ಹಾಸನ, ಡಿ.06: ನಮ್ಮದು ನುಡಿದಂತೆ ನಡೆವ ಸರ್ಕಾರ. ಕೊಟ್ಟ ಮಾತಿನಂತೆ 142 ಭರವಸೆಗಳನ್ನು ಈಗಾಗಲೇ ಈಡೇರಿಸಿದೆ. ನಮ್ಮ ಸರ್ಕಾರದ ಸಾಧನೆಗಳಿಗೆ ಜನರ ಕಣ್ಣುಗಳೇ ಸಾಕ್ಷಿ. ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ನಮ್ಮ ಸರ್ಕಾರದ ಆರನೇ ಗ್ಯಾರಂಟಿ ʼಭೂಮಿ ಗ್ಯಾರಂಟಿʼ ರಾಜ್ಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ಅವರು ಎಲ್ಲರಿಗೂ ತಮ್ಮ ಆಸ್ತಿ ದಾಖಲೆ ಭದ್ರಪಡಿಸಿಕೊಳ್ಳುವ ಅವಕಾಶ ಕಲ್ಪಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು.
ಹಾಸನದಲ್ಲಿ ಶನಿವಾರ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
ದೇವರು ವರ ಹಾಗೂ ಶಾಪ ಎರಡನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಈ ಅವಕಾಶದಲ್ಲಿ ಜನರ ಹೃದಯ ಗೆಲ್ಲಲು ಅನೇಕ ಯೋಜನೆ, ಕಾರ್ಯಕ್ರಮ ರೂಪಿಸಿದ್ದೇವೆ. ಬೆಲೆ ಏರಿಕೆಯಿಂದ ಆರ್ಥಿಕವಾಗಿ ತೊಂದರೆ ಅನುಭವಿಸಿದ್ದ ನಿಮಗೆ ಉಚಿತ ಬಸ್ ಪ್ರಯಾಣ, 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಬಡ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ, 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ನಾವು ಪಕ್ಷಬೇಧ ಮಾಡದೆ ಯೋಜನೆ ನೀಡುತ್ತಿದ್ದೇವೆ ಎಂದು ವಿವರಿಸಿದರು.
ನಿಗದಿತ ಸಮಯದೊಳಗೆ ನೀಲಿ ಮೆಟ್ರೋ ಮಾರ್ಗ ಪೂರ್ಣ: ಡಿ.ಕೆ. ಶಿವಕುಮಾರ್
ನಮ್ಮಯೋಜನೆಗಳ ಬಗ್ಗೆ ಕೆಲವರು ಟೀಕೆ ಮಾಡುತ್ತಾರೆ. ನಾನು ಅವರಿಗೆ ಉತ್ತರವಾಗಿ ಒಂದು ಉದಾಹರಣೆ ನೀಡುತ್ತೇನೆ. ಅಕ್ಬರ್ ಸತ್ಯಕ್ಕೂ ಸುಳ್ಳಿಗೂ ಇರುವ ಅಂತರವೆಷ್ಟು ಎಂದು ಕೇಳುತ್ತಾನೆ. ಅದಕ್ಕೆ ಬೀರ್‌ಬಲ್ ಕೇವಲ ನಾಲ್ಕು ಬೆರಳುಗಳ ಅಂತರ ಸ್ವಾಮಿ, ಈ ಕಣ್ಣಲ್ಲಿ ನೋಡುವುದು ಸತ್ಯ, ಕಿವಿಯಲ್ಲಿ ಕೇಳುವುದು ಸುಳ್ಳು. ಈ ಕಣ್ಣು ಹಾಗೂ ಕಿವಿಯ ಮಧ್ಯೆ ಇರುವುದು ನಾಲ್ಕು ಬೆರಳಿನ ಅಂತರ ಎಂದು ವಿವರಿಸುತ್ತಾರೆ. ಹೀಗಾಗಿ ನಮ್ಮ ಸರ್ಕಾರದ ಕೆಲಸಗಳನ್ನು ಜನರು ಕಣ್ಣಾರೆ ಕಾಣುತ್ತಿದ್ದಾರೆಯೇ ಹೊರತು ಕೇವಲ ಕಿವಿಯಲ್ಲಿ ಕೇಳುತ್ತಿಲ್ಲ ಎಂದು ವಿವರಿಸಿದರು.

ಇದು ಅಭಿವೃದ್ಧಿಯ ಸರ್ಕಾರ. ಸರ್ವರಿಗೂ ಸಮಪಾಲು, ಸಮಬಾಳು, ಸರ್ವರಿಗೂ ನೆಮ್ಮದಿ, ಸರ್ವರಿಗೂ ಅಭಿವೃದ್ಧಿ ನೀಡುವ ಸರ್ಕಾರ ನಮ್ಮದು. ನಾವು ಒಂದು ನಿಮಿಷದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಒಂದು ನಿಮಿಷದಲ್ಲಿ ಜನರ ಅಭಿವೃದ್ಧಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ನಾವು ಅದರಂತೆ ಕೆಲಸ ಮಾಡುತ್ತಿದ್ದೇವೆ ಎಂದರು.
ತಾಯಿ ಹಾಸನಾಂಬೆ ದೇವಿಗೆ ನಮಿಸಲು ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಈ ಜಿಲ್ಲೆಗೆ ಬಂದಿದ್ದೆವು. ಕೃಷ್ಣ ಬೈರೇಗೌಡರು ಈ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ನಂತರ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಜನರು ಬಂದು ದೇವಿ ದರ್ಶನ ಪಡೆದಿದ್ದಾರೆ. ಎರಡು ಮೂರು ತಿಂಗಳ ಹಿಂದೆ ಅರಸೀಕೆರೆಗೆ ಹೋದಾಗ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ದರ್ಶನ ಮಾಡುವ ಭಾಗ್ಯ ದೊರೆತಿತ್ತು ಎಂದರು.
ನಾವು ಹುಟ್ಟುವಾಗ ಖಾಲಿ ಕೈಯಲ್ಲಿ ಬರುತ್ತೇವೆ. ಹೋಗುವಾಗ ಪಾಪ ಪುಣ್ಯಗಳೊಂದಿಗೆ ಹೋಗುತ್ತೇವೆ. ಅದೇ ರೀತಿ ನಮ್ಮ ಸರ್ಕಾರ ಪ್ರತಿ ಹಂತದಲ್ಲೂ ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಬಂದಾಗ ನಾನು ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು. ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದರು.
ಜನರ ಜೇಬಿಗೆ 1 ಲಕ್ಷ ಕೋಟಿ ಹಾಕಿದ್ದೇವೆ
ನಮ್ಮ ಸರ್ಕಾರ ಗ್ಯಾರಂಟಿ ರೂಪದಲ್ಲಿ 1 ಲಕ್ಷ ಕೋಟಿ ಹಣವನ್ನು ಜನರ ಜೇಬಿಗೆ ಹಾಕಿದೆ. ರೈತರ ಪಂಪ್ ಸೆಟ್‌ಗೆ ನೀಡಲಾಗುವ ಉಚಿತ ವಿದ್ಯುತ್‌ಗೆ ಸರ್ಕಾರ 20 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಇಂದಿರಾ ಗಾಂಧಿ ಅವರ ಕಾಲದಲ್ಲಿ ಪಿಂಚಣಿ ಯೋಜನೆ, ಉಳುವವನಿಗೆ ಭೂಮಿ, ಅರಣ್ಯ ಭೂಮಿ ಸಕ್ರಮ ಸೇರಿದಂತೆ ಅನೇಕ ಯೋಜನೆ ನೀಡಿದೆವು. ಸಿಎಂ ಹಾಗೂ ನನ್ನ ಪಕ್ಷ ನನಗೆ ನೀರಾವರಿ ಇಲಾಖೆ ಜವಾಬ್ದಾರಿ ನೀಡಿದೆ. ಈ ಹಿಂದೆ ಹಾಸದ ಜಿಲ್ಲಾಧಿಕಾರಿ ಹಾಗೂ ಎಸ್ ಪಿಗೆ ಈ ಇಬ್ಬರೂ ಹೆಣ್ಣುಮಕ್ಕಳಿಗೆ ನಾನು ಅಭಿನಂದನೆ ಸಲ್ಲಿಸಲೇ ಬೇಕು. ಇಂದು ಎತ್ತಿನಹೊಳೆ ನೀರು ಆಚೆ ಬರಲು ಈ ಇಬ್ಬರು ಅಧಿಕಾರಿಗಳು ಕೊಟ್ಟ ಸಹಕಾರ ಕಾರಣ. ಅದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಶ್ಲಾಘಿಸಿದರು.
ಮೇಕೆದಾಟು, ಎತ್ತಿನಹೊಳೆ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ:
ಎತ್ತಿನಹೊಳೆ ನೀರನ್ನು ನಾವು ಆಚೆ ತಂದಿದ್ದೇವೆ. ಈ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯಿಂದ ಕೆಲವು ತೊಡಕು ಎದುರಾಗಿದೆ. ಈ ಅಡಚಣೆ ಬಗೆಹರಿದ ಮೂರ್ನಾಲ್ಕು ತಿಂಗಳಲ್ಲಿ ತುಮಕೂರಿನವರೆಗೂ ಈ ನೀರನ್ನು ಹರಿಸಲಾಗುವುದು. ಕಾವೇರಿ ಜಲಾನಯನ ಪ್ರದೇಶದಲ್ಲಿ ಹೇಮಾವತಿ ನೀರು ಕೂಡ ಇದೆ. ನಾವೆಲ್ಲರೂ ಸೇರಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ನಮ್ಮ ನೀರು ನಮ್ಮ ಹಕ್ಕು ಎಂದು ಹೆಜ್ಜೆ ಹಾಕಿದೆವು. ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ಮಾರ್ಗದರ್ಶನ ಹಾಗೂ ದಿಟ್ಟ ನಿರ್ಧಾರದಿಂದ ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸಿಕೊಟ್ಟಿದೆ. ಮೇಕೆದಾಟು ಯೋಜನೆ ನ್ಯಾಯಾಲಯದಲ್ಲಿ ತೀರ್ಮಾನವಾಗುವುದಿಲ್ಲ, ಇದರ ತಾಂತ್ರಿಕ ಅಂಶ ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ತೀರ್ಮಾನವಾಗಬೇಕು. ಹೀಗಾಗಿ ನ್ಯಾಯಾಲಯಕ್ಕೆ ಅಲೆಯಬೇಡಿ ಎಂದು ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ ಆದೇಶ ನೀಡಿದೆ. ನಿಮ್ಮೆಲ್ಲರ ಪರವಾಗಿ ನಾನು ಇಲ್ಲಿಂದಲೇ ಸುಪ್ರೀಂ ಕೋರ್ಟಿಗೆ ನಮಿಸುತ್ತೇನೆ” ಎಂದು ಹೇಳಿದರು.
ಮೇಕೆದಾಟು ಯೋಜನೆ ಆದರೆ ಹಾಸನ, ಮಂಡ್ಯ, ಮೈಸೂರು ಚಾಮರಾಜನಗರ ಸೇರಿದಂತೆ ಈ ಜಲಾನಯನ ಪ್ರದೇಶಕ್ಕೆ ಕುಡಿಯಲು ನೀರು ಸಿಗುತ್ತದೆ. ಕಷ್ಟಕಾಲದಲ್ಲಿ 64 ಟಿಎಂಸಿ ನೀರನ್ನು ಮೇಕೆದಾಟಿನಲ್ಲಿ ಶೇಖರಿಸಿ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದೆ. ಈ ವಿಚಾರವಾಗಿ ನಾನು ಹಾಗೂ ಸಿಎಂ ಚರ್ಚೆ ಮಾಡಿದ್ದು, ಇದರ ಕಾರ್ಯರೂಪಕ್ಕೆ ಮುಂದಾಗಿದ್ದೇವೆ ಎಂದರು.
ನಮ್ಮ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ
ಮನುಷ್ಯನ ಬದುಕು ಶಾಶ್ವತವಲ್ಲ, ನಾವು ಬಿಟ್ಟು ಹೋಗುವ ಕೆಲಸಗಳು ಮಾತ್ರ ಶಾಶ್ವತ. ಕೃಷ್ಣ ಬೈರೇಗೌಡರ ಮುಖಂಡತ್ವದಲ್ಲಿ ನಮ್ಮ ಸರ್ಕಾರದ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ ರಾಜ್ಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ಎಲ್ಲರಿಗೂ ತಮ್ಮ ಆಸ್ತಿ ದಾಖಲೆ ಭದ್ರಪಡಿಸಿಕೊಳ್ಳುವ ಅವಕಾಶ ಕಲ್ಪಿಸಿದ್ದಾರೆ. ಹಾಸನದಲ್ಲಿ ಅನೇಕ ಯೋಜನೆ ರೂಪಿಸುತ್ತಿದ್ದಾರೆ. "ನಮ್ಮ ಮಾತು ನಿಧಾನವಾಗಿರಬೇಕು, ಕಾಯಕ ಪ್ರಧಾನವಾಗಿರಬೇಕು" ಎಂದು ಹಿರಿಯರು ಹೇಳಿದ್ದಾರೆ ಎಂದರು.
ಕೃಷ್ಣ ಬೈರೇಗೌಡರು ಸುಮಾರು 50 ಸಾವಿರ ಜನರಿಗೆ ಅವರ ಆಸ್ತಿ ದಾಖಲೆಗಳನ್ನು ಸರಿಮಾಡಿ ಕೊಟ್ಟಿದ್ದಾರೆ. ವಿಜಯನಗರದಲ್ಲಿ 1,11,11,111 ಜನ ತಾಂಡಾ ಜನರಿಗೆ ತಮ್ಮ ಆಸ್ತಿ ದಾಖಲೆಗಳನ್ನು ನೀಡಿದ್ದೇವೆ. ನಮ್ಮ ಹುಟ್ಟು ನಮ್ಮ ಕೈಯಲ್ಲಿ ಇಲ್ಲ, ಆದರೆ ನಾವು ಮುಟ್ಟಬೇಕಾದ ಗುರಿ ನಮ್ಮ ಕೈಯಲ್ಲೇ ಇದೆ. ನಾವು ಈಗಾಗಲೇ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಆಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದು, ಇದೇ ಮಾರ್ಗದಲ್ಲಿ ಜನರ ಕಲ್ಯಾಣ ಮಾಡಿಕೊಂಡು ಈ ಸರ್ಕಾರ ಮುಂದೆ ಸಾಗಲಿದೆ ಎಂದು ಭರವಸೆ ನೀಡಿದರು.
ಈ ಸಂಸದ ನಿಮ್ಮ ಗೌರವಕ್ಕೆ ಧಕ್ಕೆ ತರುವುದಿಲ್ಲ
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ನಾವು ನಂಬಿದ್ದೇವೆ. ಏನೇ ಸಮಸ್ಯೆ ಇದ್ದರೂ ಹಾಸನಕ್ಕೆ ಹೊಸ ರೂಪ ನೀಡಲು ನಾವು ಬದ್ಧವಾಗಿದ್ದೇವೆ. ಈ ಹಿಂದೆ ಇದ್ದ ಆಡಳಿತ ಮಾದರಿಗೆ ಕೊನೆ ಹಾಡಿದ್ದೇವೆ. ಇದು ನಿಮ್ಮ ಹಾಗೂ ಜನರ ಸರ್ಕಾರ. ಲೋಕಸಭೆ ಚುನಾವಣೆಯಲ್ಲಿ ನೀವು ನಮ್ಮ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿ ಶಕ್ತಿ ತುಂಬಿದ್ದೀರಿ, ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಸಂಸದ ನಿಮ್ಮ ಗೌರವಕ್ಕೆ ಎಂದೂ ಧಕ್ಕೆ ತರುವುದಿಲ್ಲ. ನಿಮ್ಮ ಸ್ವಾಭಿಮಾನದ ಬದುಕಿಗೆ ಶಕ್ತಿ ತುಂಬುವ ಕುಟುಂಬದವರಾಗಿದ್ದಾರೆ. ನೀರಾವರಿ ಇಲಾಖೆ ಮಾತ್ರವಲ್ಲ, ಎಲ್ಲಾ ಇಲಾಖೆಯ ಸಚಿವರು ಇಲ್ಲಿಗೆ ಬಂದಿರುವುದು ನಿಮ್ಮ ಕೈ ಬಲಪಡಿಸಲು. ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಲು ಬಂದಿದ್ದೇವೆ” ವಿಶ್ವಾಸ ತುಂಬಿದರು.
ನಾರಾಯಣಸ್ವಾಮಿ ಮನೆಯಿಂದಲೇ ವಾಚ್ ಕದ್ದಿದ್ದೇನೆ: ಡಿ.ಕೆ. ಶಿವಕುಮಾರ್ ಲೇವಡಿ
ಇಂದು ನನ್ನ ಭೂಮಿ ಹೆಸರಿನಲ್ಲಿ ದರ್ಖಾಸ್ತು, ಪೋಡಿ ದಾಖಲೆ ನೀಡಲಾಗುತ್ತಿದೆ. ಇದು ಸಾಮಾನ್ಯವಾದ ಕೆಲಸವಲ್ಲ. ಈ ಹಿಂದೆ ಒಂದು ಪೋಡಿ ಮಾಡಿಸಲು ಎಷ್ಟು ಲಂಚ ಕೊಡಬೇಕಿತ್ತು ಎಂದು ರೈತರಿಗೆ ಮಾತ್ರ ಗೊತ್ತು. ಈ ಸಮಸ್ಯೆಯನ್ನು ನಮ್ಮ ಸರ್ಕಾರ ಬಗೆಹರಿಸಿಕೊಂಡು ಬರುತ್ತಿದೆ. ನಿಮ್ಮ ವಿಶ್ವಾಸ ಸದಾ ನಮ್ಮ ಮೇಲಿರಲಿ ಎಂದು ತಿಳಿಸಿದರು.