Sedam News: ಸೇಡಂನಲ್ಲಿ ಪಥ ಸಂಚಲನಕ್ಕೆ ಮುಂದಾದ ಆರ್‌ಎಸ್‌ಎಸ್ ಗಣವೇಷಧಾರಿಗಳು ವಶಕ್ಕೆ
RSS march in Sedam: ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಭಾನುವಾರ ಸಂಜೆ 4ಕ್ಕೆ ಆರ್‌ಎಸ್‌ಎಸ್ ಪಥ ಸಂಚಲನ ನಿಗದಿಯಾಗಿತ್ತು. ಆದರೆ, ಪುರಸಭೆ ಅನುಮತಿ ನಿರಾಕರಿಸಿದೆ. ಕೊನೆ ಘಳಿಗೆಯಲ್ಲಿ ಹೀಗೆ ಮಾಡಿದರೆ ಆಗದು ಎಂದು ಆರ್‌ಎಸ್‌ಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಪಥ ಸಂಚಲನಕ್ಕೆ ಮುಂದಾಗಿದ್ದಾರೆ. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

-

ಕಲಬುರಗಿ: ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಕೊನೆಯ ಘಳಿಗೆಯಲ್ಲಿ ಅನುಮತಿ ನಿರಾಕರಿಸಿದ್ದರಿಂದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ದಾದ ನಡೆಯಿತು. ಭಾನುವಾರ ಸಂಜೆ 4ಕ್ಕೆ ಆರ್‌ಎಸ್‌ಎಸ್ ಪಥ ಸಂಚಲನ ನಿಗದಿಯಾಗಿತ್ತು. ಆದರೆ, ಮಧ್ಯಾಹ್ನ 3.10ಕ್ಕೆ ಸೇಡಂ ಪುರಸಭೆ ಅನುಮತಿ ನಿರಾಕರಿಸಿದೆ. ಪಥ ಸಂಚಲನಕ್ಕೆ ಎಲ್ಲ ತಯಾರು ಮಾಡಿಕೊಳ್ಳಲಾಗಿದ್ದು, ಕೊನೆ ಘಳಿಗೆಯಲ್ಲಿ ಹೀಗೆ ಮಾಡಿದರೆ ಆಗದು ಎಂದು ಆರ್‌ಎಸ್‌ಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಗಣವೇಷಧಾರಿಗಳು ಪಥ ಸಂಚಲನಕ್ಕೆ ಮುಂದಾದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದಕ್ಕೂ ಮೊದಲು ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಕೂಡ ನಿಗದಿಯಾಗಿದ್ದ ಪಥಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 6.30ರ ವರೆಗೆ ಆಯೋಜನೆ ಮಾಡಿದ್ದ ಪಥಸಂಚಲನಕ್ಕೆ ಅನುಮತಿ ನೀಡಲು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ನಿರಾಕರಿಸಿದ್ದರು. ಶನಿವಾರ ರಾತ್ರಿ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿತ್ತು.
ಒಂದೇ ದಿನ ಭೀಮ್ ಆರ್ಮಿ ಹಾಗೂ ದಲಿತ ಪ್ಯಾಂಥರ್ ಸಂಘಟನೆಗಳೂ ಸಹ ಚಿತ್ತಾಪುರ ಪಟ್ಟಣದಲ್ಲೇ ಪಥಸಂಚಲನ ನಡೆಸಲು ಅನುಮತಿ ಕೋರಿದ್ದರಿಂದ ಒಂದೇ ಸಮಯದಲ್ಲಿ ಹಲವು ಸಂಘಟನೆಗಳ ಮೆರವಣಿಗೆ ನಡೆಯುವುದು ಕಾನೂನು ಸುವ್ಯವಸ್ಥೆಗೆ ಅಡಚಣೆ ಉಂಟುಮಾಡುವ ಸಂಭವ ಇದೆ. ಹೀಗಾಗಿ ಪಥಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ತಹಸೀಲ್ದಾರ್ ಎಂದು ತಿಳಿಸಿದ್ದರು. ಇದೀಗ ಸೇಡಂ ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿರುವುದು ಕಂಡುಬಂದಿದೆ. ಹೀಗಾಗಿ ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ಜಿಲ್ಲೆಯ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಚಿತ್ತಾಪುರ ಆರ್‌ಎಸ್ಎಸ್ ಪಥಸಂಚಲನ ನಿರಾಕರಣೆ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ
ಕಲಬುರಗಿ: ಕಾನೂನು ಮತ್ತು ಸುವ್ಯವಸ್ಥೆ ನೆಪವೊಡ್ಡಿ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಪಥಸಂಚಲನಕ್ಕೆ (RSS march in Chittapur) ಅನುಮತಿ ನಿರಾಕರಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಅಕ್ಟೋಬರ್ 18ರಂದು ಚಿತ್ತಾಪುರ ತಹಶೀಲ್ದಾರ್ ನೀಡಿದ್ದ ಆದೇಶವನ್ನು ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠವು ಭಾನುವಾರ ತುರ್ತು ವಿಚಾರಣೆ ನಡೆಸಿ, ನ್ಯಾಯಾಲಯವು ಅರ್ಜಿದಾರರ ಹಕ್ಕುಗಳನ್ನು ಎತ್ತಿಹಿಡಿದಿದ್ದು, ಕಾರ್ಯಕ್ರಮಕ್ಕಾಗಿ ಸೂಕ್ತ ಸ್ಥಳ ಮತ್ತು ಮಾರ್ಗವನ್ನು ಪುನರ್ ಪರಿಶೀಲಿಸಿ ನಿಗದಿಪಡಿಸುವಂತೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.
ಮಾರ್ಗ ಪರಿಗಣನೆ ಕಡ್ಡಾಯ:
ನ್ಯಾಯಾಲಯದ ನಿರ್ದೇಶನದಂತೆ, ರಾಜ್ಯವು ಪಥಸಂಚಲನಕ್ಕೆ ನಿಗದಿತ ಸ್ಥಳವನ್ನು ಖಚಿತಪಡಿಸಬೇಕು ಮತ್ತು ಅರ್ಜಿದಾರರು (ಆರ್.ಎಸ್.ಎಸ್) ಸಲ್ಲಿಸುವ ಮಾರ್ಗವನ್ನು ಕಡ್ಡಾಯವಾಗಿ ಪರಿಗಣಿಸಬೇಕು. ಆ ಮಾರ್ಗವು ಸಂಘಟಕರಿಗೆ ಅನುಕೂಲಕರವಾಗಿರುವಂತೆ ನೋಡಿಕೊಳ್ಳಬೇಕು.
ಹೊಸ ಅರ್ಜಿ ಸಲ್ಲಿಕೆಗೆ ಸೂಚನೆ:
ಆರ್.ಎಸ್.ಎಸ್ ಸಂಘಟಕರು ತಮ್ಮ ಇಚ್ಛೆಯ ಮಾರ್ಗ ಮತ್ತು ಸಮಯದ ವಿವರಗಳೊಂದಿಗೆ ಕಲಬುರಗಿ ಉಪ ಆಯುಕ್ತರಿಗೆ (DC) ಹೊಸ ಅರ್ಜಿ ಸಲ್ಲಿಸಬೇಕು ಮತ್ತು ಇದರ ಪ್ರತಿಯನ್ನು ತಹಶೀಲ್ದಾರ್ ಅವರಿಗೆ ಕಳುಹಿಸಬೇಕು. ಜಿಲ್ಲಾಡಳಿತವು ಈ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸ್ಥಳವನ್ನು ನಿರ್ಧರಿಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
ನವೆಂಬರ್ 2ಕ್ಕೆ ಕಾರ್ಯಕ್ರಮ ಮುಂದೂಡಿಕೆ:
ನ್ಯಾಯಾಲಯದ ಸೂಚನೆಯನ್ನು ಅನುಸರಿಸಿ, ಆರ್.ಎಸ್.ಎಸ್ ಪರ ಅರ್ಜಿದಾರರು ಪಥಸಂಚಲನವನ್ನು ನವೆಂಬರ್ 2 ರಂದು ಚಿತ್ತಾಪುರದಲ್ಲಿ ನಡೆಸಲು ಸಮ್ಮತಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 24ರಂದು ಮಧ್ಯಾಹ್ನ 2:30ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ. ರಾಜಕೀಯ ಸೂಕ್ಷ್ಮ ಪ್ರದೇಶವಾದ ಚಿತ್ತಾಪುರದಲ್ಲಿನ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.