Maize Procurement: ಮೆಕ್ಕೆಜೋಳ ಖರೀದಿ ಮಿತಿ 50 ಕ್ವಿಂಟಲ್‌ಗೆ ಹೆಚ್ಚಿಸಿದ ರಾಜ್ಯ ಸರ್ಕಾರ; ಹಾವೇರಿಯಲ್ಲಿ ರೈತರ ಸಂಭ್ರಮಾಚರಣೆ
Maize growers protest: ಹಾವೇರಿ ಸೇರಿ ವಿವಿಧೆಡೆ ಪ್ರತಿಭಟನೆ ನಡೆಸಿದ್ದ ಮೆಕ್ಕೆಜೋಳ ಬೆಳೆಗಾರರು, ಪ್ರತಿ ರೈತನಿಂದ 100 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಬೇಕು, ಪ್ರತಿ ಕ್ವಿಂಟಲ್‌ಗೆ 3000 ರೂ. ನೀಡಬೇಕು ಎಂದು ಆಗ್ರಹಿಸಿದ್ದರು. ಆದರೆ, ಇದೀಗ 50 ಕ್ವಿಂಟಲ್ ಖರೀದಿಗೆ ಸರ್ಕಾರ ಒಪ್ಪಿದೆ.
ಹಾವೇರಿಯಲ್ಲಿ ರೈತರ ಸಂಭ್ರಮಾಚರಣೆ. -
ಹಾವೇರಿ, ಡಿ.7: ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಪ್ರಮಾಣ ಹೆಚ್ಚಿಸಲು (Maize Procurement) ಒತ್ತಾಯಿಸಿ ಹಾವೇರಿ ಸೇರಿ ರಾಜ್ಯದ ವಿವಿಧೆಡೆ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಪ್ರತಿ ರೈತನಿಂದ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವುದಾಗಿ ಭಾನುವಾರ ಆದೇಶ ಹೊರಡಿಸಿದೆ. ಇದರಿಂದ ಹಾವೇರಿ ಜಿಲ್ಲೆ ಸೇರಿ ರಾಜ್ಯಾದ್ಯಂತ ರೈತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯೊಂದರಲ್ಲಿಯೇ ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚಿನ ಕ್ಷೇತ್ರದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿಯೂ ಅಂದಾಜು 15 ಲಕ್ಷಕ್ಕೂ ಹೆಚ್ಚಿನ ಮೆಟ್ರಿಕ್ ಟನ್ ಗೋವಿನಜೋಳ ಉತ್ಪಾದನೆ ಮಾಡಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಮೆಕ್ಕೆಜೋಳ ದರದಲ್ಲಿ ಹೆಚ್ಚಿನ ಕುಸಿತ ಕಂಡಿತ್ತು. ಹೀಗಾಗಿ ಮೆಕ್ಕೆಜೋಳ ಬೆಳೆಗಾರರು, ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಹಾವೇರಿ ಡಿಸಿ ಕಚೇರಿ ಸೇರಿ ಎಂಟು ತಾಲೂಕಿನ ತಹಸೀಲ್ದಾರ್ ಕಚೇರಿಗಳ ಮುಂದೆ ಇತ್ತೀಚೆಗೆ ಬೃಹತ್ ಧರಣಿ ನಡೆಸಿದ್ದರು. ಅಲ್ಲದೇ ಡಿ.8ರಂದು ಮೋಟೆಬೆನ್ನೂರು ಬಳಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.
ಪ್ರತಿ ಕ್ವಿಂಟಲ್‌ಗೆ 2,400 ರೂ. ನೀಡಿ ಬೆಂಬಲ ಬೆಲೆಯಡಿ ಪ್ರತಿ ರೈತನಿಂದ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಮಾಡಲು ಜಿಲ್ಲಾಡಳಿತ ಜೋಳ ಖರೀದಿ ಕೇಂದ್ರಗಳನ್ನು ತೆರೆದಿತ್ತು. ಆದರೆ, ರೈತರು 100 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಬೇಕು, ಪ್ರತಿ ಕ್ವಿಂಟಲ್‌ಗೆ 3000 ರೂ. ನೀಡಬೇಕು ಎಂದು ಆಗ್ರಹಿಸಿದ್ದರು. ಆದರೆ, ಇದೀಗ 50 ಕ್ವಿಂಟಲ್ ಖರೀದಿಗೆ ಸರ್ಕಾರ ಒಪ್ಪಿದೆ.

ರೈತರ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಪ್ರತಿ ಕ್ವಿಂಟಲ್ ಮೆಕ್ಕೆಜೋಳವನ್ನು ಎಂಎಸ್‌ಪಿ ದರ 2400 ರೂ.ನಂತೆ ಖರೀದಿಸುವುದಾಗಿ ಘೋಷಣೆ ಮಾಡಿ, ಖರೀದಿ ಕೇಂದ್ರಗಳಲ್ಲಿ ನೋಂದಣಿ ಕಾರ್ಯವನ್ನು ಚುರುಕು ಮಾಡಿದೆ.
ದಲಿತರು ಮಾತ್ರವಲ್ಲದೆ ಎಲ್ಲಾ ಶೋಷಿತರ ಹಕ್ಕುಗಳಿಗಾಗಿ ಅಂಬೇಡ್ಕರ್ ಹೋರಾಡಿದರು: ಸಿಎಂ
ಭಾನುವಾರ ಆದೇಶ ಹೊರ ಬರುತ್ತಲೇ, ರೈತರು ಹಾವೇರಿ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಾಲತೇಶ ಪೂಜಾರ, ರೈತ ಸಂಘದ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಕಬ್ಬಾರ, ಹನುಮಂತಪ್ಪ ದೀವಗಿಹಳ್ಳಿ, ಭುವನೇಶ್ವರ ಶಿಡ್ಲಾಪುರ, ಪ್ರಕಾಶ ಬಾರ್ಕಿ, ರವಿಂದ್ರಗೌಡ ಪಾಟೀಲ್, ವೀರಣ್ಣ ಹಲಗೇರಿ, ರಾಜಶೇಖರ ದೂದಿಹಳ್ಖಿ, ಸೇರಿದಂತೆ ರೈತ ಸಂಘಟನೆಯ ಸಾವಿರಾರು ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.