ರಾಜ್ಯದ ಜನರಿಗೆ ಗುಡ್ನ್ಯೂಸ್; ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ
Puneeth Rajkumar Hrudaya Jyothi Scheme: ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆ ಎಂಬುದು ಹಠಾತ್ ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಒಂದು ಮಹತ್ವದ ಆರೋಗ್ಯ ಯೋಜನೆಯಾಗಿದೆ. ದಿವಂಗತ ನಟ ಡಾ. ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥ ಈ ಯೋಜನೆಗೆ ಅವರ ಹೆಸರನ್ನು ಇಡಲಾಗಿದೆ.
-
ಮಂಗಳೂರು: ಹಠಾತ್ ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೆ ತರಲಾಗಿರುವ ಮಹತ್ವಾಕಾಂಕ್ಷೆಯ 'ಡಾ. ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ' ಯೋಜನೆಯನ್ನು (Puneeth Rajkumar Hrudaya Jyothi Scheme) ರಾಜ್ಯದ ಎಲ್ಲ 31 ಜಿಲ್ಲೆಗಳು ಹಾಗೂ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಣೆ ಮಾಡಲಾಗುವುದು. ಈ ಹಿಂದೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ (ಒಟ್ಟು 80) ಸೀಮಿತವಾಗಿದ್ದ ಈ ಯೋಜನೆಯನ್ನು ರಾಜ್ಯದ ಎಲ್ಲ 31 ಜಿಲ್ಲೆಗಳು ಮತ್ತು ತಾಲೂಕು ಕೇಂದ್ರಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ (Health minister UT Khader) ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಎದೆನೋವು ಅಥವಾ ಹೃದಯ ಸಂಬಂಧಿ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಹತ್ತಿರದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದರೆ ಉಚಿತವಾಗಿ ಇಸಿಜಿ ಮಾಡಲಾಗುತ್ತದೆ. ಇಸಿಜಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರೂ ತಕ್ಷಣವೇ ದುಬಾರಿ ಬೆಲೆಯ ಜೀವರಕ್ಷಕ ಇಂಜೆಕ್ಷನ್ ಅನ್ನು ಉಚಿತವಾಗಿ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿ ಉಚಿತವಾಗಿ ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಇದುವರೆಗೆ 14,94,578 ಮಂದಿಗೆ ಈ ಯೋಜನೆಯಡಿ ಇಸಿಜಿ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 22,579 ಮಂದಿಗೆ ಹೃದಯಾಘಾತದ ಲಕ್ಷಣಗಳು ಪತ್ತೆಯಾಗಿ ಸಕಾಲಿಕ ಚಿಕಿತ್ಸೆಯಿಂದ ಪ್ರಾಣ ಉಳಿಸಲಾಗಿದೆ. ಪ್ರಸ್ತುತ ಬಿಪಿಎಲ್ ಕಾರ್ಡ್ದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಿದ್ದು, ಎಪಿಎಲ್ ಕಾರ್ಡ್ದಾರರಿಗೂ ಈ ಸೌಲಭ್ಯ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ-ಕೇರ್ ಸೆಂಟರ್
ಇನ್ನು ಕ್ಯಾನ್ಸರ್ ರೋಗಿಗಳು ಕಿಮೋಥೆರಪಿ ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಅಲೆಯುವುದನ್ನು ತಪ್ಪಿಸಲು, ಮುಂದಿನ ಮೂರು ತಿಂಗಳೊಳಗೆ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇ-ಕೇರ್ ಸೆಂಟರ್ಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ಹಂತದಲ್ಲಿ ತಾಲೂಕು ಆಸ್ಪತ್ರೆಗಳಿಗೂ ಇದನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಪ್ರತಿ ಜಿಲ್ಲೆಗೆ 30 ಲಕ್ಷ ವೆಚ್ಚದಲ್ಲಿ ಎಲ್ಲ ಜಿಲ್ಲೆಗಳಿಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಕ್ರೀನಿಂಗ್ ಯಂತ್ರಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಆಶಾ ಕಾರ್ಯಕರ್ತೆಯರು, ಎಎನ್ಎಂ ಮತ್ತು ಸಿಎಚ್ಒಗಳ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ, ಲಕ್ಷಣಗಳಿದ್ದವರಿಗೆ ಈ ಕಿಟ್ಗಳ ಮೂಲಕ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸಲಾಗುವುದು. ಮುಂದಿನ ಹಂತದಲ್ಲಿ ಮೊಬೈಲ್ ಆಧಾರಿತ ಎಐ ತಂತ್ರಜ್ಞಾನ ಬಳಸಿ ಕ್ಯಾನ್ಸರ್ ಪತ್ತೆಹಚ್ಚುವ ಯೋಜನೆಯನ್ನೂ ಜಾರಿಗೊಳಿಸಲಾಗುವುದು ಎಂದರು.
ಸಿಂಗಲ್ ಯೂಸ್ ಡಯಾಲೈಸರ್ ಬಳಸಲು ಆದೇಶ
ರಾಜ್ಯದ 169 ಡಯಾಲಿಸಿಸ್ ಕೇಂದ್ರಗಳಲ್ಲಿ (639 ಯಂತ್ರಗಳು) ವಾರ್ಷಿಕವಾಗಿ ಸುಮಾರು 5 ಲಕ್ಷ ಡಯಾಲಿಸಿಸ್ ಸೆಷನ್ಗಳು ನಡೆಯುತ್ತಿವೆ. ಈ ಹಿಂದೆ ಒಮ್ಮೆ ಬಳಸಿದ ಡಯಾಲೈಸರ್ (Dialyzer) ಫಿಲ್ಟರ್ ಅನ್ನು ಶುಚಿಗೊಳಿಸಿ ಮರುಬಳಕೆ ಮಾಡಲಾಗುತ್ತಿತ್ತು. ಇದರಿಂದ ರೋಗಿಗಳಿಗೆ ಸೋಂಕು ತಗಲುವ ಸಾಧ್ಯತೆ ಇರುವುದರಿಂದ, ಇನ್ನು ಮುಂದೆ ಸರ್ಕಾರಿ ಡಯಾಲಿಸಿಸ್ ಕೇಂದ್ರಗಳಲ್ಲಿ ಒಮ್ಮೆ ಬಳಸಿದ ಡಯಾಲೈಸರ್ ಅನ್ನು ಮರುಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ, ಪ್ರತಿ ಬಾರಿಯೂ ಹೊಸ ಫಿಲ್ಟರ್ ಬಳಸಲು ಆದೇಶ ಹೊರಡಿಸಲಾಗಿದೆ ಎಂದರು.
ಹಿಮೋಫೀಲಿಯಾ ರೋಗಿಗಳಿಗೆ ಉಚಿತ ಇಂಜೆಕ್ಷನ್
ಹಿಮೋಫೀಲಿಯಾ ರೋಗಿಗಳಲ್ಲಿ ಯಾವ ಸಂದರ್ಭದಲ್ಲಾದರೂ ರಕ್ತಸ್ರಾವ ಶುರುವಾಗುವ ಅಪಾಯ ಇರುತ್ತದೆ. ಈ ಹಿಂದೆ ರಕ್ತಸ್ರಾವವಾದ ಬಳಿಕ ದುಬಾರಿ ಬೆಲೆಯ ಇಂಜೆಕ್ಷನ್ ನೀಡಲಾಗುತ್ತಿತ್ತು. ಇದೀಗ 'ಕುಸುಮ ಸಂಜೀವಿನಿ' ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಹಿಮೋಫೀಲಿಯಾ ರೋಗಿಗಳಿಗೆ ರಕ್ತಸ್ರಾವವೇ ಆಗದಂತೆ ತಡೆಯಲು ಪ್ರತಿ ತಿಂಗಳು ಉಚಿತವಾಗಿ ಮುನ್ನೆಚ್ಚರಿಕಾ ಇಂಜೆಕ್ಷನ್ ನೀಡುವ ವಿನೂತನ ಯೋಜನೆ ಜಾರಿಗೆ ತರಲಾಗಿದೆ ಎಂದರು.