ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸರ್ಕಾರಿ ವೈದ್ಯನ ನಿರ್ಲಕ್ಷ್ಯದಿಂದ ಸಾವು ಬದುಕಿನ ನಡುವೆ ಬಾಣಂತಿ ಹೋರಾಟ; ಹಾವೇರಿಯಲ್ಲಿ ದೂರು ದಾಖಲು

Haveri News: ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯ ಡಾ. ಪ್ರದೀಪ ಬಿ ಅವರ ವಿರುದ್ಧ ಹಾವೇರಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆರಿಗೆ ನಂತರ ಸೂಕ್ತ ಚಿಕಿತ್ಸೆ ನೀಡದ ಕಾರಣ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ. ಈ ಬಗ್ಗೆ ಪತಿ ದೂರು ನೀಡಿದ್ದಾರೆ.

ಹೆರಿಗೆ ಬಳಿಕ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ; ವೈದ್ಯನ ವಿರುದ್ಧ ದೂರು

ಹಾವೇರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ. -

Prabhakara R
Prabhakara R Jun 12, 2026 10:53 PM

ಹಾವೇರಿ: ಹೆರಿಗೆ ನಂತರ ಸೂಕ್ತ ಚಿಕಿತ್ಸೆ ನೀಡದ ಕಾರಣ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ ಎಂದು ಆರೋಪಿಸಿ ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (Haveri Mother and Child Hospital) ವೈದ್ಯನ ವಿರುದ್ಧ ದೂರು ದಾಖಲಾಗಿದೆ. ವೈದ್ಯನ ನಿರ್ಲಕ್ಷ್ಯದಿಂದ ತನ್ನ ಪತ್ನಿ ಸಾವು ಬದುಕಿನ ನಡುವೆ ಹೋರಾಟ ಮಾಡುವಂತಾಗಿದ್ದು, ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚವಾಗಿದೆ, ತಮಗೆ ನ್ಯಾಯ ಕೊಡಿಸಬೇಕು ಎಂದು ಎಂದು ಪತಿ ಆಗ್ರಹಿಸಿದ್ದಾರೆ.

ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯ ಡಾ. ಪ್ರದೀಪ ಬಿ ಅವರ ವಿರುದ್ಧ ಹಾವೇರಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣ ಹಿನ್ನೆಲೆ

ಹಾನಗಲ್‌ ತಾಲೂಕಿನ ಹಸನಾಬಾದಿ ಗ್ರಾಮದ ಗರ್ಭಿಣಿ ಸುಧಾ ರಾಘವೇಂದ್ರ ಹನುಮನಹಳ್ಳಿ ಎಂಬುವವರು ಹೆರಿಗೆಗಾಗಿ ಮೇ 22 ರಂದು ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಮರು ದಿನ ಡಾ. ಪ್ರವೀಣ. ಬಿ ಅವರು ಸಿಸೇರಿಯನ್ ಹೆರಿಗೆ ಮಾಡಿಸಿದ್ದರು. ಹೆರಿಗೆ ನಂತರ ಹೊಟ್ಟೆಗೆ ಸರಿಯಾಗಿ ಸ್ಟಿಚ್ ಹಾಕದ ಹಿನ್ನೆಲೆಯಲ್ಲಿ ಬಾಣಂತಿಯು ಹೊಟ್ಟೆ ಗಾಯದ ಇನ್‌ಫೆಕ್ಷನ್‌ನಿಂದ ಉಲ್ಬಣಿಸಿ ನರಳಾಡಿದ್ದಾಳೆ. ಆಸ್ಪತ್ರೆಯಿಂದ ಮನೆಗೆ ಹೋದವರು ಮತ್ತೆ ಅದೇ ವೈದ್ಯರ ಬಳಿ ಬಂದು ವಿಚಾರಿಸಿದಾಗ ನಮ್ಮಲ್ಲಿ ಇವರಿಗೆ ಚಿಕಿತ್ಸೆ ನೀಡಲು ಆಗಲ್ಲ. ಹುಬ್ಬಳ್ಳಿ ಕೆಎಂಸಿಗೆ ಕರೆದುಕೊಂಡು ಹೋಗಿ ಎಂದು ಕುಟುಂಬದವರಿಗೆ ಹೇಳಿ ಕೈತೊಳಿದುಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಪ್ರಾಣ ಉಳಿಸಿಕೊಳ್ಳಲು ಪತ್ನಿ ಸುಧಾಳನ್ನು ತಕ್ಷಣವೇ ಜೂ 2 ರಂದು ಶಿರಸಿ ವಾತ್ಸಲ್ಯ ಖಾಸಗಿ ಆಸ್ಪತ್ರೆ ಕರೆದುಕೊಂಡು ಹೋಗಿ ತುರ್ತು ಚಿಕಿತ್ಸೆ ಕೊಡಿಸಿದ್ದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಚೇತರಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲಾ ಆಸ್ಪತ್ರೆ ವೈದ್ಯನ ನಿರ್ಲಕ್ಷ್ಯದಿಂದ ಬಾಣಂತಿ ಸುಧಾ ಕುಟುಂಬ ಲಕ್ಷಾಂತರ ಹಣವನ್ನು ಖಾಸಗಿ ಆಸ್ಪತ್ರೆಗೆ ಕಟ್ಟಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಲ್ಲದೇ ಪದೇಪದೆ ಆಪರೇಷನ್‌ನಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ.

ಈ ಹಿನ್ನೆಲೆಯಲ್ಲಿ ಡಾ.ಪ್ರದೀಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳೆಯ ಪತಿ ರಾಘವೇಂದ್ರ ಹನುಮನಹಳ್ಳಿ ಹಾವೇರಿ ಶಹರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಹಾವೇರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಸರಿಯಾದ ಚಿಕಿತ್ಸೆ ನೀಡುವುದಿಲ್ಲ. ಇಲ್ಲಿ ಹಣ ಕೊಟ್ಟರೆ ಒಂದು ರೀತಿ, ಹಣ ಕೊಡದಿದ್ದರೆ ಒಂದು ರೀತಿ ನೋಡುತ್ತಾರೆ. ಇದರಿಂದ ಬಡಜನರ ಪ್ರಾಣಕ್ಕೆ ಕುತ್ತು ಬರುತ್ತಿದೆ. ಈ ಬಗ್ಗೆ ತಕ್ಷಣವೇ ಜಿಲ್ಲಾಡಳಿತ ವಿಚಾರಣೆ ನಡೆಸಿ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಬೇಕು, ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಆಗ್ರಹಿಸಿದ್ದಾರೆ.