Gubbi News: ದುಡಿಮೆಯ ಒಂದಂಶ ಬಡ ಮಕ್ಕಳ ಶಿಕ್ಷಣಕ್ಕೆ : ಕಳ್ಳಿಪಾಳ್ಯ ಲೋಕೇಶ್
ಆಡಂಬರ ಹುಟ್ಟುಹಬ್ಬ ಆಚರಣೆ ಮಾಡಿ ಹಣ ವ್ಯಯ ಮಾಡುವ ಬದಲು ಹಳ್ಳಿಗಾಡಿನ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದು ಒಂದು ರೀತಿಯ ಸಾರ್ಥಕ ಬದುಕು ಎನಿಸುತ್ತದೆ. ಆರೋಗ್ಯ ಮತ್ತು ಶಿಕ್ಷಣ ಸಮಾಜಕ್ಕೆ ಉಚಿತ ಸೇವೆ ಆಗಬೇಕಿದೆ. ಆದರೆ ದುರದೃಷ್ಟ ರೀತಿಯಲ್ಲಿ ಈ ಎರಡೂ ಕ್ಷೇತ್ರ ಕಮರ್ಷಿಯಲ್ ಆಗಿದೆ ಎಂದು ವಿಷಾದಿಸಿದ ಅವರು ಆಂಗ್ಲ ಮಾಧ್ಯಮ ಶಿಕ್ಷಣ ಹಳ್ಳಿ ಮಕ್ಕಳಿಗೆ ದೊರೆಯಬೇಕು
-
ಗುಬ್ಬಿ: ಗ್ರಾಮೀಣ ಭಾಗದಿಂದ ನಗರದತ್ತ ಹೋಗಿ ಉತ್ತಮ ಬದುಕು ಕಂಡವರು ದುಡಿಮೆಯ ಒಂದಂಶ ಬಡ ಮಕ್ಕಳ ಶಿಕ್ಷಣಕ್ಕೆ ಬಳಸಿದರೆ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಆಗುವುದು ಎಂದು ಜೆಡಿಎಸ್(JDS) ಮುಖಂಡ ಕಳ್ಳಿಪಾಳ್ಯ ಲೋಕೇಶ್ ತಿಳಿಸಿದರು.
ತಾಲ್ಲೂಕಿನ ಕಸಬ ಹೋಬಳಿ ಕಳ್ಳಿಪಾಳ್ಯ ಮತ್ತು ಸಿಂಗೋನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಸೇರಿದಂತೆ ಅಡಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಶಾಲೆಯ 400 ಮಕ್ಕಳಿಗೆ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಲೇಖನಿ ಸಾಮಗ್ರಿ ವಿತರಿಸುವ ಮೂಲಕ ತಮ್ಮ 64 ನೇ ವರ್ಷದ ಹುಟ್ಟುಹಬ್ಬ ಆಚರಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡುವ ಬಹುತೇಕ ಮಕ್ಕಳು ಬಡ ಮಕ್ಕಳಾಗಿರುತ್ತಾರೆ. ಈ ನಿಟ್ಟಿನಲ್ಲಿ ಬಡವರ ಶೈಕ್ಷಣಿಕ ಪ್ರಗತಿಗೆ ಅಳಿಲು ಸೇವೆ ಮಾಡಲು ಪ್ರತಿ ವರ್ಷ ಈ ರೀತಿಯಲ್ಲೇ ಜನುಮ ದಿನದ ಆಚರಣೆ ಮಾಡುತ್ತಿದ್ದೇನೆ ಎಂದರು.
ಇದನ್ನೂ ಓದಿ: Gubbi News: ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳ ಆಯ್ಕೆ
ಆಡಂಬರ ಹುಟ್ಟುಹಬ್ಬ ಆಚರಣೆ ಮಾಡಿ ಹಣ ವ್ಯಯ ಮಾಡುವ ಬದಲು ಹಳ್ಳಿಗಾಡಿನ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದು ಒಂದು ರೀತಿಯ ಸಾರ್ಥಕ ಬದುಕು ಎನಿಸುತ್ತದೆ. ಆರೋಗ್ಯ ಮತ್ತು ಶಿಕ್ಷಣ ಸಮಾಜಕ್ಕೆ ಉಚಿತ ಸೇವೆ ಆಗಬೇಕಿದೆ. ಆದರೆ ದುರದೃಷ್ಟ ರೀತಿಯಲ್ಲಿ ಈ ಎರಡೂ ಕ್ಷೇತ್ರ ಕಮರ್ಷಿಯಲ್ ಆಗಿದೆ ಎಂದು ವಿಷಾದಿಸಿದ ಅವರು ಆಂಗ್ಲ ಮಾಧ್ಯಮ ಶಿಕ್ಷಣ ಹಳ್ಳಿ ಮಕ್ಕಳಿಗೆ ದೊರೆಯಬೇಕು. ಈ ನಿಟ್ಟಿನಲ್ಲಿ ನನ್ನೂರ ಶಾಲೆ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡುತ್ತಿದ್ದೇನೆ. ಇದೇ ಕಾರ್ಯ ಮತ್ತಷ್ಟು ಸ್ಥಿತಿವಂತ ಜನರು ಹಳ್ಳಿಯ ಉದ್ದಾರಕ್ಕೆ ಶ್ರಮಿಸಿ ಎಂದು ಕರೆ ನೀಡಿದರು.
ಹಿಂದೆ ಊರಿನ ಹಿರಿಯರು ಕಷ್ಟಪಟ್ಟು ಶಾಲೆಯ ಕಟ್ಟಡ ಕಟ್ಟಿಕೊಟ್ಟಿದ್ದಾರೆ. ಆದರೆ ಇಂದಿನ ಸರ್ಕಾರಗಳು ಕಟ್ಟಡ ದುರಸ್ಥಿಗೂ ನೆರವಾಗುತ್ತಿಲ್ಲ. ನಿಜವಾದ ಪ್ರೋತ್ಸಾಹ ಸರ್ಕಾರ ಮಾಡಬೇಕು. ಜೊತೆಗೆ ಸಮುದಾಯ ಸಹ ಜೊತೆಯಲ್ಲಿರಬೇಕು ಎಂದ ಅವರು ಎಲ್ಲಾ ಮೂಲವ್ಯವಸ್ಥೆ ಜೊತೆಗೆ ಬಿಸಿಯೂಟ, ಪೌಷ್ಟಿಕ ಆಹಾರ, ಉಚಿತ ಪಠ್ಯ, ಸಮವಸ್ತ್ರ ನೀಡಿದ್ದರೂ ಮಕ್ಕಳ ದಾಖಲಾತಿ ಕ್ಷೀಣಿಸಿ ಮುಚ್ಚುವ ಹಂತ ತಲುಪಿದೆ. ಇಲ್ಲಿನ ವೈಫಲ್ಯ ಸರ್ಕಾರ ತಿಳಿದು ಸರ್ಕಾರಿ ಶಾಲೆ ಉಳಿಸಬೇಕು. ಗುಣಮಟ್ಟದ ಶಿಕ್ಷಣ ಜೊತೆಗೆ ಅಗತ್ಯ ಮೂಲಭೂತ ವ್ಯವಸ್ಥೆ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣ ಒತ್ತು ನೀಡಿದ್ದಲ್ಲಿ ಹಳ್ಳಿ ಮಕ್ಕಳು ಉತ್ತಮ ಹುದ್ದೆ ಅಲಂಕರಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಕೇಕ್ ಮತ್ತು ಲಡ್ಡು ಸಿಹಿ ಮಕ್ಕಳಿಗೆ ಹಂಚಿ ಶಿಕ್ಷಣ ಉತ್ತಮವಾಗಲಿ ಎಂದು ಹಾರೈಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ನಿಂಗಪ್ಪ, ಮುಖಂಡ ಬಿ.ಎಸ್.ನಾಗರಾಜು, ಯೋಗಾ ನಂದಕುಮಾರ್, ಚಿಕ್ಕವೀರಯ್ಯ, ಸಿಂಗೋನಹಳ್ಳಿ ಸೋಮಣ್ಣ, ಕಾಂತರಾಜು, ಹೊಸಪಾಳ್ಯ ವೆಂಕಟೇಶ್, ಜಿ.ಎಂ.ಶಿವಾನಂದ್, ಶರಣ್, ತೊರೆಹಳ್ಳಿ ರಂಗನಾಥ್, ನಾಗರಾಜು, ಹೊಸಕೆರೆ ಬಸವರಾಜ್, ಶಿವರಾಜ್, ಸೋಮಶೇಖರ್, ಶಂಕರೇಗೌಡ, ವೀರಭದ್ರೇಗೌಡ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು, ಲೋಕೇಶ್ ಅಭಿಮಾನಿಗಳು ಭಾಗವಹಿಸಿದ್ದರು.