DK Shivakumar: ಮೆಟ್ರೋ ದರ ಇಳಿಕೆಯ ಅಂತಿಮ ತೀರ್ಮಾನ ಕೇಂದ್ರ ಸಮಿತಿಯದ್ದು-ಡಿಕೆಶಿ
DK Shivakumar: ಮೆಟ್ರೋ ದರ ನಿಗದಿಗೆ ನ್ಯಾಯಾಧೀಶರ ನೇತೃತ್ವದ ಪ್ರತ್ಯೇಕ ಕೇಂದ್ರ ಸಮಿತಿ ಮಾಡಲಾಗಿದೆ. ಆ ಸಮಿತಿಗೆ ನಾವು ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಅಂತಿಮ ನಿರ್ಧಾರ ಅವರದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
![ಮೆಟ್ರೋ ದರ ಇಳಿಕೆಯ ಅಂತಿಮ ತೀರ್ಮಾನ ಕೇಂದ್ರ ಸಮಿತಿಯದ್ದು- ಡಿಕೆಶಿ](https://cdn-vishwavani-prod.hindverse.com/media/original_images/DK_Shivakumar_TpbC8zo.jpg)
ಡಿಸಿಎಂ ಡಿ.ಕೆ. ಶಿವಕುಮಾರ್
![Profile](https://vishwavani.news/static/img/user.png)
ಬೆಂಗಳೂರು: ಮೆಟ್ರೋ (Namma Metro) ದರ ಇಳಿಸಬೇಕು ಎಂದು ನಮ್ಮ ಸರ್ಕಾರ ಅಭಿಪ್ರಾಯವನ್ನು ಬಿಎಂಆರ್‌ಸಿಎಲ್ ಗೆ (BMRCL) ತಿಳಿಸಿದ್ದು, ಅಂತಿಮ ತೀರ್ಮಾನ ಕೇಂದ್ರ ಸಮಿತಿಯದ್ದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಗುರುವಾರ ಪ್ರತಿಕ್ರಿಯಿಸಿದರು. ಬಿಎಂಆರ್‌ಸಿಎಲ್ ಮೆಟ್ರೋ ಟಿಕೆಟ್ ದರ ಕಡಿಮೆ ಮಾಡಲು ಮುಂದಾಗಿರುವ ಬಗ್ಗೆ ಕೇಳಿದಾಗ, ʼನಮಗೂ ಅದಕ್ಕೂ ಸಂಬಂಧವಿಲ್ಲ. ಈ ವಿಚಾರ ರಾಜ್ಯ ಸರ್ಕಾರದ ಸುಪರ್ದಿಗೆ ಬರಲ್ಲ, ಇದಕ್ಕಾಗಿಯೇ ಕೇಂದ್ರ ಸಮಿತಿ ರಚಿಸಲಾಗಿದೆ. ಜನರ ಮನವಿ ಆಲಿಸಿ ಮುಖ್ಯಮಂತ್ರಿಗಳು ಮೆಟ್ರೋ ದರ ಇಳಿಸುವ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ಜನಸಾಮಾನ್ಯರು ಹಾಗೂ ಮೆಟ್ರೋ ಹಿತಾಸಕ್ತಿ ಕಾಯಲು ಯಾವ ನಿರ್ಧಾರ ಮಾಡುತ್ತಾರೋ ಮಾಡಲಿ. ಈ ದರ ನಿಗದಿಗೆ ನ್ಯಾಯಾಧೀಶರ ನೇತೃತ್ವದ ಪ್ರತ್ಯೇಕ ಕೇಂದ್ರ ಸಮಿತಿ ಮಾಡಲಾಗಿದೆ. ಆ ಸಮಿತಿಗೆ ನಾವು ನಮ್ಮ ಅಭಿಪ್ರಾಯ ತಿಳಿಸುತ್ತೇವೆ, ಅಂತಿಮ ನಿರ್ಧಾರ ಅವರದುʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಇನ್ನು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ.
ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Namma Metro: ಯದ್ವಾತದ್ವಾ ದರ ಏರಿಸಿದ ಮೆಟ್ರೋಗೇ ಶಾಕ್ ನೀಡಿದ ಬೆಂಗಳೂರಿಗರು, ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಕೆ