S.L. Bhyrappa: ನನ್ನ ಸಾಧನೆಗೆ ತಾಯಿಯೇ ಸ್ಫೂರ್ತಿ; ಹುಟ್ಟೂರ ಸನ್ಮಾನದಲ್ಲಿ ಮನಬಿಚ್ಚಿ ಮಾತನಾಡಿದ್ದ ಭೈರಪ್ಪ
ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿದ ಡಾ. ಎಸ್.ಎಲ್. ಭೈರಪ್ಪ ಇನ್ನಿಲ್ಲ. 1931ರ ಜುಲೈ 20ರಂದು ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ ಅವರಿಗೆ 94 ವರ್ಷ ವಯಸ್ಸಾಗಿತ್ತು. ಈ ವರ್ಷದ ಮಾರ್ಚ್ 9ರಂದು ಅವರಿಗೆ ಹುಟ್ಟೂರು ಸಂತೇಶಿವರದಲ್ಲಿ ಸನ್ಮಾನ ನಡೆದಿತ್ತು. ಈ ವೇಳೆ ಅವರು ಮಾತನಾಡಿ ನನ್ನ ಸಾದನೆಗೆ ತಾಯಿಯೇ ಸ್ಫೂರ್ತಿ ಎಂದು ಹೇಳಿದ್ದರು.

-

ಬೆಂಗಳೂರು: ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿದ ಡಾ. ಎಸ್.ಎಲ್. ಭೈರಪ್ಪ ಇನ್ನಿಲ್ಲ. 1931ರ ಜುಲೈ 20ರಂದು ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ ಅವರಿಗೆ 94 ವರ್ಷ ವಯಸ್ಸಾಗಿತ್ತು. ಬುಧವಾರ (ಸೆಪ್ಟೆಂಬರ್ 24) ಬೆಂಗಳೂರಿನಲ್ಲಿ ಅವರು ನಿಧನ ಹೊಂದಿದರು. ಈ ವರ್ಷದ ಮಾರ್ಚ್ 9ರಂದು ಅವರಿಗೆ ಹುಟ್ಟೂರು ಸಂತೇಶಿವರದಲ್ಲಿ ಸನ್ಮಾನ ನಡೆದಿತ್ತು. ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಶಾಸಕ ಸಿ.ಎನ್. ಬಾಲಕೃಷ್ಣ, ಹಿರಿಯ ಪತ್ರಕರ್ತ ಹಾಗೂ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಸೇರಿ ವಿವಿಧ ಗಣ್ಯರ ಸಮ್ಮುಖದಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಗಿತ್ತು.
ಸಮಾರಂಭದ ಅಂಗವಾಗಿ ಬೆಳಗ್ಗೆೆ ಚಿಕ್ಕೋನಹಳ್ಳಿ ಗೇಟ್ ಬಳಿಯಿಂದ ಸಂತೇಶಿವರ ಗ್ರಾಮದವರೆಗೆ ಬೆಳ್ಳಿ ಸಾರೋಟಿನಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಅದಕ್ಕೂ ಮೊದಲು ಪೂರ್ಣಕುಂಭ ಮೆರವಣಿಗೆಯಲ್ಲಿ ಗ್ರಾಮದ ಮಹಿಳೆಯರು ಊರಿನ ಕೆರೆಯಿಂದ ಗಂಗೆಯನ್ನು ಹೊತ್ತು ತಂದರು. ಭೈರಪ್ಪ ವಿರಚಿತ 27 ಕಾದಂಬರಿಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ಭೈರಪ್ಪ ಅವರ ಅಭಿನಂದನಾ ಸಮಾರಂಭ ಅಂಗವಾಗಿ ಸಂತೇಶಿವರ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ತಿಪಟೂರು ಶಾಸಕ ಷಡಕ್ಷರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಸೋಮಶೇಖರ್, ನಗರ ಯೋಜನಾ ಪ್ರಾಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್ ಮತ್ತಿತರರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ: SL Bhyrappa passes away: ಕನ್ನಡದ ಹೆಮ್ಮೆಯ ಕಾದಂಬರಿಕಾರ ಎಸ್‌ಎಲ್ ಭೈರಪ್ಪ ಇನ್ನಿಲ್ಲ
ನನ್ನ ಸಾಧನೆಗೆ ತಾಯಿಯೇ ಸ್ಫೂರ್ತಿ: ಭೈರಪ್ಪ
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎಲ್. ಭೈರಪ್ಪ, ʼʼನನಗೆ ನನ್ನ ತಾಯಿಯೇ ಸರ್ವಸ್ವ. ನನ್ನೂರು ನನಗೆ ಸ್ವರ್ಗವಿದ್ದಂತೆ. ನನಗೆ ಬರವಣಿಗೆ ಹುಟ್ಟಿನಿಂದಲೇ ಬಂದದ್ದು. ಇದಕ್ಕೆೆ ತಾಯಿಯೇ ಸ್ಫೂರ್ತಿ. ಬಾಲ್ಯದಲ್ಲಿ ತುಂಟನಾಗಿದ್ದ ನಾನು ಒಮ್ಮೆ ಪಕ್ಕದ ಹಿರೀಸಾವೆಗೆ ನಾಟಕ ನೋಡಲು ಹೋಗಿ ಮನೆಗೆ ಬರುವುದು ತಡವಾದಾಗ ನನ್ನ ತಾಯಿ ಊರಿನ ಕೆರೆಗಳಲ್ಲಿ ನನ್ನನ್ನು ಹುಡುಕಿಸಿದ್ದರುʼʼ ಎಂದು ಬಾಲ್ಯದ ದಿನಗಳ ಮೆಲುಕು ಹಾಕಿದ್ದರು. ʼʼತಾಯಿ ನನಗೆ ದೇವರ ಸಮಾನʼʼ ಎಂದು ಹೇಳಿದ್ದರು.
ʼʼನಾನು ಬರೆಯುವ ಕಥೆ, ಕಾದಂಬರಿ ಹಾಗೂ ಎಲ್ಲವನ್ನೂ ತಾಯಿ ಒಪ್ಪಿಕೊಂಡು ಕೊಂಡಾಡುತ್ತಿದ್ದಳು. ಆಕೆ ಪ್ರೋತ್ಸಾಹ ನೀಡುತ್ತಿದ್ದರಿಂದ ನಾನು ಉತ್ಸುಕನಾಗಿ ಬರೆಯುವುದನ್ನು ಮುಂದುವರಿಸಿದೆ. ಅದರ ಫಲವಾಗಿ ಇಂದು ಹುಟ್ಟೂರಿನಲ್ಲಿ ಪುರಸ್ಕಾರ ಸಿಕ್ಕಿದ್ದು ಇದನ್ನು ನನ್ನ ತಾಯಿಗೆ ಅರ್ಪಿಸುತ್ತೇನೆʼʼ ಎಂದು ತಾಯಿಯನ್ನು ನೆನಪಿಸಿಕೊಂಡಿದ್ದರು.
ʼʼನಾನು ಮದುವೆಯಾದ ದಿನದಿಂದ ಇದೂವರೆಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಯಾವ ಕಾರ್ಯಕ್ರಮದಲ್ಲಿಯೂ ನನ್ನ ಪತ್ನಿ ಭಾಗಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಅದೂ ನನ್ನ ಹುಟ್ಟೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಆಕೆಯೂ ಭಾಗವಹಿಸಿದ್ದಾಳೆʼʼ ಎಂದು ಭೈರಪ್ಪ ಭಾವುಕರಾಗಿ ನುಡಿದಿದ್ದರು.
ದೇಗುಲ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ್ದರು
ಈ ವೇಳೆ ಅವರು ಗಂಗಾಧರೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿರುವುದನು ತಿಳಿಸಿದ್ದರು. ʼʼದೇವಸ್ಥಾನವಿರುವ ಊರು ಸ್ವರ್ಗದಂತೆ ಇರಲಿದೆ. ಗ್ರಾಮದ ದೇಗುಲ ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ್ದೇನೆ. ಯಾವುದೇ ಗ್ರಾಮವಾಗಲಿ ದೇಗುಲ ನಿರ್ಮಾಣ ಇಲ್ಲವೇ ಜೀರ್ಣೋದ್ಧಾರ ಕಾರ್ಯಕ್ಕೆ ಎಲ್ಲರೂ ಕೈಲಾದಷ್ಟು ದೇಣಿಗೆ ನೀಡಬೇಕು. ಊರಿನ ಗಂಗಾಧರೇಶ್ವರ ದೇವಾಲಯ 800 ವರ್ಷಗಳಷ್ಟು ಹಳೆಯದಾಗಿದ್ದು, ಅದರ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ರೂ. ನೀಡಿದ್ದೇನೆ. ನೀವೆಲ್ಲರೂ ಹೆಚ್ಚು ನೆರವು ನೀಡಿ ಈ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕುʼʼ ಎಂದು ಅವರು ಮನವಿ ಮಾಡಿದ್ದರು.