ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ; ಅಜ್ಮಲ್ ಗೋಳಾ 24ನೇ ಮೇಯರ್, ಫರ್ಹಾನಾ ಖುಸ್ರೋ ಜಾಗೀರದಾರ್ ಉಪ ಮೇಯರ್
Kalaburagi City Corporation Election: ಕಲಬುರಗಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜ್ಮಲ್ ಗೋಳಾ ಅವರು 35 ಮತಗಳನ್ನು ಪಡೆದು 24ನೇ ಮೇಯರ್ ಆಗಿ ಆಯ್ಕೆಯಾದರೆ, ಉಪ ಮೇಯರ್ ಆಗಿ ಕಾಂಗ್ರೆಸ್‌ನ ಫರ್ಹಾನಾ ಖುಸ್ರೋ ಜಾಗೀರದಾರ್ ಆಯ್ಕೆಯಾಗಿದ್ದಾರೆ.
-
ವಿಶ್ವವಾಣಿ ಸುದ್ದಿಮನೆ, ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆಗೆ ಕಾಂಗ್ರೆಸ್ ಮತ್ತೊಮ್ಮೆ ಏರಿದ್ದು, ಮೇಯರ್ ಹಾಗೂ ಉಪ ಮೇಯರ್ ಎರಡೂ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಮೇಯರ್ ಚುನಾವಣೆಯಲ್ಲಿ (Kalaburagi City Corporation Election) ಕಾಂಗ್ರೆಸ್ ಅಭ್ಯರ್ಥಿ ಅಜ್ಮಲ್ ಗೋಳಾ (Ajmal Gola) ಅವರು 35 ಮತಗಳನ್ನು ಪಡೆದು 24ನೇ ಮೇಯರ್ ಆಗಿ ಆಯ್ಕೆಯಾದರೆ, ಉಪ ಮೇಯರ್ ಆಗಿ ಕಾಂಗ್ರೆಸ್‌ನ ಫರ್ಹಾನಾ ಖುಸ್ರೋ ಜಾಗೀರದಾರ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಪಾಲಿಕೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ.
ಬಿಜೆಪಿ ಅಭ್ಯರ್ಥಿ ಗುರುರಾಜ್ ಪಟ್ಟಣ ಅವರು 26 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ಅಲಿಮ್ ಪಟೇಲ್ ಅವರಿಗೆ ಮೂರು ಮತಗಳು ಲಭಿಸಿದವು. ಅಜ್ಮಲ್ ಗೋಳಾ ಅವರು 35 ಮತಗಳೊಂದಿಗೆ ಸ್ಪಷ್ಟ ಬಹುಮತ ಸಾಧಿಸಿ ಮೇಯರ್ ಸ್ಥಾನವನ್ನು ಅಲಂಕರಿಸಿದರು.
ಮೇಯರ್ ಹಾಗೂ ಉಪ ಮೇಯರ್ ಎರಡೂ ಸ್ಥಾನಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಒಲಿದಿರುವುದು ಚುನಾವಣೆಯ ಪ್ರಮುಖ ಅಂಶವಾಗಿದೆ. ಶಾಸಕ ಖನೀಜ್ ಫಾತಿಮಾ ಅವರ ಆಪ್ತರಾಗಿರುವ ಅಜ್ಮಲ್ ಗೋಳಾ ಅವರಿಗೆ ಮೇಯರ್ ಪಟ್ಟ ಒಲಿದಿದ್ದು, ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.

23ನೇ ಮೇಯರ್ ವರ್ಷಾ ಜಾನೆ ಹಾಗೂ ಉಪ ಮೇಯರ್ ತೃಪ್ತಿ ಲಾಖೆ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆ ಚುನಾವಣೆ ನಡೆಯಿತು. ಪ್ರಾದೇಶಿಕ ಆಯುಕ್ತೆ ಜಾಹೀರಾ ನಸ್ಸೀಮ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು.
ಜನಪ್ರತಿನಿಧಿಗಳು ಹಾಜರ್:
ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಖನೀಜ್ ಫಾತಿಮಾ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಚಂದ್ರಶೇಖರ್ ಪಾಟೀಲ್ ಹಾಗೂ ಜಗದೇವ ಗುತ್ತೇದಾರ್ ಪಾಲ್ಗೊಂಡಿದ್ದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದರು.
ಬ್ಯಾಂಡ್, ಬಣ್ಣ, ಸಿಹಿ ಹಂಚಿಕೆ:
ಅಜ್ಮಲ್ ಗೋಳಾ ಹಾಗೂ ಫರನಾ ಖುಸ್ರೋ ಜಾಗೀರದಾರ್ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಆವರಣದ ಹೊರಗೆ ವಿಜಯೋತ್ಸವ ಆಚರಿಸಿದರು. ಬ್ಯಾಂಡ್ ಬಾರಿಸಿ, ಬಣ್ಣ ಎರಚಿ, ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗಿ ಗೆಲುವನ್ನು ಸಂಭ್ರಮಿಸಿದರು.