ನಾಪತ್ತೆ ಕೇಸ್ ಸುಖಾಂತ್ಯ; ಪ್ರಿಯಕರನನ್ನು ಬಿಟ್ಟು ಗಂಡನ ಮನೆಗೆ ಹೋಗಲು ಒಪ್ಪಿದ ಪ್ರಿಯಾಂಕ
ನಾಪತ್ತೆ ನಾಟಕವಾಡಿ ಪ್ರಿಯಕರ ಡೇವಿಡ್ ಜತೆ ಪರಾರಿಯಾಗಿದ್ದ ವಿವಾಹಿತ ಮಹಿಳೆ ಪ್ರಿಯಾಂಕ ಕೊನೆಗೂ ಗಂಡನ ಮನೆ ಸೇರಲು ಒಪ್ಪಿದ್ದಾಳೆ. ಹಾಸನದ ಸಾಂತ್ವನ ಕೇಂದ್ರದಿಂದ ತವರು ಮನೆಗೆ ಹೋಗಿ, ಅಲ್ಲಿಂದ ಗಂಡ ರುದ್ರೇಶ್ ಮನೆಗೆ ಹೋಗಲು ಒಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಪ್ರಿಯಕರನ ಜತೆ ಪರಾರಿಯಾಗಿದ್ದ ಪ್ರಿಯಾಂಕ. -
ಹಾಸನ: ಕುಣಿಗಲ್ ಮೂಲದ ಮಹಿಳೆ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ನಾಪತ್ತೆ ನಾಟಕವಾಡಿ ಪ್ರಿಯಕರ ಡೇವಿಡ್ ಜತೆ ಪರಾರಿಯಾಗಿದ್ದ ಪ್ರಿಯಾಂಕ ಕೊನೆಗೂ ಗಂಡನ ಮನೆಗೆ ವಾಪಸ್ ಹೋಗಲು ನಿರ್ಧರಿಸಿದ್ದಾಳೆ. ಸಾಂತ್ವನ ಕೇಂದ್ರದಲ್ಲಿ ಸಂಧಾನದ ಬಳಿಕ ಗಂಡನ ಮನೆ ಸೇರಲು ಮಹಿಳೆ ಒಪ್ಪಿದ್ದಾಳೆ.
ಫೆಬ್ರವರಿ 12ರಂದು ಚಿಕ್ಕಮಗಳೂರಿಗೆ ಸಂಬಂಧಿಕರ ಮದುವೆಗೆ ಪ್ರಿಯಾಂಕ ತೆರಳಿದ್ದಳು. ಬಳಿಕ ಆಕೆ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಳು. ಈ ನಡುವೆ ಫೆಬ್ರವರಿ 14ರಂದು ಹಾಸನದ ಕಲ್ಕೆರೆ ಕೆರೆ ಬಳಿ ಪ್ರಿಯಾಂಕಳ ಬಟ್ಟೆ, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿತ್ತು. ಇದರಿಂದ ಕೊಲೆ ಶಂಕೆ ಉಂಟಾಗಿ, ಕುಟುಂಬಸ್ಥರಲ್ಲಿ ಆತಂಕ ಉಂಟಾಗಿತ್ತು.
ಪೊಲೀಸರು ತನಿಖೆ ತೀವ್ರಗೊಳಿಸಿದಾಗ, ನಾಪತ್ತೆ ನಾಟಕವಾಡಿ ಪ್ರಿಯಕರ ಡೇವಿಡ್ ಜತೆ ಕುಣಿಗಲ್ ಕಡೆ ಪ್ರಿಯಾಂಕ ತೆರಳಿರುವುದು ಗೊತ್ತಾಗಿತ್ತು. ಅದೇ ದಿನ ರಾತ್ರಿ ಡೇವಿಡ್ ವಾಸವಿದ್ದ ಬಾಡಿಗೆ ಮನೆಯಲ್ಲಿ ಪ್ರಿಯಾಂಕ ಪತ್ತೆಯಾಗಿದ್ದಳು. ಬಳಿಕ ಪೊಲೀಸರು ಆಕೆಯನ್ನು ಹಾಸನದ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದಿದ್ದರು.
ಸಾಂತ್ವನ ಕೇಂದ್ರ ಪತಿ ರುದ್ರೇಶ್ ತೆರಳಿ ಮಾತುಕತೆ ನಡೆಸಿದ್ದಾರೆ. ಆದರೆ, ಮೊದಲು ಗಂಡನ ಜತೆ ಹೋಗುವುದಕ್ಕೆ ನಿರಾಕರಿಸಿದ್ದ ಪ್ರಿಯಾಂಕ, ಇದೀಗ ಹಲವು ದಿನಗಳ ನಂತರ ಒಪ್ಪಿಗೆ ಸೂಚಿಸಿದ್ದಾಳೆ. ಸುಮಾರು ಒಂದೂವರೆ ಗಂಟೆ ಪತಿ ರುದ್ರೇಶ್ ಜತೆ ಪ್ರಿಯಾಂಕ ಚರ್ಚೆ ನಡೆಸಿದ್ದು, ಈ ವೇಳೆ ತಪ್ಪಿನ ಅರಿವಾಗಿ ಪತಿ ರುದ್ರೇಶ್ ಮನೆ ಸೇರಲು ಪ್ರಿಯಾಂಕ ಮುಂದಾಗಿದ್ದಾಳೆ.
ಗಂಡನ ಜತೆ ಇರುವುದು ಇಷ್ಟವಿರಲಿಲ್ಲ; ಪ್ರಿಯಕರನ ಜತೆ ಎಸ್ಕೇಪ್ ಆಗಿದ್ದ ಪ್ರಿಯಾಂಕ ಸಿಕ್ಕಿಬಿದ್ದಿದ್ದು ಹೇಗೆ?
ಮಗ ಹಾಗೂ ಕುಟುಂಬದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಪತಿ ರುದ್ರೇಶ್ ಪ್ರಿಯಾಂಕಳ ತಪ್ಪನ್ನು ಮನ್ನಿಸಿ ಮತ್ತೆ ಜತೆಯಾಗಿ ಬದುಕಲು ನಿರ್ಧರಿಸಿದ್ದಾನೆ. ಇದರಿಂದ ಪ್ರಭಾವಿತಳಾದ ಪ್ರಿಯಾಂಕ, ಪ್ರಿಯಕರ ಡೇವಿಡ್ ಜತೆ ಹೋಗುವ ನಿರ್ಧಾರವನ್ನು ಕೈಬಿಟ್ಟು, ಮತ್ತೆ ಗಂಡನ ಜತೆ ಜೀವನ ಮುಂದುವರಿಸಲು ಒಪ್ಪಿಗೆ ನೀಡಿದ್ದಾಳೆ. ಕೊನೆಗೂ ಸಾಂತ್ವನ ಕೇಂದ್ರದಿಂದ ಪ್ರಿಯಾಂಕ ತನ್ನ ತವರು ಮನೆಗೆ ತೆರಳಿದ್ದು, ಅಲ್ಲಿಂದ ಗಂಡನ ಮನೆ ಸೇರಲು ತೀರ್ಮಾನಿಸಿದ್ದಾಳೆ.