ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತೊಗರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ; ಕಲಬುರಗಿಯಲ್ಲಿ ರೈತರ ಪ್ರತಿಭಟನೆ

Kalaburagi News: ಡಾ. ಸ್ವಾಮಿನಾಥನ್ ಆಯೋಗದ ವರದಿ ಅನ್ವಯ C2 ವೆಚ್ಚಕ್ಕೆ ಶೇ.50 ಲಾಭ ಸೇರಿಸಿ ಕನಿಷ್ಠ ಬೆಂಬಲ ಬೆಲೆ (MSP) ಕಾನೂನು ಜಾರಿಗೆ ಆಗ್ರಹಿಸಿ, ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೊರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದೆ.

ತೊಗರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

ಕಲಬುರಗಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಧರಣಿ ಸತ್ಯಾಗ್ರಹ. -

Profile
Siddalinga Swamy Jan 22, 2026 3:05 PM

ಕಲಬುರಗಿ, ಜ.22: ಡಾ. ಸ್ವಾಮಿನಾಥನ್ ಆಯೋಗದ ವರದಿ ಅನ್ವಯ C2 ವೆಚ್ಚಕ್ಕೆ ಶೇ.50 ಲಾಭ ಸೇರಿಸಿ ಕನಿಷ್ಠ ಬೆಂಬಲ ಬೆಲೆ (MSP) ಕಾನೂನು ಜಾರಿಗೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದೆ. ನಗರದ (Kalaburagi News) ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಗುರುವಾರ ನೂರಾರು ರೈತರು, ಹೋರಾಟಗಾರರು ಎತ್ತಿನ ಬಂಡಿ, ಟ್ರ್ಯಾಕ್ಟರ್ ಜತೆಗೆ ಹೋರಾಟ ನಡೆಸಿ, ರೈತರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಹೋರಾಟವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ಸಂಘಟನೆ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದರು.

ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ರೈತರ ಸಂಕಷ್ಟಕ್ಕೆ ಸರ್ಕಾರ ಮೌನ ವಹಿಸಿರುವುದು ಅಕ್ಷಮ್ಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತೊಗರಿಗೆ ಪ್ರತಿ ಕ್ವಿಂಟಲ್‌ಗೆ 12,500 ರೂ. ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಇತ್ತೀಚಿನ ಅತಿವೃಷ್ಟಿಯಿಂದ ನಷ್ಟಗೊಂಡ ಎಲ್ಲಾ ರೈತರಿಗೆ ತಕ್ಷಣವೇ ಬೆಳೆ ನಷ್ಟ ಪರಿಹಾರ ಪಾವತಿಸಬೇಕು. ಜತೆಗೆ ಬಾಕಿಯಿರುವ ಬೆಳೆ ವಿಮೆ ಹಣವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸಾಲದ ಬಾಧೆ ತಾಳಲಾರದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಸ್ಥಿತಿಯಲ್ಲಿ ಸಾಲ ಮನ್ನಾ ಜಾರಿ ಮಾಡಿ ರೈತರ ಜೀವ ರಕ್ಷಣೆ ಸರ್ಕಾರದ ಕರ್ತವ್ಯ ಎಂದು ಪ್ರತಿಭಟನಾಕಾರರು ಹೇಳಿದರು. ಅಲ್ಲದೆ KMF ಮಾದರಿಯಲ್ಲಿ ತೊಗರಿ ಬೆಳೆಗಾರರ ಸಂರಕ್ಷಣೆಗೆ ಶಾಶ್ವತ ವ್ಯವಸ್ಥೆ ರೂಪಿಸಬೇಕು ಎಂದು ಆಗ್ರಹಿಸಿದರು.

ತೊಗರಿ ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ಖರೀದಿ ಮಾಡದೇ ದಲ್ಲಾಳಿಗಳಿಗೆ ಲಾಭವಾಗುವಂತೆ ನಡೆದುಕೊಳ್ಳುತ್ತಿರುವುದು ತೊಗರಿ ಬೆಳೆಗಾರ ವಿರೋಧಿ ಹಾಗೂ ರೈತ ದ್ರೋಹಿ ನೀತಿ ಎಂದು ಆರೋಪಿಸಿ, ಸರ್ಕಾರದ ನೀತಿಯನ್ನು ತೀವ್ರವಾಗಿ ಖಂಡಿಸಿದರು.

ಇದಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 1,000 ರು.ಪ್ರೋತ್ಸಾಹಧನ ನೀಡಬೇಕು, ಹೊರದೇಶದ ತೊಗರಿ ಆಮದು ಮೇಲೆ ಶೇ.50 ಇಂಪೋರ್ಟ್ ಡ್ಯೂಟಿ ವಿಧಿಸಬೇಕು, ಹಾಗೂ ದ್ವಿದಳ ಧಾನ್ಯಗಳ (ಪಲ್ಸೆಸ್) ಬೋರ್ಡ್ ಅನ್ನು ಬಲಪಡಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಶರಣಬಸಪ್ಪ ಮಮಶೆಟ್ಟಿ, ರೈತರ ಬದುಕಿನ ಪ್ರಶ್ನೆಯಾದ ಈ ಬೇಡಿಕೆಗಳನ್ನು ಸರ್ಕಾರ ಇನ್ನೂ ನಿರ್ಲಕ್ಷ್ಯ ಮಾಡಿದರೆ, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ಜನರ ಸಹಕಾರದಿಂದ ಆಳಂದ ಸೌಂದರ್ಯೀಕರಣಕ್ಕೆ ಹೊಸ ಮೆರುಗು: ಎಸಿ ಸಾಹಿತ್ಯ ಆಲದಕಟ್ಟಿ

ಈ ಸಂದರ್ಭದಲ್ಲಿ ಮುಖಂಡರಾದ ಮೌಲಾಮುಲ್ಲಾ, ಉಮಾಪತಿ ಪಾಟೀಲ್, ಸಿದ್ದು ಎಸ್ ಎಲ್, ಭೀಮಾಶಂಕರ ಮಾಡಿಯಾಳ್, ಅರ್ಜುನ್ ಗೊಬ್ಬೂರು, ಕರೆಪ್ಪ ಕರಗೊಂಡ, ನಾಗಯ್ಯ ಸ್ವಾಮಿ, ಸಿದ್ದಪ್ಪ ಕಲಶೆಟ್ಟಿ, ವೀರಣ್ಣ ಗಂಗಾಣಿ, ಜಾಫರ್ ಖಾನ್, ಗುಂಡಪ್ಪ, ಮೌನೇಶ್ ನಾಲಾವರ್, ಸಿದ್ದಮ್ಮ ಮುತ್ತಗಿ, ಸಿದ್ದಾರ್ಥ ಠಾಕೂರ್, ಶ್ಯಾಮರಾಯ ದಿಗ್ಗಾಂವ್ ಸೇರಿ ನೂರಾರು ರೈತರು ಹೋರಾಟಗಾರರು ಇದ್ದರು.