Janivara Row: ಜನಿವಾರ ತೆಗೆಸಿದ ಕಾಲೇಜಿಗೆ ಶಾಕ್, ಸರ್ಕಾರಿ ಪರೀಕ್ಷೆಗಳಿಂದ ಬ್ಲ್ಯಾಕ್ ಲಿಸ್ಟ್‌ಗೆ
ಕಳೆದ ವರ್ಷದಲ್ಲಿ ನಡೆದ ಇದೇ ತರಹದ ಘಟನೆ ಉಲ್ಲೇಖಿಸಿ ಜನಿವಾರ, ಲಿಂಗ ಇತ್ಯಾದಿ ಧಾರ್ಮಿಕ ದಿರಿಸುಗಳನ್ನು ತೆಗೆಯಬಾರದೆಂದು ಸ್ಪಷ್ಟವಾಗಿ ತರಬೇತಿಯಲ್ಲಿ ತಿಳಿಸಲಾಗಿದೆ. ಆದರೂ ಇಂತಹ ಘಟನೆ ನಡೆದಿದ್ದರೆ ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ನಿಯಮಾನುಸಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಡಿಸಿಗೆ ಪತ್ರ ಬರೆದು KEA ಕೂಡ ಆಗ್ರಹಿಸಿತ್ತು.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಏ. 27: ಸಿಇಟಿ ಪರೀಕ್ಷೆ (CET exam) ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ (Janivara row) ವಿಚಾರ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಬೆಂಗಳೂರಿನ (Bengaluru) ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು (Suspend) ಮಾಡಲಾಗಿತ್ತು. ಈ ನಡುವೆ ಇದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಕಾಲೇಜು ಪರವಾನಗಿ ರದ್ದುಪಡಿಸಿ 25 ಲಕ್ಷ ರೂ.ದಂಡ ವಿಧಿಸುವಂತೆ ಮುಖ್ಯಮಂತ್ರಿಗಳಿಗೆ ದೂರು ನೀಡಿ ಆಗ್ರಹಿಸಿತ್ತು. ಆ ಬೆನ್ನಲ್ಲೇ ಕೃಪಾನಿಧಿ ಕಾಲೇಜಿಗೆ ಬಿಗ್ ಶಾಕ್ ಸಿಕ್ಕಿದೆ. ಈ ಕಾಲೇಜಿನಲ್ಲಿ ಇನ್ಮುಂದೆ ಸರ್ಕಾರಿ ಪರೀಕ್ಷೆ ನಡೆಸದಂತೆ ಸರ್ಕಾರಕ್ಕೆ ವರದಿ ಸಲ್ಲಿಸೋದಾಗಿ ಬೆಂಗಳೂರು ನಗರ ಡಿಸಿ ಜಗದೀಶ್ ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಚಾರ ಸಂಬಂಧ ಕೃತ್ಯ ಎಸಗಿರೋದು ಯಾರು ಎಂಬ ಬಗ್ಗೆ ತನಿಖೆ ಮಾಡಲಾಗಿದೆ. ವಸ್ತ್ರಸಂಹಿತೆ ಬಗ್ಗೆ ತರಬೇತಿ ನೀಡಿದ್ದರೂ ಇಷ್ಟೆಲ್ಲ ಸಮಸ್ಯೆಯಾಗಿದೆ. ಜನಿವಾರ ಘಟನೆಯಲ್ಲಿ ಕರ್ತವ್ಯ ಲೋಪವಾಗಿರುವ ಕಾರಣ ಕೃಪಾನಿಧಿ ಕಾಲೇಜಿನಲ್ಲಿ ಇನ್ನು ಮುಂದೆ ಸರ್ಕಾರಿ ಪರೀಕ್ಷೆಗಳನ್ನು ನಡೆಸದಂತೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ. ಪರೀಕ್ಷಾರ್ಥಿಗಳ ಜನಿವಾರವನ್ನು ಉದ್ದೇಶಪೂರ್ವಕವಾಗಿ ತೆಗೆಸಲಾಗಿರುವ ಕಾರಣ ಕೃಪಾನಿಧಿ ಕಾಲೇಜಿನಲ್ಲಿ ಇನ್ನು ಮುಂದೆ ಪರೀಕ್ಷಾ ಕೇಂದ್ರ ನೀಡದಂತೆ ವರದಿ ನೀಡುತ್ತೇವೆ ಎಂದು ಬೆಂಗಳೂರು ನಗರ ಡಿಸಿ ಜಗದೀಶ್ ತಿಳಿಸಿದ್ದಾರೆ.
ತನಿಖೆಗೆ ಆಗ್ರಹಿಸಿದ್ದ KEA
2026ನೇ ಸಾಲಿನ ಸಿಇಟಿ ಪರೀಕ್ಷೆ ವೇಳೆ ಬೆಂಗಳೂರು ಕೇಂದ್ರದಲ್ಲಿ ಏಪ್ರಿಲ್ 23ರ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಲು ಅಲ್ಲಿಯ ಸಿಬ್ಬಂದಿಗಳು ಸೂಚಿಸಿರುತ್ತಾರೆಂದು, ನಂತರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿರುತ್ತಾರೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹಳ ಸ್ಪಷ್ಟವಾಗಿ ವಸ್ತ್ರ ಸಂಹಿತೆಯ ಬಗ್ಗೆ ವಿವರಿಸಿದೆ. ಕಳೆದ ವರ್ಷದಲ್ಲಿ ನಡೆದ ಇದೇ ತರಹದ ಘಟನೆ ಉಲ್ಲೇಖಿಸಿ ಜನಿವಾರ, ಲಿಂಗ ಇತ್ಯಾದಿ ಧಾರ್ಮಿಕ ದಿರಿಸುಗಳನ್ನು ತೆಗೆಯಬಾರದೆಂದು ಸ್ಪಷ್ಟವಾಗಿ ತರಬೇತಿಯಲ್ಲಿ ತಿಳಿಸಲಾಗಿದೆ. ಆದರೂ ಇಂತಹ ಘಟನೆ ನಡೆದಿದ್ದರೆ ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ನಿಯಮಾನುಸಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಡಿಸಿಗೆ ಪತ್ರ ಬರೆದು KEA ಕೂಡ ಆಗ್ರಹಿಸಿತ್ತು.