Kalaburagi Breaking: ಕಪನೂರ ಕೈಗಾರಿಕಾ ಪ್ರದೇಶದಲ್ಲಿ ದಾಲ್‌ಮಿಲ್‌ನಲ್ಲಿ ಪರವಾನಗಿ ಇಲ್ಲದೆ ಸಂಗ್ರಹ: ಅಕ್ರಮ ಯೂರಿಯಾ ದಂಧೆ ಪತ್ತೆ; 1,250 ಚೀಲ ವಶ
ಖಚಿತ ಮಾಹಿತಿ ಹಾಗೂ ದೂರು ಆಧರಿಸಿ ಕೃಷಿ ಇಲಾಖೆ ಅಧಿಕಾರಿಗಳ ತಂಡ ದಾಲ್‌ಮಿಲ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ, ನಿಯಮಬಾಹಿರವಾಗಿ ಸಂಗ್ರಹಿಸಿಟ್ಟಿದ್ದ ಯೂರಿಯಾ ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಗೊಬ್ಬರವನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಗೊಬ್ಬರದ ಅಂದಾಜು ಮೌಲ್ಯ ₹3.72 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-
ಮೂಲ ಚೀಲಗಳಿಂದ ಗೊಬ್ಬರ ಬದಲಿಸಿ ಮಿಶ್ರಣ ಮಾಡುತ್ತಿದ್ದ ಆರೋಪ
ಕಲಬುರಗಿ: ನಗರದ ಹೊರವಲಯದ ಕಪನೂರ ಕೈಗಾರಿಕಾ ಪ್ರದೇಶದಲ್ಲಿರುವ ದಾಲ್‌ಮಿಲ್ ವೊಂದರಲ್ಲಿ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟಿದ್ದ ಸುಮಾರು 1,250 ಚೀಲ ಯೂರಿಯಾ ಗೊಬ್ಬರ ವನ್ನು ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಗೊಬ್ಬರವನ್ನು ಮೂಲ ಚೀಲಗಳಿಂದ ತೆಗೆದು ಬಿಳಿ ಚೀಲಗಳಿಗೆ ತುಂಬಿ ಮಿಶ್ರಣ ಮಾಡಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಖಚಿತ ಮಾಹಿತಿ ಹಾಗೂ ದೂರು ಆಧರಿಸಿ ಕೃಷಿ ಇಲಾಖೆ ಅಧಿಕಾರಿಗಳ ತಂಡ ದಾಲ್‌ಮಿಲ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ, ನಿಯಮಬಾಹಿರವಾಗಿ ಸಂಗ್ರಹಿಸಿಟ್ಟಿದ್ದ ಯೂರಿಯಾ ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಗೊಬ್ಬರವನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿ ಕೊಂಡ ಗೊಬ್ಬರದ ಅಂದಾಜು ಮೌಲ್ಯ ₹3.72 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Kalaburagi Bandh: ಬರ ಘೋಷಣೆಗೆ ಆಗ್ರಹಿಸಿ ಕಲಬುರಗಿ ಬಂದ್: ರೈತರ ಆಕ್ರೋಶ, ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ
ರಸಗೊಬ್ಬರ ಸಂಗ್ರಹಣೆ ಹಾಗೂ ಸಾಗಾಟಕ್ಕೆ ಅಗತ್ಯ ಪರವಾನಗಿ ಇಲ್ಲದಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಯೂರಿಯಾವನ್ನು ಮೂಲ ಪ್ಯಾಕಿಂಗ್‌ನಿಂದ ಬೇರ್ಪಡಿಸಿ ಬೇರೆ ಚೀಲಗಳಿಗೆ ತುಂಬಲಾಗುತ್ತಿತ್ತು ಎನ್ನಲಾಗಿದ್ದು, ಇದರ ಹಿಂದಿನ ಉದ್ದೇಶ ಹಾಗೂ ಯಾರಿಗಾಗಿ ಗೊಬ್ಬರ ಸಂಗ್ರಹಿಸಲಾಗಿತ್ತು ಎಂಬುದರ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿ ದ್ದಾರೆ.
ಉಪ ಕೃಷಿ ನಿರ್ದೇಶಕ ಡಾ.ಬಾಲರಾಜ್ ರಂಗರಾವ್, ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕಿ ಕವಿತಾ ಹಾಗೂ ಕೃಷಿ ಅಧಿಕಾರಿ ಜಹಾಂಗೀರ್ ಅವರ ತಂಡ ಕಾರ್ಯಾಚರಣೆ ನಡೆಸಿತು.
ಘಟನೆ ಬಳಿಕ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಅಕ್ರಮ ಸಂಗ್ರಹಣೆ, ಸಾಗಾಟ ಹಾಗೂ ಗೊಬ್ಬರದ ಪ್ಯಾಕಿಂಗ್ ಬದಲಾವಣೆಯಲ್ಲಿ ಯಾರ ಪಾತ್ರವಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ರಸಗೊಬ್ಬರ ನಿಯಂತ್ರಣ ನಿಯಮಗಳನ್ವಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮವಾಗಿ ಗೊಬ್ಬರ ಸಂಗ್ರಹಿಸಲು ದಾಲ್‌ಮಿಲ್‌ನಲ್ಲಿನ ಸ್ಥಳವನ್ನು ಬಾಡಿಗೆಗೆ ನೀಡಿರುವುದು ಕೂಡ ನಿಯಮಬಾಹಿರವಾಗಿದ್ದು, ಇದಕ್ಕೆ ಅವಕಾಶ ನೀಡಿದ ಮಿಲ್ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಬಾಲರಾಜ್ ರಂಗರಾವ್ ತಿಳಿಸಿದ್ದಾರೆ.
ಸಬ್‌ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃಷಿ ಇಲಾಖೆ ಹಾಗೂ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.