Heart Attack: ಹೃದಯಾಘಾತಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಸೇರಿ ಮೂವರು ಬಲಿ
Heart Attack: ಸುರತ್ಕಲ್ ಕೃಷ್ಣಾಪುರದ ನಿವಾಸಿ ಅಫ್ತಾಬ್ (18) ಎಂಬ ವಿದ್ಯಾರ್ಥಿ ಮನೆಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಅಫ್ತಾಬ್ ಸುರತ್ಕಲ್ ಸೆಕ್ರೆಡ್ ಹಾರ್ಟ್ ಇನ್ಸ್ಟಿಟ್ಯೂಟ್‌ನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದುತ್ತಿದ್ದ.

ಮೃತ ವಿದ್ಯಾರ್ಥಿ ಅಫ್ತಾಬ್

ನೆಲಮಂಗಲ: ರಾಜ್ಯದಲ್ಲಿ ಹೃದಯಾಘಾತಕ್ಕೆ (Heart Attack) ಬಲಿಯಾಗುವ ಯುವಜನರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಇಂದು ಮೂವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಂಗಳೂರಿನಲ್ಲಿ (Mangaluru) ಹೃದಯಾಘಾತಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ (Engineering Student) ಬಲಿಯಾಗಿದ್ದಾನೆ. ಸುರತ್ಕಲ್ ಕೃಷ್ಣಾಪುರದ ನಿವಾಸಿ ಅಫ್ತಾಬ್ (18) ಎಂಬ ವಿದ್ಯಾರ್ಥಿ ಮನೆಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಅಫ್ತಾಬ್ ಸುರತ್ಕಲ್ ಸೆಕ್ರೆಡ್ ಹಾರ್ಟ್ ಇನ್ಸ್ಟಿಟ್ಯೂಟ್‌ನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದುತ್ತಿದ್ದ.
ಹಾಸನದಲ್ಲಿ ಹೃದಯಾಘಾತದಿಂದ ಮತ್ತೊಬ್ಬ ವ್ಯಕ್ತಿ ವೆಂಕಟೇಶ್ (55) ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ದೊಡ್ಡಮಣ್ಣಿಗನಹಳ್ಳಿ ಗ್ರಾಮದ ನಿವಾಸಿಯಾಗಿರುವ ವೆಂಕಟೇಶ್, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಹಾಸನದಿಂದ ತಮ್ಮ ಮಗಳನ್ನು ನೋಡಲು ಬೆಂಗಳೂರಿಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಗಾರೆ ಕೆಲಸ ಮಾಡುತ್ತಿದ್ದ ವೆಂಕಟೇಶ್ ಹೃದಯಾಘಾತಕ್ಕೊಳಗಾದ ತಕ್ಷಣವೇ ಬಸ್ ನಲ್ಲಿಯೇ ಸೋಲೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ವೈದ್ಯರಿಲ್ಲದ ಕಾರಣ ನೆಲಮಂಗಲ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಿ ಹೃದಯಾಘಾತಕ್ಕೆ ವೆಂಕಟೇಶ್ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು. ಸೋಲೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯ ಇದ್ದಿದ್ದರೆ ನನ್ನ ಗಂಡ ಬದುಕುತ್ತಿದ್ದರು ಎಂದು ಮೃತ ವೆಂಕಟೇಶನ ಪತ್ನಿ ಮಂಜುಳಾ ಕಣ್ಣೀರು ಹಾಕಿದ್ದಾರೆ.
ದಾವಣಗೆರೆಯಲ್ಲಿ, ಆಟೋದಲ್ಲಿ ಕುಳಿತಿರುವಾಗಲೇ ಚಾಲಕ ಎಸ್. ಸಂಗಪ್ಪ (58) ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ದಾವಣಗೆರೆ ರೈಲ್ವೆ ನಿಲ್ದಾಣದ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ದಾವಣಗೆರೆಯ SOG ಕಾಲೋನಿಯ ನಿವಾಸಿಯಾಗಿರುವ ಸಂಗಪ್ಪ, ಪ್ರಯಾಣಿಕರಿಗಾಗಿ ಕಾಯುತ್ತಿದ್ದಾಗಲೇ ಕುಳಿತಲ್ಲಿಯೇ ಕೊನೆಯುಸಿರೆಳೆದರು. ಸಹ ಆಟೋ ಚಾಲಕರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಗಪ್ಪರನ್ನು ಆಸ್ಪತ್ರೆಗೆ ರವಾನಿಸಿದರು. ಜಿಲ್ಲಾಸ್ಪತ್ರೆಯ ವೈದ್ಯರು ಆತ ಮೃತಪಟ್ಟಿರುವುದಾಗಿ ದೃಢಪಡಿಸಿದರು. ರೈಲ್ವೆ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Heart Attack: ಹೃದಯಾಘಾತ ಸರಣಿ ಮುಂದುವರಿಕೆ, ನಿನ್ನೆ ಒಂದೇ ದಿನ ರಾಜ್ಯದಲ್ಲಿ 11 ಬಲಿ