Face Recognition: ಶಾಲೆಗಳಲ್ಲಿ ಮುಂದಿನ ವರ್ಷದಿಂದ ʼಫೇಸ್ ರೆಕಗ್ನಿಷನ್ ಹಾಜರಾತಿ ವ್ಯವಸ್ಥೆʼ ಜಾರಿ: ಮಧು ಬಂಗಾರಪ್ಪ
Face Recognition: ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದ ಬಾರೆಹಳ್ಳ ಜಲಾಶಯದ ಕೋಡಿ ದುರಸ್ತಿ ಕಾಮಗಾರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಚಾಲನೆ ನೀಡಿ ಮಾತನಾಡಿದ್ದಾರೆ. ಸರ್ಕಾರದ ಮುಂದಿನ ಅವಧಿಯಲ್ಲಿ ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.


ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಮುಂದಿನ ವರ್ಷದಿಂದ ಚಹರೆ ಗುರುತಿಸುವ ಹಾಜರಾತಿ ವ್ಯವಸ್ಥೆ (Face Recognition) ಜಾರಿ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಬಾರೆಹಳ್ಳಿ ಜಲಾಶಯದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಲಾಗಿದೆ. ಸರ್ಕಾರದ ಮುಂದಿನ ಅವಧಿಯಲ್ಲಿ ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು, ವಿಶೇಷವಾಗಿ ಶಿಕ್ಷಣ ಇಲಾಖೆಯು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಹತ್ವದ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ದಿನನಿತ್ಯ ಶಾಲೆಗೆ ಕಳುಹಿಸಿಕೊಡುವ ಮೂಲಕ ಅವರನ್ನು ಶಿಕ್ಷಣದ ಮುಖ್ಯವಾಹಿನಿಯಿಂದ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಇನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ಮಕ್ಕಳ ಹಾಜರಾತಿಗೆ ಅತ್ಯಾಧುನಿಕ (ಚಹರೆ ಗುರುತಿಸುವ ಹಾಜರಾತಿ ವ್ಯವಸ್ಥೆ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಇದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು.
ಹಲವು ದಶಕಗಳಿಂದ ಅಭಿವೃದ್ಧಿ ಕಾಣದೇ ಉಳಿದಿದ್ದ ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಪುರದಾಳು ಗ್ರಾಮದ ಬಾರೇಹಳ್ಳ ಜಲಾಶಯದ ಕೋಡಿ ದುರಸ್ತಿಯ ಮೂರು ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ಸಚಿವ ಎಸ್.ಮಧು ಬಂಗಾರಪ್ಪ ಅವರು ಚಾಲನೆ ನೀಡಿದರು.
ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಜಲಾಶಯ ಕಾಮಗಾರಿ ನಡೆದಿತ್ತು. ಆ ಅವಧಿಯಿಂದ ಹಲವು ದಶಕಗಳು ಕಳೆದಿದ್ದರೂ ಜಲಾಶಯದ ನಿರ್ವಹಣೆ ಅಥವಾ ಮುಂದುವರಿದ ಕಾಮಗಾರಿ ನಡೆಯದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಹೀಗಾಗಿ ತುಂಗಾ ಮೇಲ್ದಂಡೆ ಯೋಜನಾ ಶಾಖೆಯಿಂದ 3 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ಆರು ತಿಂಗಳ ಅವಧಿಯೊಳಗಾಗಿ ಮುಕ್ತಾಯಗೊಳಿಸಲು ಸೂಚಿಸಲಾಗಿದೆ. ಮಾಡುವ ಕಾಮಗಾರಿಯೂ ಶಾಶ್ವತವಾಗಿರುವಂತೆ, ಗುಣಮಟ್ಟದ್ದಾಗಿರುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಕಳೆದ ಸಾಲಿನಲ್ಲಿಯೇ ಕೈಗೊಳ್ಳಬೇಕಾಗಿದ್ದ ಕಾಮಗಾರಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿ ಆರಂಭಗೊಳ್ಳುತ್ತಿದೆ. ಈ ಪ್ರದೇಶದ ಜನರ ಕೃಷಿ ಚಟುವಟಿಕೆಗಳಿಗೆ ಅತ್ಯವಶ್ಯಕ ಎಂಬುದನ್ನು ಅರಿತು ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದ ಜನರಿಗೆ ತುರ್ತು ಅಗತ್ಯವೆನಿಸಬಹುದಾದ ಕೆಲಸ-ಕಾರ್ಯಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಅವುಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.
ಈ ಭಾಗದ ಬಹುದಿನಗಳಿಂದ ಇತ್ಯರ್ಥವಾಗದೆ ಉಳಿದಿರುವ ಶರಾವತಿ ಸಂತ್ರಸ್ತರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು, ಶೀಘ್ರದಲ್ಲಿ ನಿರೀಕ್ಷಿತ ಫಲಿತಾಂಶ ಬರುವ ನಿರೀಕ್ಷೆಯಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು ಅದರ ನಿರ್ವಹಣೆಗಾಗಿ ಸಮರ್ಥ ವಕೀಲರೊಬ್ಬರನ್ನು ಸರ್ಕಾರದ ಪರವಾಗಿ ವಾದ ಮಂಡಿಸಲು ನೇಮಿಸಲಾಗಿದೆ. ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೂ ಮಾನವೀಯ ನೆಲೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸಮಸ್ಯೆಯನ್ನು ಶಾಶ್ವತ ಪರಿಹಾರಗೊಳಿಸಲು ಯತ್ನಿಸಲಾಗಿದೆ. ಸದ್ಯದಲ್ಲಿ ಈ ಭಾಗದ ಸರ್ವೇ ಕಾರ್ಯಕ್ಕೆ ಅಧಿಕಾರಿಗಳು ಬಂದಲ್ಲಿ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ಅವರು ಸೂಚಿಸಿದರು.
ಈ ಸುದ್ದಿಯನ್ನೂ ಓದಿ | Honey Trap: ಹನಿ ಟ್ರ್ಯಾಪ್ ತನಿಖೆಗೆ ಬಿಜೆಪಿಗಿಂತ ಕಾಂಗ್ರೆಸ್ ಒತ್ತಡವೇ ಜಾಸ್ತಿ
ಈ ವಿಷಯದಲ್ಲಿ ದೊರೆಯುವ ನ್ಯಾಯಾಲಯದ ತೀರ್ಪಿನಂತೆ ಚಕ್ರಾ, ವರಾಹಿ ಸೇರಿದಂತೆ ವಿವಿಧ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿದ್ದು, ಸಂತ್ರಸ್ತರೂ ಕೂಡ ಸರ್ಕಾರದೊಂದಿಗೆ ತಾಳ್ಮೆಯಿಂದ ವ್ಯವಹರಿಸುವಂತೆ ಮನವಿ ಮಾಡಿದ ಅವರು, ಶೀಘ್ರದಲ್ಲಿ ಸಂತ್ರಸ್ತರೆಲ್ಲರಿಗೂ ಹಕ್ಕುಪತ್ರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಅವರು ತಿಳಿಸಿದರು.