Mahantesh Bilagi: ಬಡತನ, ಕಿರಾಣಿ ಅಂಗಡಿಯಲ್ಲಿ ಕೆಲಸ, ಲಂಚ ಮುಟ್ಟದ ಶಪಥ: ಹೀಗಿತ್ತು ಮಹಾಂತೇಶ ಬೀಳಗಿ ಬದುಕು
IAS officer Mahantesh Bilagi : ಬಡತನದಲ್ಲಿ ಬೆಳೆದ ಮಹಾಂತೇಶ್ ಬೀಳಗಿ, ಕಷ್ಟದ ದಿನಗಳಲ್ಲೇ ಉತ್ತಮ ವಿದ್ಯಾಭ್ಯಾಸ ಪಡೆದು ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು. ಅವರ ಬಾಲ್ಯದಲ್ಲಿ ಎರಡು ಹೊತ್ತು ಊಟಕ್ಕೂ ಕಷ್ಟಪಡುತ್ತಿದ್ದರು. ಅವರ ತಾಯಿ ವಿಧವಾ ವೇತನಕ್ಕಾಗಿ ಮನವಿ ಮಾಡಿದಾಗ ಲಂಚಕ್ಕಾಗಿ ಬೇಡಿಕೆಯಿಟ್ಟ ಸರಕಾರಿ ಅಧಿಕಾರಿಯ ದುಷ್ಟತನವನ್ನು ಕಂಡು, ಮುಂದೆ ಎಂದಿಗೂ ಲಂಚ ತೆಗೆದುಕೊಳ್ಳದೆ ಕೆಲಸ ಮಾಡಬೇಕು ಎಂದು ಶಪಥ ಮಾಡಿದ್ದರು.
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ -
ಬೆಳಗಾವಿ, ನ.26: ಸರಳ ಹಾಗೂ ಸಜ್ಜನಿಕೆಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (IAS officer Mahantesh Bilagi death) ಸಾವು ರಾಜ್ಯವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಕಲಬರುಗಿಯ (Kalaburagi) ಜೇವರ್ಗಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ (Car Accident) ಮಹಾಂತೇಶ್ ಬೀಳಗಿ ಮೃತಪಟ್ಟಿದ್ದರು. ಬೆಳಗಾವಿಯ (Belagavi) ರಾಮದುರ್ಗಕ್ಕೆ ಮೃತದೇಹ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂತಿಮ ದರ್ಶನದ ಬಳಿಕ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ (Funeral) ನಡೆಯಲಿದೆ.
ಬಡತನದಲ್ಲಿ ಬೆಳೆದ ಮಹಾಂತೇಶ್ ಬೀಳಗಿ, ಕಷ್ಟದ ದಿನಗಳಲ್ಲೇ ಉತ್ತಮ ವಿದ್ಯಾಭ್ಯಾಸ ಪಡೆದು ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು. ಮಹಾಂತೇಶ್ ಬೀಳಗಿ ಮೃತದೇಹವನ್ನ ರಾಮದುರ್ಗಕ್ಕೆ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾಮದುರ್ಗ ಪಟ್ಟಣದ ಪಂಚಗಟಿ ಮಠದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 9 ಘಂಟೆಯಿಂದ ಮಧ್ಯಾಹ್ನ 2 ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಲಿಂಗಾಯತ ಸಂಪ್ರದಾಯದಂತೆ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ ನಡೆಯಲಿದೆ.
ಮಹಾಂತೇಶ್ ಬೀಳಗಿ ಬಡತನದ ಹಿನ್ನೆಲೆಯಿಂದ ಬಂದವರು. ಅವರ ಬಾಲ್ಯದಲ್ಲಿ ಎರಡು ಹೊತ್ತು ಊಟಕ್ಕೂ ಕಷ್ಟಪಡುತ್ತಿದ್ದರು. ಅವರು ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿ, ತಮ್ಮ ಶಿಕ್ಷಣಕ್ಕೆ ಹಣವನ್ನು ಗಳಿಸಿಕೊಂಡಿದ್ದರು. ಅವರ ತಾಯಿ ಊರೂರಿನಲ್ಲಿ ಹಣ್ಣು ಮಾರಿ ಕುಟುಂಬವನ್ನು ಸಾಗಿಸುತ್ತಿದ್ದರು. ಪುಸ್ತಕಗಳನ್ನು ಖರೀದಿಸಲು ಹಣವಿಲ್ಲದಿದ್ದಾಗ, ತಮ್ಮ ಆತ್ಮೀಯ ಸ್ನೇಹಿತರು ಮತ್ತು ಸಹಪಾಠಿಗಳಿಂದ ಪುಸ್ತಕಗಳನ್ನು ಪಡೆದು, ಗ್ರಂಥಾಲಯಗಳನ್ನು ಬಳಸಿಕೊಂಡು ಅಭ್ಯಾಸ ಮಾಡುತ್ತಿದ್ದರು ಎಂದು ಮಹಾಂತೇಶ್ ಬೀಳಗಿ ಅವರ ಬಾಲ್ಯ ಸ್ನೇಹಿತರು ನೆನಪಿಸಿಕೊಂಡಿದ್ದಾರೆ.
ಪ್ರಾಮಾಣಿಕ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಬದುಕಿನ ಕತೆ
ತಮಗೆ 5 ವರ್ಷವಿದ್ದಾಗ ತಮ್ಮ ತಂದೆಯನ್ನು ಮಹಾಂತೇಶ್ ಬೀಳಗಿ ಕಳೆದುಕೊಂಡರು. ಕಡು ಬಡತನದಲ್ಲಿ ತಾಯಿ ಕೂಲಿ ನಾಲಿ ಮಾಡಿ ಮಗ ಮಹಾಂತೇಶ್ ಬೀಳಗಿಯನ್ನು ಸಾಕಿ ಓದಿಸಿದರು. ತಮಗೆ ವಿಧವಾ ವೇತನ ಬರುತ್ತದೆ ಎನ್ನುವ ಮಾಹಿತಿ ಆಕೆಗೆ ಸಿಕ್ಕಿತ್ತು. ಇದಕ್ಕಾಗಿ ಅಧಿಕಾರಿಯ ಬಳಿಗೆ ತೆರಳಿ, ತಮ್ಮ ಕಡು ಬಡತನದ ಜೀವನದ ಬಗ್ಗೆ ಹೇಳಿಕೊಂಡು ವಿಧವಾ ವೇತನಕ್ಕೆ ಮನವಿ ಮಾಡಿದರು. ಮಾಸಿಕ 25 ರೂಪಾಯಿ ವಿಧವಾ ವೇತನ ಮಾಡಿಕೊಡಲು ಆ ಅಧಿಕಾರಿ ಮಾತ್ರ ರೂ.100 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಷಯ ತಿಳಿದ ಮಹಾಂತೇಶ್ ಬೀಳಗಿ ಅವರು, ಅಂದೇ ತಾನು ಲಂಚ ಪಡೆಯದ ಅಧಿಕಾರಿಯಾಗಬೇಕು ಎಂಬುದಾಗಿ ನಿರ್ಧರಿಸಿದರು.
ಬಡತನದ ನಡುವೆಯೂ ಮಹಾಂತೇಶ್ ಅವರಿಗೆ ಅಧ್ಯಯನದ ಬಗ್ಗೆ ಇದ್ದ ಅಗಾಧ ಆಸಕ್ತಿಯ ಬಗ್ಗೆ ಪಿಯುಸಿ ಮತ್ತು ಡಿಗ್ರಿಯಲ್ಲಿ ಬೀಳಗಿ ಅವರೊಂದಿಗೆ ಓದಿದ್ದ ಸ್ನೇಹಿತರು ವಿವರಿಸಿದ್ದಾರೆ. ಆರಂಭದಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದರೂ, 10ನೇ ತರಗತಿಯ ನಂತರ ಓದಿನಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ನಂತರದ ದಿನಗಳಲ್ಲಿ ಪ್ರತಿ ತರಗತಿಯಲ್ಲೂ ಪ್ರಥಮ ರ್ಯಾಂಕ್ ಗಳಿಸಿ ಎಲ್ಲರ ಗಮನ ಸೆಳೆದರು. ಬಸವೇಶ್ವರ ಕಾಲೇಜಿನಲ್ಲಿ ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಅವರು, ಸಿ ಎಸ್ ಬೆಂಬಳಗಿ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು ಎಂದು ಸ್ನೇಹಿತರು ನೆನಪಿಸಿಕೊಂಡಿದ್ದಾರೆ.
ಕಾರು ಅಪಘಾತ; ಹಿರಿಯ ಐಎಎಸ್ ಅಧಿಕಾರಿ ಸೇರಿ ಮೂವರ ಸಾವು
ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅವರು ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದರು. ಧಾರವಾಡದಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ತೋರಿಸಿದ್ದರು.