H.D.Kumaraswamy: ಕುಂಬಳಕಾಯಿ ಕಳ್ಳನಿಗೆ ಕೋಪ ಬಂದಿದೆ; ಹೆಸರೇಳದೆ ಕುಮಾರಸ್ವಾಮಿ ಟೀಕಿಸಿದ್ದು ಯಾರನ್ನು?
H.D.Kumaraswamy: ʼʼಮರ್ಯಾದೆಗೇಡಿ, ಕಿಡಿಗೇಡಿ ನನ್ನ ಮೇಲೆ ಮತ್ತೆ ವಿಷ ಕಕ್ಕಿರುವುದು ಹತಾಶೆ ಅಷ್ಟೇ. ಆಕಾಶಕ್ಕೆ ಉಗಿದರೆ ಮುಖದ ಮೇಲೆಯೇ ಬೀಳುತ್ತದೆ ಮಂಕೆ! ಇಷ್ಟೂ ಸಾಮಾನ್ಯಜ್ಞಾನವೂ ಇಲ್ಲವೇ? ಕುಂಬಳಕಾಯಿ ಕಳ್ಳನಿಗೆ ಕೋಪ ಬಂದಿದೆ!ʼʼ- ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎಕ್ಸ್‌ನಲ್ಲಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ.

ಬೆಂಗಳೂರು: ʼʼಮರ್ಯಾದೆಗೇಡಿ, ಕಿಡಿಗೇಡಿ ನನ್ನ ಮೇಲೆ ಮತ್ತೆ ವಿಷ ಕಕ್ಕಿರುವುದು ಹತಾಶೆ ಅಷ್ಟೇ. ಆಕಾಶಕ್ಕೆ ಉಗಿದರೆ ಮುಖದ ಮೇಲೆಯೇ ಬೀಳುತ್ತದೆ ಮಂಕೆ! ಇಷ್ಟೂ ಸಾಮಾನ್ಯಜ್ಞಾನವೂ ಇಲ್ಲವೇ? ಕುಂಬಳಕಾಯಿ ಕಳ್ಳನಿಗೆ ಕೋಪ ಬಂದಿದೆ!ʼʼ- ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಎಕ್ಸ್ ಖಾತೆಯಲ್ಲಿ ವಿರೋಧಿಗಳಿಗೆ ಟಾಂಗ್ ಕೊಟ್ಟ ಪರಿ ಇದು. ಅವರು ನಿರ್ದಿಷ್ಟವಾಗಿ ಯಾರ ಹೆಸರನ್ನು ಉಲ್ಲೇಖಿಸದಿದ್ದರೂ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರನ್ನು ಉದ್ದೇಶಿಸಿಯೇ ಹೇಳಿದ್ದಾರೆ ಎನ್ನುವ ಚರ್ಚೆ ಆರಂಭವಾಗಿದೆ.
ಎಚ್‌ಡಿಕೆ ಹೇಳಿದ್ದೇನು?
ʼʼಅಹೋರಾತ್ರಿಯೂ ದ್ರೋಹ ಚಿಂತನೆ, ವಿಶ್ವಾಸದ್ರೋಹ, ಉಂಡ ಮನೆಗೆ ಕನ್ನ, ಸ್ವಪಕ್ಷೀಯರಿಗೇ ಗುನ್ನ.. .ಇದೂ ಒಂದು ಬದುಕೇ...? ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿರುವ ವಿಷಸರ್ಪ ನನ್ನಡೆಗೆ ನಾಲಿಗೆ ಚಾಚಿದೆ! ಇಂಥ ಕ್ರಿಮಿನಲ್ ಒಬ್ಬ ಕೆಟ್ಟ ಅಲೋಚನೆಗಳಲ್ಲಿ ದಿನಪೂರ್ತಿ ಮುಳುಗಿರುವುದು ಸಹಜ. ಕ್ರಿಮಿನಲ್‌ನ ಚಾಳಿಯೇ ಧಮ್ಕಿ ಹಾಕುವುದು. ವಿಷಕ್ರಿಮಿಯ ಕೆಲಸ ಎಲ್ಲರನ್ನೂ ಕಚ್ಚುವುದು.. ಇದರಲ್ಲಿ ನನಗೇನೂ ಅಚ್ಚರಿ ಇಲ್ಲʼʼ.
ʼʼನಾನು ಭೂ ಒತ್ತುವರಿ ಮಾಡಿದ್ದೇನೋ ಇಲ್ಲವೋ ಕಾನೂನು ವ್ಯಾಪ್ತಿಯಲ್ಲಿ ತೀರ್ಮಾನವಾಗುತ್ತದೆ. ಈಗ ನನ್ನ ಮರ್ಯಾದೆ ವಿಷಯ ಇರಲಿ, ಇವತ್ತು ಸ್ವಪಕ್ಷೀಯರೇ ಈ ಮರ್ಯಾದೆಗೇಡಿಯ ಮಾನವನ್ನು ವಿಧಾನಸೌಧದಲ್ಲಿಯೇ ಹರಾಜು ಹಾಕಿದ್ದಾರೆ! ಅದಕ್ಕೆ ಉತ್ತರವೇನು?ʼʼ ಎಂದು ಎಚ್‌ಡಿಕೆ ವಾಗ್ದಾಳಿ ನಡೆದಿದ್ದಾರೆ. ಜತೆಗೆ ʼಮರ್ಯಾದೆಗೇಡಿʼ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.
ಕುಮಾರಸ್ವಾಮಿ ಅವರ ಎಕ್ಸ್ ಪೋಸ್ಟ್ ಇಲ್ಲಿದೆ:
ಮರ್ಯಾದೆಗೇಡಿ, ಕಿಡಿಗೇಡಿ ನನ್ನ ಮೇಲೆ ಮತ್ತೆ ವಿಷ ಕಕ್ಕಿರುವುದು ಹತಾಶೆ ಅಷ್ಟೇ. ಆಕಾಶಕ್ಕೆ ಉಗಿದರೆ ಮುಖದ ಮೇಲೆಯೇ ಬೀಳುತ್ತದೆ ಮಂಕೆ..! ಇಷ್ಟೂ ಸಾಮಾನ್ಯಜ್ಞಾನವೂ ಇಲ್ಲವೇ? ಕುಂಬಳಕಾಯಿ ಕಳ್ಳನಿಗೆ ಕೋಪ ಬಂದಿದೆ!
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 20, 2025
ಅಹೋರಾತ್ರಿಯೂ ದ್ರೋಹ ಚಿಂತನೆ, ವಿಶ್ವಾಸದ್ರೋಹ, ಉಂಡ ಮನೆಗೆ ಕನ್ನ, ಸ್ವಪಕ್ಷೀಯರಿಗೇ ಗುನ್ನ.. ಇದೂ ಒಂದು ಬದುಕೇ..? ರಾಜಕೀಯ…
ಎಚ್‌ಡಿಕೆಗೆ ಗಾಬರಿ ಏಕೆ?
ಇತ್ತ ದಿಲ್ಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ʼʼಎಚ್.ಡಿ. ಕುಮಾರಸ್ವಾಮಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿಲ್ಲ ಎಂದಾದರೆ ಅವರೇಕೆ ಗಾಬರಿಯಾಗಬೇಕು?ʼʼ ಎಂದು ಪ್ರಶ್ನಿಸಿದ್ದರು. ಕಾಂಗ್ರೆಸ್‌ಗೆ ನಾನೇ ಟಾರ್ಗೆಟ್, ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ʼʼನಾನು ಹಾಗೂ ಸಿದ್ದರಾಮಯ್ಯ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ನ್ಯಾಯಾಲಯದ ಸೂಚನೆಯಂತೆ ಕಾನೂನು ಪ್ರಕಾರ ಕೆಲಸ ಮಾಡಲಾಗಿದೆ. ಭೂ ಒತ್ತುವರಿ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಂಡಿಲ್ಲ ಎಂದು ನ್ಯಾಯಲಯ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ನ್ಯಾಯಾಲಯ ಗಡುವು ನೀಡಿದ ಕಾರಣ ಅಧಿಕಾರಿಗಳು ಹೋಗಿ ಅಳತೆ ಮಾಡಿದ್ದಾರೆ ಎಂದರು. ಹೆಚ್ಚುವರಿ ಭೂಮಿಯಿದ್ದರೆ ವಾಪಸ್ ತೆಗೆದುಕೊಳ್ಳಿ ಎಂದು ಏಕೆ ಪತ್ರ ಬರೆದಿದ್ದಾರೆ? ಎಷ್ಟು ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಕುಮಾರಸ್ವಾಮಿ ಅವರ ಜಮೀನು ಇದ್ದರೆ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೇ ಬಿಟ್ಟುಕೊಡಬೇಕಾಗುತ್ತದೆʼʼ ಎಂದು ಹೇಳಿದ್ದರು.
ದ್ವೇಷ ರಾಜಕಾರಣ ಅವರ ಡಿಎನ್‌ಎಯಲ್ಲಿದೆ
ʼʼದ್ವೇಷ ರಾಜಕಾರಣ ಎಂಬುದು ಕುಮಾರಸ್ವಾಮಿ ಅವರ ಡಿಎನ್‌ಎಯಲ್ಲಿದೆ. ಕೇತಗಾನಹಳ್ಳಿ ಜಮೀನು ವಿಚಾರವಾಗಿ ಕೇಸ್ ದಾಖಲಿಸಿರುವುದು ಎಸ್.ಆರ್. ಹಿರೇಮಠ್. ಕೋರ್ಟ್ ಆದೇಶದಂತೆ ಅಧಿಕಾರಿಗಳು ಕೆಲಸ ಮಾಡಿದ್ದು, ನಾವು ಹೇಗೆ ದ್ವೇಷ ರಾಜಕಾರಣ ಮಾಡಿದ್ದೇವೆ?ʼʼ ಎಂದೂ ಡಿಕೆಶಿ ಪ್ರಶ್ನಿಸಿದ್ದರು. ʼʼನನ್ನ ಮೇಲೂ ಹಿರೇಮಠ್ ಅನೇಕ ಕೇಸ್ ದಾಖಲಿಸಿದ್ದರು. ಅವರ ಅರ್ಜಿ ಮೇರೆಗೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅಧಿಕಾರಿಗಳು ಕೋರ್ಟ್ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ದ್ವೇಷದ ರಾಜಕಾರಣ ಏನಿದೆ?ʼʼ ಎಂದಿದ್ದರು.