ಹಾವೇರಿ ಜಿಲ್ಲಾದ್ಯಂತ ಈದ್ ಮಿಲಾದ್ ಸಂಭ್ರಮ; ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿ
Haveri News: ಹಾವೇರಿ ಜಿಲ್ಲಾದ್ಯಂತ ಬುಧವಾರ ಪ್ರವಾದಿ ಮಹಮ್ಮದ್ ಅವರ ಜನ್ಮದಿನದ ಅಂಗವಾಗಿ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಈದ್ ಮಿಲಾದ್ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಬಾಂಧವರು ಪಾಲ್ಗೊಂಡು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು
-
ಹಾವೇರಿ, ಆ.26: ಪ್ರವಾದಿ ಮಹಮ್ಮದ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಹಾವೇರಿ ನಗರ ಸೇರಿ ಜಿಲ್ಲಾದ್ಯಂತ ಬುಧವಾರ ಪವಿತ್ರ ಈದ್ ಮಿಲಾದ್ (Eid-e-Milad 2026) ಹಬ್ಬವನ್ನು ಮುಸ್ಲಿಮರು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಿದರು. ಈದ್ ಮಿಲಾದ್ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಂಡು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಹಾವೇರಿ ನಗರದ ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರು, ಬ್ಯಾಡಗಿಯಲ್ಲಿ ಶಾಸಕ ಬಸವರಾಜ ಶಿವಣ್ಣನವರ, ಶಿಗ್ಗಾಂವ್ ಶಾಸಕ ಯಾಶೀರಖಾನ್ ಪಠಾಣ, ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ, ಹಿರೇಕೇರೂರ ಶಾಸಕ ಯು.ಬಿ ಬಣಕಾರ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಿ, ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಪ್ರವಾದಿ ಮಹಮ್ಮದ್ ಅವರ ಶಾಂತಿ, ಸಹಬಾಳ್ವೆ, ಮಾನವೀಯತೆ ಹಾಗೂ ಸಹೋದರತ್ವದ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ವೇಳೆ ಮುಸ್ಲಿಂ ಸಮಾಜದ ನೂರಾರು ಮೌಲ್ವಿಗಳು, ಧರ್ಮಗುರುಗಳು, ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.