ಮೊಹಮ್ಮದ್ ರಿಝ್ವಾನ್‌ರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಮುಗಿಸಿದ ಹೆಡ್ ಕೋಚ್ ಮೈಕ್ ಹೇಸನ್?
ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡವನ್ನು ಪುನರ್‌ರಚಿಸುವ ಉದ್ದೇಶದಿಂದ ಮೊಹಮ್ಮದ್ ರಿಝ್ವಾನ್, ಇಮಾಮ್-ಉಲ್-ಹಕ್, ಶಾನ್ ಮಸೂದ್ ಮತ್ತು ನೊಮಾನ್ ಅಲಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಪಾಕಿಸ್ತಾನ ತಂಡದ ಹೆಡ್ ಕೋಚ್ ಮೈಕ್ ಹೇಸನ್ ತೆರೆ ಎಳೆಯುವ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಮೊಹಮ್ಮದ್ ರಿಝ್ವಾನ್ ಕೆರಿಯರ್ ಮುಗಿಸಿದ ಮೈಕ್ ಹೇಸನ್. -
ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket team) ಮುಖ್ಯ ಕೋಚ್ ಮೈಕ್ ಹೇಸನ್ (Mike Hesson), ತಮ್ಮ ತಂಡವನ್ನು ಸಂಪೂರ್ಣವಾಗಿ ಪುನರ್‌ರಚಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಮಾಜಿ ನಾಯಕರಾದ ಮೊಹಮ್ಮದ್ ರಿಝ್ವಾನ್ ಮತ್ತು ಶಾನ್ ಮಸೂದ್, ಆರಂಭಿಕ ಬ್ಯಾಟರ್ ಇಮಾಮ್-ಉಲ್-ಹಕ್ ಹಾಗೂ ಸ್ಪಿನ್ನರ್ ನೊಮಾನ್ ಅಲಿ ಸೇರಿದಂತೆ ಹಲವು ಅನುಭವಿ ಆಟಗಾರರು ಪಾಕಿಸ್ತಾನದ ಭವಿಷ್ಯದ ತಂಡದ ಯೋಜನೆಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಬೆಂಬಲ ಹೊಂದಿರುವ ಮೈಕ್ ಹೇಸನ್ ಅವರಿಗೆ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ರಾಷ್ಟ್ರೀಯ ತಂಡಗಳನ್ನು ಪುನರ್‌ರಚಿಸುವ ಸಂಪೂರ್ಣ ಅಧಿಕಾರ ನೀಡಲಾಗಿದೆ ಎನ್ನಲಾಗಿದೆ. ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕೆಲವು ಹಿರಿಯ ಆಟಗಾರರನ್ನು ಕೈಬಿಟ್ಟು ಹೊಸ ತಂಡ ಕಟ್ಟಲು ನ್ಯೂಜಿಲೆಂಡ್ ಮೂಲದ ಕೋಚ್ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಪಿಸಿಬಿ ಇತ್ತೀಚೆಗೆ ಪ್ರಕಟಿಸಿದ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ರಿಝ್ವಾನ್, ಶಾನ್ ಮಸೂದ್, ಇಮಾಮ್ ಮತ್ತು ನೊಮಾನ್ ಅಲಿ ಅವರಿಗೆ ಸ್ಥಾನ ನೀಡದಿರುವುದು ಈ ಬದಲಾವಣೆಯ ಮೊದಲ ಸೂಚನೆಯಾಗಿದೆ. ಯುವ ಬ್ಯಾಟರ್ ಸೈಮ್ ಆಯೂಬ್, ವೇಗದ ಬೌಲರ್‌ಗಳಾದ ಮೊಹಮ್ಮದ್ ಅಲಿ ಮತ್ತು ಖುರ್ರಂ ಶಹಜಾದ್ ಹಾಗೂ ಆಲ್‌ರೌಂಡರ್ ಅಮೀರ್ ಜಮಾಲ್ ಕೂಡ ಪಟ್ಟಿಯಿಂದ ಹೊರಗುಳಿದಿದ್ದಾರೆ.
ಮಂಗಳವಾರ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಿಸಿಬಿಯ ಮೂಲವೊಂದು, ಹೇಸನ್ ತಮ್ಮ ನಿರ್ಧಾರವನ್ನು ಆಯ್ಕೆಗಾರರು ಮತ್ತು ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ತಿಳಿಸಿದ್ದಾರೆ ಎಂದು ಹೇಳಿದೆ. ಹಲವು ಅನುಭವಿ ಆಟಗಾರರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
"ರಿಝ್ವಾನ್, ಶಾನ್, ನೊಮಾನ್, ಇಮಾಮ್ ಸೇರಿದಂತೆ ಇತರ ಕೆಲವು ಆಟಗಾರರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಬಹುತೇಕ ಮುಗಿದಿದೆ. ಕನಿಷ್ಠ ಪಕ್ಷ ಆಯ್ಕೆಗಾರರು ಮತ್ತು ಅಧ್ಯಕ್ಷರಿಗೆ ಹೇಸನ್ ನೀಡಿರುವ ಸಂದೇಶ ಇದಾಗಿದೆ. ಅವರು ಹಿಂದಿನ ನಿರ್ಧಾರಗಳನ್ನು ಮರುಪರಿಶೀಲಿಸಲು ಬಯಸುವುದಿಲ್ಲ. ಟೆಸ್ಟ್ ಮತ್ತು ಸೀಮಿತ ಓವರ್‌ಗಳ ತಂಡಗಳನ್ನು ಹೊಸದಾಗಿ ರೂಪಿಸುವ ಗುರಿ ಹೊಂದಿದ್ದಾರೆ," ಎಂದು ಪಿಸಿಬಿ ಮೂಲ ತಿಳಿಸಿದೆ.
ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೆಲವು ಆಟಗಾರರು ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವುದು ಕಷ್ಟವಾಗಬಹುದು ಎಂದು ಮೂಲ ತಿಳಿಸಿದೆ. ಆಟಗಾರರ ವರ್ತನೆ, ಬದ್ಧತೆ ಹಾಗೂ ತಂಡದ ಯೋಜನೆಗಳನ್ನು ಅನುಸರಿಸುವ ಮನೋಭಾವದ ಬಗ್ಗೆಯೂ ಹೆಸ್ಸನ್ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.
ವೈಭವ್ ಸೂರ್ಯವಂಶಿ ವೇಗದ ದ್ವಿಶತಕ, ಯುಎಇ ಎದುರು ಭಾರತ ಎಗೆ ಭರ್ಜರಿ ಜಯ!
ಹೊಸ ಆರಂಭಕ್ಕೆ ಮೈಕ್ ಹೇಸನ್ ಸಿದ್ಧತೆ
ಸೈಮ್ ಆಯೂಬ್ ಪ್ರಕರಣವು ಕೋಚ್ ಹೇಸನ್ ಅವರ ನಿರೀಕ್ಷೆಗಳನ್ನು ಸ್ಪಷ್ಟಪಡಿಸುತ್ತದೆ. ಯುವ ಬ್ಯಾಟರ್ ಕ್ರಿಕೆಟ್‌ನಿಂದ ವಿರಾಮ ಪಡೆಯಲು ನಿರ್ಧರಿಸಿದ್ದಾರೆ ಎಂದು ಪಿಸಿಬಿ ಈ ಹಿಂದೆ ತಿಳಿಸಿತ್ತು. ಆದರೆ, ರಾಷ್ಟ್ರೀಯ ತಂಡಕ್ಕೆ ಮರಳಬೇಕೆಂದರೆ ತಮ್ಮ ಬ್ಯಾಟಿಂಗ್ ಕೌಶಲವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಕಠಿಣ ಪರಿಶ್ರಮ ಪಡಬೇಕು ಎಂದು ಹೇಸನ್ ಸೂಚಿಸಿದ್ದಾರೆ ಎನ್ನಲಾಗಿದೆ.
ಇತರ ಕೆಲವು ಆಟಗಾರರಿಗೂ ತಮ್ಮ ಆಟದ ವಿಧಾನವನ್ನು ಮರುಪರಿಶೀಲಿಸುವಂತೆ ತಿಳಿಸಲಾಗಿದೆ. ವಿಶೇಷವಾಗಿ ಕೋಚಿಂಗ್ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸುವುದು ಮತ್ತು ಮೈದಾನದಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶನಕ್ಕೆ ತರುವುದು ಮುಖ್ಯ ಎಂದು ಹೇಸನ್ ಬಯಸಿದ್ದಾರೆ. ಆದರೆ, ಬಾಬರ್ ಆಝಮ್ ಮಾತ್ರ ಹೇಸನ್ ಅವರ ಯೋಜನೆಗಳಲ್ಲಿ ಪ್ರಮುಖ ಸ್ಥಾನ ಉಳಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿದ್ದರೂ, ಮಾಜಿ ನಾಯಕನ ಮೇಲೆ ಕೋಚ್ ವಿಶ್ವಾಸ ಕಳೆದುಕೊಂಡಿಲ್ಲ ಎನ್ನಲಾಗಿದೆ.
"ಬಾಬರ್ ಅವರಂತಹ ಪ್ರತಿಭಾವಂತ ಬ್ಯಾಟರ್ ಶೀಘ್ರದಲ್ಲೇ ತಮ್ಮ ಅತ್ಯುತ್ತಮ ಫಾರ್ಮ್‌ಗೆ ಮರಳುತ್ತಾರೆ ಮತ್ತು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬಾಗುತ್ತಾರೆ ಎಂಬ ವಿಶ್ವಾಸ ಹೆಸ್ಸನ್ ಅವರಿಗಿದೆ," ಎಂದು ಪಿಸಿಬಿ ಮೂಲ ತಿಳಿಸಿದೆ.