Kalyana Karnataka: ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ದನಿ ಎತ್ತಲಿ, ರಾಜಕೀಯ ಮೆಚ್ಚಿಸುವ ಕೆಲಸ ಬೇಡ: ದೇವೇಂದ್ರ ದೇಸಾಯಿ ಕಲ್ಲೂರ್
ಕಲ್ಯಾಣ ಕರ್ನಾಟಕವು ದಶಕಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಶಿಕ್ಷಣ, ಉದ್ಯೋಗ, ಕೈಗಾರಿಕೆ, ಆರೋಗ್ಯ, ರಸ್ತೆ ಹಾಗೂ ನೀರಾವರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇನ್ನೂ ಸಮಸ್ಯೆಗಳು ಮುಂದು ವರಿದಿವೆ. ಹೀಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇದುವರೆಗೆ ಕೈಗೊಂಡಿರುವ ಕಾಮಗಾರಿ ಗಳೇನು, ಬಿಡುಗಡೆಯಾದ ಅನುದಾನ ಎಷ್ಟು, ಪೂರ್ಣಗೊಂಡ ಯೋಜನೆಗಳೆಷ್ಟು ಎಂಬುದನ್ನು ದಸ್ತಿ ಅವರು ಸರ್ಕಾರದ ಮುಂದೆ ಪ್ರಶ್ನಿಸಬೇಕು
-
ಕಲಬುರಗಿ: ಕಲ್ಯಾಣ ಕರ್ನಾಟಕ(Kalyana Karnataka)ದ ನೈಜ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಬದಲು ರಾಜಕೀಯ ನಾಯಕರನ್ನು ಮೆಚ್ಚಿಸುವ ಹೇಳಿಕೆಗಳಿಗೆ ಆದ್ಯತೆ ನೀಡುವುದು ಹೋರಾಟ ಗಾರರ ಜವಾಬ್ದಾರಿಯಲ್ಲ ಎಂದು ಬಿಜೆಪಿ ಪಕ್ಷದ ಒಬಿಸಿ ಮೋರ್ಚಾದ ಕಲಬುರಗಿ ನಗರ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ್ ಹೇಳಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರು ಇತ್ತೀಚೆಗೆ ಕಲಬುರಗಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿ ರುವ ಅವರು, ಏಳು ಜಿಲ್ಲೆಗಳ ಅಭಿವೃದ್ಧಿ, ಜನರ ಹಕ್ಕು ಹಾಗೂ ಮೂಲಸೌಕರ್ಯಗಳಿಗಾಗಿ ನಿರಂತರವಾಗಿ ಸರ್ಕಾರವನ್ನು ಪ್ರಶ್ನಿಸುವ ಅಗತ್ಯವಿದೆ ಎಂದರು.
ಕಲ್ಯಾಣ ಕರ್ನಾಟಕವು ದಶಕಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಶಿಕ್ಷಣ, ಉದ್ಯೋಗ, ಕೈಗಾರಿಕೆ, ಆರೋಗ್ಯ, ರಸ್ತೆ ಹಾಗೂ ನೀರಾವರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇನ್ನೂ ಸಮಸ್ಯೆಗಳು ಮುಂದುವರಿದಿವೆ. ಹೀಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇದುವರೆಗೆ ಕೈಗೊಂಡಿರುವ ಕಾಮಗಾರಿಗಳೇನು, ಬಿಡುಗಡೆಯಾದ ಅನುದಾನ ಎಷ್ಟು, ಪೂರ್ಣಗೊಂಡ ಯೋಜನೆಗಳೆಷ್ಟು ಎಂಬುದನ್ನು ದಸ್ತಿ ಅವರು ಸರ್ಕಾರದ ಮುಂದೆ ಪ್ರಶ್ನಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B Y Vijayendra) ಅವರನ್ನು ಟೀಕಿಸುವುದಕ್ಕಷ್ಟೇ ಸೀಮಿತವಾಗದೆ, ಕಲ್ಯಾಣ ಕರ್ನಾಟಕದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಡಳಿತ ಪಕ್ಷದ ಜನಪ್ರತಿನಿಧಿಗಳು ಈ ಭಾಗದ ಅಭಿವೃದ್ಧಿಗೆ ನೀಡಿರುವ ಕೊಡುಗೆಯ ಬಗ್ಗೆಯೂ ದನಿ ಎತ್ತಲಿ. ಆಡಳಿತ ಪಕ್ಷದ ಸಚಿವರ ಕಾರ್ಯವೈಖರಿಯನ್ನು ಪ್ರಶ್ನಿಸುವ ಧೈರ್ಯ ತೋರಬೇಕು ಎಂದರು.
ಕೇವಲ ಕಾಂಗ್ರೆಸ್ ನಾಯಕರನ್ನು ಮೆಚ್ಚಿಸುವ ಉದ್ದೇಶದಿಂದ ವಿಜಯೇಂದ್ರ ವಿರುದ್ಧ ಮಾತನಾಡು ವುದು ಹೋರಾಟದ ಆಶಯಕ್ಕೆ ಪೂರಕವಲ್ಲ. ಹೋರಾಟಗಾರರ ನಿಲುವು ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿರದೆ ಜನರ ಪರವಾಗಿರಬೇಕು. ರಾಜಕೀಯ ನಾಯಕರನ್ನು ಮೆಚ್ಚಿಸುವು ದಕ್ಕಿಂತ ಕಲ್ಯಾಣ ಕರ್ನಾಟಕದ ಜನರ ವಿಶ್ವಾಸ ಗಳಿಸುವುದು ಮುಖ್ಯ ಎಂದು ಹೇಳಿದರು.
371(ಜೆ) ಹಕ್ಕು ರಕ್ಷಣೆಗೆ ಒತ್ತು
ಸಂವಿಧಾನದ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಜನರಿಗೆ ದೊರೆತಿರುವ ವಿಶೇಷ ಸೌಲಭ್ಯ ಗಳು ಹಾಗೂ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಈ ಹಕ್ಕುಗಳಿಗೆ ಧಕ್ಕೆಯಾಗುವ ಯಾವುದೇ ಪ್ರಯತ್ನದ ವಿರುದ್ಧ ದಸ್ತಿ ಅವರು ಹೋರಾಟ ನಡೆಸಬೇಕು. ವಿಜಯಪುರ ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಸೇರಿಸುವ ವಿಚಾರದಲ್ಲಿಯೂ ಸಂವಿಧಾನಾತ್ಮಕ ಅಂಶಗಳು ಮತ್ತು ಕಲ್ಯಾಣ ಕರ್ನಾಟಕದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯವೈಖರಿ, ಅನುದಾನದ ಸಮರ್ಪಕ ಬಳಕೆ, ಖಾಲಿ ಸರ್ಕಾರಿ ಹುದ್ದೆಗಳ ಭರ್ತಿ, 371(ಜೆ) ಪರಿಣಾಮಕಾರಿ ಅನುಷ್ಠಾನ ಹಾಗೂ ಕೈಗಾರಿಕೆಗಳ ಸ್ಥಾಪನೆ ಕುರಿತು ಸರ್ಕಾರವನ್ನು ನಿರಂತರವಾಗಿ ಪ್ರಶ್ನಿಸಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗ, ರೈತರಿಗೆ ಅಗತ್ಯ ಸೌಲಭ್ಯ ಹಾಗೂ ಕಲಬುರಗಿ ಸೇರಿದಂತೆ ಏಳು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ರೂಪಿಸಬೇಕು ಎಂದು ದೇವೇಂದ್ರ ದೇಸಾಯಿ ಕಲ್ಲೂರ್ ಹೇಳಿದರು.
ರಾಜಕೀಯ ಪಕ್ಷಗಳನ್ನು ಮೆಚ್ಚಿಸುವುದಕ್ಕಿಂತ ಕಲ್ಯಾಣ ಕರ್ನಾಟಕದ ಜನರ ಹಕ್ಕು, ಅಭಿವೃದ್ಧಿ ಮತ್ತು ಭವಿಷ್ಯದ ಪರವಾಗಿ ಹೋರಾಟ ನಡೆಸಬೇಕು. ದಸ್ತಿ ಅವರ ಹೋರಾಟವು ಜನಪರವಾಗಿರಲಿ ಎಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ.