ ಬೆಳೆದ ಅವರು ಹಳೆ ಮೈಸೂರು ಭಾಗದಲ್ಲೇ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಕನಕಪುರ ಕ್ಷೇತ್ರವನ್ನು ತಮ್ಮ ರಾಜಕೀಯ ಭದ್ರಕೋಟೆಯಾಗಿ ರೂಪಿಸಿಕೊಂಡ ರೀತಿಯೇ ವಿಶಿಷ್ಟ.
ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಕುತೂಹಲ ಕೆರಳಿಸಿದ ಡಿಕೆ ಶಿವಕುಮಾರ್ ಪೋಸ್ಟ್!
ರಾಜಕೀಯ ಕನಸಿಗೆ ನೀರೆರೆದ ಎನ್‌ಎಸ್‌ಯುಐ
ಕೆಲವರು ಚಿಕ್ಕಂದಿನಿಂದಲೇ ಮುಂದೆ ಏನಾಗಬೇಕೆಂಬ ಸ್ಪಷ್ಟ ಗುರಿ ಇಟ್ಟುಕೊಂಡಿರುತ್ತಾರೆ. ಡಿಕೆಶಿ ಕೂಡ ಅಂತಹವರ ಸಾಲಿಗೆ ಸೇರಿದವರು. ಅವರೊಳಗಿನ ರಾಜಕಾರಣಿಗೆ ನೀರೆರೆದಿದ್ದು ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ (National Students' Union of India). ಬೆಂಗಳೂರಿನ ಆರ್. ಸಿ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಅವರು, 1983ರಲ್ಲಿ ರಾಜ್ಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದರು. ಆಗ ಅವರಿಗೆ ಕೇವಲ 21 ವರ್ಷ. ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅವರು ಕನಕಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮುಂಚಿನ ಸಂಚಾರ ನಡೆಸಿದ ಗಮನ ಸೆಳೆದರು. ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ಆಯೋಜಿಸಿ ನಿಧಾನವಾಗಿ ಜನ ಮನ ಗೆಲ್ಲ ತೊಡಗಿದರು.
ಮೊದಲ ಪ್ರಯತ್ನದಲ್ಲಿ ಸೋಲು
ಹೀಗೆ ಯುವ ಕಾಂಗ್ರೆಸ್‌ನಲ್ಲಿ ತಮ್ಮ ಪ್ರಭಾವ ಬೀರಿದ ಡಿಕೆಶಿ ಸಹಜವಾಗಿಯೇ ದೊಡ್ಡ ದೊಡ್ಡ ನಾಯಕರ ಕಣ್ಣಿಗೆ ಬಿದ್ದರು. ಅದರ ಪರಿಣಾಮವಾಗಿಯೇ 23ನೇ ವಯಸ್ಸಿಗೆ ಅವರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ದೊರೆಯಿತು. 1985ರ ವಿಧಾನಸಭಾ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಲ್ಲಿ ಜೆಡಿಎಸ್ ಮುಖಡ, ಪ್ರಭಾವಿ ಎಚ್.ಡಿ. ದೇವೇಗೌಡ ಅವರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಡಿಕೆಶಿ ಅವರನ್ನು ಆಯ್ಕೆ ಮಾಡಿತು. ಅದು ಆ ಕಾಲದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ಜೆಡಿಎಸ್ ಪ್ರಭಾವಿಯ ವಿರುದ್ಧ ಯುವ ನಾಯಕನೊಬ್ಬ ಕಣಕ್ಕಿಳಿದಿದ್ದಾನೆ ಎನ್ನುವ ಕಾರಣಕ್ಕೆ ಈ ಕ್ಷೇತ್ರ ರಾಜ್ಯದ ಗಮನ ಸೆಳೆಯಿತು. ಈ ಚುನಾವಣೆಯಲ್ಲಿ ಡಿಕೆಶಿ ಸೋತರೂ ಜನರ ಗಮನವನ್ನಂತೂ ಸೆಳೆದರು. ದೇವೇಗೌಡ ಅವರಿಗೆ ಪ್ರಬಲ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು. ದೇವೇಗೌಡ ಪ್ರಯಾಸದ ಗೆಲುವು ಕಂಡು ನಿಟ್ಟಿಸಿರು ಬಿಡಬೇಕಾಯ್ತು.
ಇದು ಡಿಕೆಶಿ ಅವರನ್ನು ರಾಜಕೀಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. 1987ರಲ್ಲಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡರು. 1989ರ ವಿಧಾನಸಭಾ ಚುನಾವಣೆಯಲ್ಲಿ ಡಿಕೆಶಿ ಮತ್ತೆ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದರು. ಜೆಡಿಎಸ್‌ನ ಪ್ರಬಲ ಕೋಟೆಯನ್ನು ಒಡೆದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಹೀಗೆ 27 ವರ್ಷದ ಯುವಕ ಯುವ ಎಂಎಲ್‌ಎ ಎನಿಸಿಕೊಂಡರು.
ಮುಂದುವರಿದ ಗೆಲುವಿನ ನಾಗಾಲೋಟ
ಮುಂದೆ ಕಾಂಗ್ರೆಸ್ ಪ್ರಭಾವಿ ನಾಯಕರಲ್ಲಿ ಒಬ್ಬರೆನಿಸಿಕೊಂಡ ಡಿಕೆಶಿ ಸಾತನೂರಿನಲ್ಲಿ ನಿಧಾನವಾಗಿ ಬೇರೂರತೊಡಗಿದರು. ಪಕ್ಷದೊಳಗಿನ ಸಂಚಿನಿಂದ ಅವರಿಗೆ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತು. ಧೃತಿಗೆಡದೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದರು. ಮುಂದೆ 1999 ಮತ್ತು 2004ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಲೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದರು. ಇನ್ನು 2008, 2013, 2018 ಮತ್ತು 2023ರಲ್ಲಿ ಕನಕಪುರ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗೆ ಒಟ್ಟು 8 ಬಾರಿ ಎಂಎಲ್‌ಎ ಅಗಿದ್ದಾರೆ.

ಮಹಾರಾಷ್ಟ್ರದಲ್ಲಿಯೂ ಛಾಪು
ರಾಜ್ಯ ರಾಜಕಾರಣ ಮಾತ್ರವಲ್ಲ ನೆರೆಯ ಮಹಾರಾಷ್ಟ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಪಾಯದಲ್ಲಿದ್ದಾಗ ಡಿಕೆಶಿ ಸಹಾಯ ಹಸ್ತ ಚಾಚಿದ್ದಾರೆ. 2002ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನಾಯಕ ವಿಲಾಸ್‍ರಾವ್ ದೇಶ್‍ಮುಖ್ ನೇತೃತ್ವದ ಸಮ್ಮಿಶ್ರ ಸರ್ಕಾರದೊಂದಿಗೆ ಎನ್‌ಸಿಪಿ ಅಸಮಾಧಾನಗೊಂಡಿದ್ದರಿಂದ ಸರ್ಕಾರ ಅಲ್ಪಮತದ ಅಪಾಯಕ್ಕೆ ಸಿಕ್ಕಿಕೊಂಡಿತು. ಆಗ ಎನ್‌ಸಿಪಿ ಮತ್ತು ವಿರೋಧ ಪಕ್ಷಗಳು ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಕುದುರೆ ವ್ಯಾಪಾರಕ್ಕೆ ಇಳಿದಿದ್ದವು. ತಕ್ಷಣ ಕಾಂಗ್ರೆಸ್ ಹೈಕಮಾಂಡಿನ ಆದೇಶದಂತೆ ಕಾರ್ಯಪ್ರವೃತ್ತರಾದ ಡಿ.ಕೆ. ಶಿವಕುಮಾರ್ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಮುಂಬೈಯಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಸುಮಾರು 10-12 ದಿನಗಳ ಕಾಲ ರೆಸಾರ್ಟ್ ಒಂದರಲ್ಲಿ ಇರಿಸಿಕೊಂಡು ರಕ್ಷಣೆ ನೀಡಿದರು. ಡಿಕೆಶಿ ಅವರ ರಾಜಕೀಯ ತಂತ್ರದಿಂದ ವಿಲಾಸ್‍ರಾವ್ ದೇಶ್‍ಮುಖ್ ಸರ್ಕಾರ ಯಾವುದೇ ಅಪಾಯವಿಲ್ಲದೆ ವಿಶ್ವಾಸಮತ ಗೆದ್ದುಕೊಂಡಿತು.

ಎಸ್.ಎಂ. ಕೃಷ್ಣ ಜತೆ ಜುಗಲ್‌ಬಂದಿ
ಡಿಕೆಶಿ ಅವರಿಗೆ ಕಾಂಗ್ರೆಸ್‌ನ ಅಂದಿನ ಪ್ರಭಾವಿ ಮುಖಂಡರಾಗಿದ್ದ ಎಸ್.ಎಂ. ಕೃಷ್ಣ ರಾಜಕೀಯ ಗುರು. 1999ರಲ್ಲಿ ಎಸ್.ಎಂ. ಕೃಷ್ಣ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ಡಿ.ಕೆ. ಶಿವಕುಮಾರ್ ಅವರ ಬೆನ್ನೆಲುಬಾಗಿ ನಿಂತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
2013ರ ರಾಜಕೀಯ ಚಿತ್ರಣ
2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿ ಸಿದ್ಧರಾಮಯ್ಯ ಮುಖ್ಯಮಂತ್ರಿಗಳಾಗಿ ಆಯ್ಕೆಗೊಂಡಾಗ ಡಿ.ಕೆ. ಶಿವಕುಮಾರ್ ಅವರಿಗೆ ಸಚಿವ ಸ್ಥಾನ ಕೈ ತಪ್ಪಿತು. ಅದಾಗಿ ಏಳೇ ತಿಂಗಳ ನಂತರ ಡಿ.ಕೆ. ಶಿವಕುಮಾರ್ ಅವರಿಗೆ ಸಚಿವ ಸ್ಥಾನ ಸಿಕ್ಕಿತು. ಇಂಧನ ಖಾತೆಯಂತಹ ಪ್ರಮುಖ ಖಾತೆಯನ್ನುಅವರಿಗೆ ನೀಡಲಾಯಿತು. ಇಂಧನ ಸಚಿವರಾಗಿ ಡಿ.ಕೆ. ಶಿವಕುಮಾರ್ ಜಡ್ಡುಗಟ್ಟಿದ್ದ ಇಂಧನ ಇಲಾಖೆಯನ್ನು ಅಮೂಲಾಗ್ರ ಸುಧಾರಣೆ ಮಾಡಿದರು. ಹಲವು ವಿದ್ಯುತ್ ಖರೀದಿ ಒಪ್ಪಂದಗಳನ್ನು ರದ್ದುಗೊಳಿಸಿದರು. ಅಷ್ಟೇ ಅಲ್ಲ ಹಿಂದಿನ ಸರ್ಕಾರದ ಕಾಲಾವಧಿಯಲ್ಲಿ ಮಾಡಲಾದ ವಿದ್ಯುತ್ ಖರೀದಿಯಲ್ಲಿ ಅಕ್ರಮ ಕುರಿತ ಸದನ ಸಮಿತಿ ರಚನೆಗೆ ಕಾರಣರಾದರು.
2018ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲಿಗೆ ಜಲಸಂಪನ್ಮೂಲ ನಂತರ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಪಡೆದ ಡಿ.ಕೆ. ಶಿವಕುಮಾರ್ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಮಹದಾಯಿ ಸಮಸ್ಯೆ ಪರಿಹಾರ, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ
2020ರ ಮಾರ್ಚ್ 11ರಂದು ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿದಾಗ, ಮತ್ತೆ ತಮ್ಮ ಕಾರ್ಯಕರ್ತರನ್ನು ಜನರತ್ತ ಕಳುಹಿಸಿ ರಾಜ್ಯದಲ್ಲಿ ಯಶಸ್ವಿಯಾಗಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಿದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಉತ್ಪಾದನೆ ಸೇರಿ ಹಲವು ಪ್ರಯೋಜನಗಳನ್ನು ಹೊಂದಿರುವ ಮೇಕೆದಾಟು ಯೋಜನೆಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದಾಗ ಈ ಯೋಜನೆ ಆಗ್ರಹಿಸಿ 160 ಕಿ.ಮೀ. ಪಾದಯಾತ್ರೆ ಮಾಡಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಕೇಂದ್ರ ಸರ್ಕಾರದ ಕೃಷಿ ಕರಾಳ ಕಾಯ್ದೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದರು. ಭ್ರಷ್ಟಾಚಾರ, 40% ಕಮಿಷನ್, ಪೇ ಸಿಎಂ, ನೇಮಕಾತಿ ಅಕ್ರಮ ವಿರುದ್ಧ ಬೀದಿಗಿಳಿದು ಹೋರಾಡಿದರು. ʼಪ್ರಜಾಧ್ವನಿʼ ಯಾತ್ರೆ ಮೂಲಕ ರಾಜ್ಯದ ಮೂಲೆ ಮೂಲೆ ಪ್ರವಾಸ ಮಾಡಿ ಎಲ್ಲ ವರ್ಗಗಳ ಜನರ ಸಂಕಷ್ಟ ಆಲಿಸಿದರು. ʼನಾ ನಾಯಕಿʼ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡಿ ಮಹಿಳೆಯರನ್ನು ಕಾಂಗ್ರೆಸ್ ಕಡೆ ಸೆಳೆಯುವಲ್ಲಿ ಯಶಸ್ವಿಯಾದರು. ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಯಲ್ಲಿ 136 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸಿದೆ. ಈ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ, ಜಲಸಂಪನ್ಮೂಲ ಇಲಾಖೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿ ಗನನ ಸೆಳೆದರು.
ಇ-ಖಾತಾ ದಂಧೆ ವಿಚಾರಕ್ಕೆ ಡಿಕೆಶಿ-ಸುನೀಲ್ ಕುಮಾರ್ ನಡುವೆ ವಾಕ್ಸಮರ!
ಜೈಲುವಾಸ
ಮನಿ ಲಾಂಡರಿಂಗ್ ಪ್ರಕರದಲ್ಲಿ 2019ರಲ್ಲಿ ಡಿಕೆಶಿ ಅವರನ್ನು ಇಡಿ ಬಂಧಿಸಿತು. ಅಕ್ರಮ ಆಸ್ತಿ ಪತ್ತೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಕೆಲವು ದಿನಗಳ ಜೈಲುವಾಸದ ಬಳಿಕ ಹೊರ ಬಂದ ಅವರು ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಸಿಎಂ ಪಟ್ಟಕ್ಕೇರಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.