ಚಿಂಚೋಳಿಯಲ್ಲಿ ಭೀಕರ ಸರಣಿ ಅಪಘಾತ; ಸಿಮೆಂಟ್ ಟ್ಯಾಂಕರ್ ಡಿಕ್ಕಿಯಾಗಿ ಬಸ್ ಪಲ್ಟಿ, 10 ಮಂದಿಗೆ ಗಂಭೀರ ಗಾಯ
Chincholi Road Accident: ಚಿಂಚೋಳಿ ತಾಲೂಕಿನ ಬೀದರ್-ಮಹಬೂಬ್ ನಗರ ರಾಷ್ಟ್ರೀಯ ಹೆದ್ದಾರಿಯ ಪೋಲಕಪಳ್ಳಿ ತಾಂಡಾ ಬಳಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್, ಸಿಮೆಂಟ್ ಟ್ಯಾಂಕರ್ ಹಾಗೂ ಟಂ ಟಂ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಹತ್ತು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜರುಗಿದೆ.
ಚಿಂಚೋಳಿಯ ಪೋಲಕಪಳ್ಳಿ ತಾಂಡಾ ಬಳಿ ಭೀಕರ ಸರಣಿ ಅಪಘಾತ. -
ಚಿಂಚೋಳಿ, ಏ.24: ತಾಲೂಕಿನ ಬೀದರ್-ಮಹಬೂಬ್ ನಗರ ರಾಷ್ಟ್ರೀಯ ಹೆದ್ದಾರಿಯ ಪೋಲಕಪಳ್ಳಿ ತಾಂಡಾ ಬಳಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್, ಸಿಮೆಂಟ್ ಟ್ಯಾಂಕರ್ ಹಾಗೂ ಟಂ ಟಂ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ (Road Accident) ಹತ್ತು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜರುಗಿದೆ. ಚಿಂಚೋಳಿ ಬಸ್ ನಿಲ್ದಾಣದಿಂದ ವೆಂಕಟಾಪುರದ ಕಡೆಗೆ ಹೊರಟಿದ್ದ ಸಾರಿಗೆ ಬಸ್‌ಗೆ, ಕಲ್ಲೂರ್ ಗ್ರಾಮದ ಕಡೆಯಿಂದ ಎದುರಾಗಿ ಬಂದ ತುಂಬಿದ ಸಿಮೆಂಟ್ ಟ್ಯಾಂಕರ್ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬಸ್ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.
ಈ ವೇಳೆ ಟಂ ಟಂ ವಾಹನವೂ ಅಪಘಾತಕ್ಕೆ ಸಿಲುಕಿದೆ. ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಸೇರಿದಂತೆ ಒಟ್ಟು 11 ಜನರಿದ್ದರು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗಾಯಾಳುಗಳನ್ನು ತಕ್ಷಣವೇ ಚಿಂಚೋಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಾಧಿಕಾರಿ ಡಾ. ಗಫಾರ್ ನೇತೃತ್ವದ ತಂಡ ಪ್ರಥಮ ಚಿಕಿತ್ಸೆ ನೀಡಿದ್ದು, ಐವರ ತಲೆಗೆ ಗಂಭೀರ ಪೆಟ್ಟಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಮತ್ತು ಬೀದರ್‌ನ ಜೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಪ್ರಯಾಣಿಕರು ಮೂಗು ಮತ್ತು ಭುಜದ ಮೂಳೆ ಮುರಿತಕ್ಕೊಳಗಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಕಪಿಲದೇವ್ ಹಾಗೂ ಠಾಣಾಧಿಕಾರಿ ಗಂಗಮ್ಮ ಜಿನಕೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Girl Death: ಬಾಲಕಿಗೆ ಮೃತ್ಯುವಾದ ಜೋಕಾಲಿ, ಆಟವಾಡುವ ವೇಳೆ ಕುಣಿಕೆ ಬಿದ್ದು ಸಾವು
ಗಾಯಾಳುಗಳ ವಿವರ
ಶಂಕರ ರಾಮಶೆಟ್ಟಿ ಪವಾರ (65), ಸುಶೀಲಬಾಯಿ ಲಿಂಬೈ (60), ಎಂ.ಡಿ. ಇಲಿಯಾಜ್ (23), ಲಾಲ್ ಪಟೇಲ್ (35), ಉಮೇಶ ಶ್ರೀಮಂತ (30), ರಮೇಶ ವೀರಶೆಟ್ಟಿ (36), ರವಿ ಸಂಗಪ್ಪ (38), ವಿಜಯಕುಮಾರ ವಿಠಲ್ (37), ಭಾಗಮ್ಮ ಕಾಶಿನಾಥ (36) ಹಾಗೂ ವಿದ್ಯಾವತಿ ಕಾಶಿನಾಥ (38) ಅಪಘಾತದಲ್ಲಿ ಗಾಯಗೊಂಡವರು ಎಂದು ತಿಳಿದುಬಂದಿದೆ.