Kalaburagi News: ಬ್ರಿಡ್ಜ್ ಮೇಲಿಂದ ಭೀಮಾ ನದಿಗೆ ಲಾರಿ ಬಿದ್ದು ಚಾಲಕ ನಾಪತ್ತೆ
Kalaburagi News: ಕಲಬುರಗಿ ಜಿಲ್ಲೆಯ ಇಟಗಾ ಮತ್ತು ಗಾಣಗಾಪುರ್ ಮಧ್ಯೆ ಇರುವ ಬ್ರಿಡ್ಜ್ ಮೇಲಿಂದ ಲಾರಿ ಬಿದ್ದು ಚಾಲಕ ನಾಪತ್ತೆಯಾಗಿದ್ದಾನೆ.

ಕಲಬುರಗಿ: ಇಟಗಾ ಮತ್ತು ಗಾಣಗಾಪುರ್ ಮಧ್ಯೆ ಇರುವ ಬ್ರಿಡ್ಜ್ ಮೇಲಿಂದ ಕಬ್ಬಿನ ಲಾರಿಯೊಂದು ಭೀಮಾ ನದಿಗೆ ಬಿದ್ದು ಚಾಲಕ ನಾಪತ್ತೆಯಾಗಿರುವ ಘಟನೆ (Kalaburagi News) ನಡೆದಿದೆ. ಲಾರಿಯಲ್ಲಿರುವ ಕಬ್ಬು ಜೇವರ್ಗಿ ತಾಲೂಕಿನ ನೆಲೋಗಿ ರೈತರದ್ದಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ಮಧ್ಯರಾತ್ರಿ ಘಟನೆ ನಡೆದಿದೆ ಎನ್ನಲಾಗಿದ್ದು, ಲಾರಿ ಚಾಲಕ ನಾಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಸಿಪಿಐ ಚನ್ನಯ್ಯ ಹಿರೇಮಠ್, ಪಿಎಸ್ಐ ರಾಹುಲ್ ಪಾವಡೆ, ಪೊಲೀಸ್ ಸಿಬ್ಬಂದಿ ಸಂಗಣ್ಣ ಸೇರಿ ಅಗ್ನಿ ಶಾಮಕ ದಳ ಭೇಟಿ ನೀಡಿ ಪರಿಶೀಲಿಸಿದ್ದು, ನದಿಯಿಂದ ಲಾರಿ ಮೇಲೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆ ಗಾಣಗಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸುದ್ದಿಯನ್ನೂ ಓದಿ | Viral Video: ರಜೆಯಲ್ಲಿ ಮನೆಗೆ ತೆರಳುತ್ತಿದ್ದ ಯೋಧನ ದುರ್ಮರಣ; ರೈಲು ನಿಲ್ದಾಣದಲ್ಲಿ ನಿಜವಾಗ್ಲೂ ನಡೆದಿದ್ದೇನು?
ಹಾವು ಕಡಿದು 5 ವರ್ಷದ ಅಂಗನವಾಡಿ ಬಾಲಕಿ ಸಾವು
ಮುಂಡಗೋಡ: ಹಾವು ಕಡಿದು ಅಂಗನವಾಡಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ (Snake bite) ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಮಯೂರಿ ಸುರೇಶ ಕುಂಬಳಪ್ಪನವರ (5) ಮೃತ ಬಾಲಕಿ.
ಮಯೂರಿ ಎಂದಿನಂತೆ ಅಂಗನವಾಡಿಗೆ ಹೋಗಿದ್ದ ವೇಳೆ ಮೂತ್ರ ವಿಸರ್ಜನೆಗೆಂದು ಅಂಗನವಾಡಿಯ ಹಿಂಬದಿ ತೆರಳಿದಾಗ ಹಾವು ಕಡಿದಿದೆ. ಬಾಲಕಿ ತಕ್ಷಣ, ಕಾಲಿಗೆ ಹಾವು ಕಡಿದಿದೆ ಎಂದು ಅಳುತ್ತಾ ಓಡಿ ಬಂದಿದ್ದಾಳೆ. ಈ ವೇಳೆ ಸ್ಥಳೀಯರು ಆಟೋದಲ್ಲಿ ಬಾಲಕಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ.
ಸುರೇಶ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಮೃತ ಮಯೂರಿ ಕಿರಿಯವಳು. ಬಾಲಕಿಗೆ ಹಾವು ಕಡಿದು ಮೃತಪಟ್ಟಿದ್ದಾಳೆ ಎಂಬ ಸುದ್ದಿ ಕೇಳಿ ಕುಟುಂಬವರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದು ಅಂಗನವಾಡಿ ಕೇಂದ್ರಕ್ಕೆ ಸಿಪಿಐ ರಂಗನಾಥ ನೀಲಮ್ಮನವರ ಭೇಟಿ ನೀಡಿ ಕಾರ್ಯಕರ್ತೆ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು ಮೃತ ಬಾಲಕಿಯ ಮನೆಗೆ ಭೇಟಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಿಕಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.