ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vote theft Case: ಮತಗಳ್ಳತನ ಪ್ರಕರಣ: ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ ಸೇರಿ ಹಲವರ ಮನೆ ಮೇಲೆ ಎಸ್ಐಟಿ ದಾಳಿ

Kalaburagi News: 'ವೋಟ್ ಚೋರಿ' ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಎಸ್ಐಟಿ ಅಧಿಕಾರಿಗಳು ಕಲಬುರಗಿ ಗುಬ್ಬಿ ಕಾಲೋನಿ, ವಸಂತ ನಗರ, ಹಾಗೂ ಖುಬಾ ಬಡಾವಣೆಯ ವಿವೇಕಾನಂದ ನಗರದ ಪ್ರಮುಖ ರಾಜಕೀಯ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ ಸೇರಿ ಹಲವರ ಮನೆ ಮೇಲೆ ಎಸ್ಐಟಿ ದಾಳಿ

-

Prabhakara R Prabhakara R Oct 17, 2025 3:56 PM

ಕಲಬುರಗಿ: ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ 'ವೋಟ್ ಚೋರಿ' (Vote theft Case) ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ (ವಿಶೇಷ ತನಿಖಾ ತಂಡ) ಕಲಬುರಗಿಯಲ್ಲಿ ತನ್ನ ಶೋಧ ಕಾರ್ಯವನ್ನು ಸತತ ಮೂರನೇ ದಿನವೂ ಮುಂದುವರಿಸಿದೆ. ಶುಕ್ರವಾರ ಎಸ್ಐಟಿ ಎಸ್ಪಿ ಶುಭನ್ವಿತಾ ಅವರ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ನಗರದ ಹಲವು ಪ್ರಮುಖರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.

ಮಾಜಿ ಶಾಸಕರ ಮನೆ ಮೇಲೆ ಎಸ್ಐಟಿ ದಾಳಿ:

ತನಿಖೆ ಚುರುಕುಗೊಳಿಸಿದ ಎಸ್ಐಟಿ ಅಧಿಕಾರಿಗಳು ಮತ್ತು 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗುಬ್ಬಿ ಕಾಲೋನಿ, ವಸಂತ ನಗರ, ಹಾಗೂ ಖುಬಾ ಬಡಾವಣೆಯ ವಿವೇಕಾನಂದ ನಗರದಲ್ಲಿ ದಾಳಿ ನಡೆಸಿದ್ದಾರೆ. ಪ್ರಮುಖವಾಗಿ, ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ ಅವರ ಗುಬ್ಬಿ ಕಾಲೋನಿಯ ಮನೆಯ ಮೇಲೆ ಎಸ್ಐಟಿ ತಂಡ ಶೋಧ ಕಾರ್ಯ ನಡೆಸಿದೆ. ಈ ದಾಳಿಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

SIT Raid  (1)

ಚಾರ್ಟೆಡ್ ಅಕೌಂಟೆಂಟ್ ನಿವಾಸದಲ್ಲೂ ಶೋಧ:

ಇದೇ ವೇಳೆ, ಎಸ್ಐಟಿಯ ಇನ್ನೊಂದು ತಂಡವು ನಗರದ ಖುಬಾ ಬಡಾವಣೆಯ ವಿವೇಕಾನಂದ ನಗರದಲ್ಲಿರುವ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಬಿಜೆಪಿ ಮಹಾನಗರ ಅಧ್ಯಕ್ಷ ಚಂದು ಪಾಟೀಲ್ ಆಪ್ತ ಆಗಿರುವ ಚಾರ್ಟೆಡ್ ಅಕೌಂಟೆಂಟ್ ಮಲ್ಲಿಕಾರ್ಜುನ ಮಹಾಂತಗೋಳ ಅವರ ಮನೆ ಮೇಲೂ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದೆ.

ಪ್ರಕರಣದ ಹಿನ್ನೆಲೆ:

ಸುಮಾರು ಎರಡೂವರೆ ವರ್ಷಗಳ ಹಿಂದೆ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ಮತ ಚೋರಿ ಆರೋಪ ಮಾಡಿ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಈಗ ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಮಾಜಿ ಶಾಸಕರ ಮನೆಯ ಮೇಲೆ ದಾಳಿ ನಡೆದಿರುವುದು ಮಹತ್ವ ಪಡೆದಿದೆ.

ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿದ ಪ್ರಕರಣ:

ಈ ವೋಟ್ ಚೋರಿ ಪ್ರಕರಣವು ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಆರೋಪದ ಕುರಿತು ಪ್ರಸ್ತಾಪಿಸಿ, ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದರು. ಇದೀಗ ಎಸ್ಐಟಿ ದಾಳಿ ನಡೆದಿರುವುದು, ಪ್ರಕರಣದ ರಾಜಕೀಯ ಆಯಾಮಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಎಸ್ಐಟಿ ತನ್ನ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಮುಖರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ.