ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Banu Mushtaq: ಪ್ರಶಸ್ತಿಯನ್ನು ವ್ಯಕ್ತಿಯಾಗಿ ಅಲ್ಲ, ಒಗ್ಗಟ್ಟಿನ ಧ್ವನಿಯಾಗಿ ಸ್ವೀಕರಿಸುತ್ತೇನೆ: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್

ಕರ್ನಾಟಕದ ಲೇಖಕಿ ಬಾನು ಮುಷ್ತಾಕ್ ತಮ್ಮ ಕೃತಿ ‘ಹಾರ್ಟ್ ಲ್ಯಾಂಪ್’ಗಾಗಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಕನ್ನಡದ ಮೊದಲ ಲೇಖಕಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಕೃತಿಯನ್ನು ಲೇಖಕಿ, ಅನುವಾದಕಿ ಮತ್ತು ಸಂಶೋಧಕಿ ದೀಪಾ ಭಾಸ್ತಿ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಪ್ರಶಸ್ತಿಯನ್ನು ಸ್ವೀಕರಿಸಿದ ಬಾನು ಮುಷ್ತಾಕ್, ಈ ಗೌರವವನ್ನು ವೈಯಕ್ತಿಕ ಸಾಧನೆಯಾಗಿ ಒಪ್ಪಿಕೊಳ್ಳದೆ, ಇತರರೊಂದಿಗೆ ಒಗ್ಗೂಡಿದ ಧ್ವನಿಯಾಗಿ ಸ್ವೀಕರಿಸುವುದಾಗಿ ತಿಳಿಸಿದರು.

ಯಾವ ಕಥೆಯೂ ಸಣ್ಣದಲ್ಲ: ಭಾನು ಮುಷ್ತಾಕ್

ಬಾನು ಮುಷ್ತಾಕ್.

Profile Sushmitha Jain May 21, 2025 10:02 PM

ಲಂಡನ್: ಕರ್ನಾಟಕದ ಲೇಖಕಿ ಬಾನು ಮುಷ್ತಾಕ್ (Banu Mushtaq) ತಮ್ಮ ಕೃತಿ ‘ಹಾರ್ಟ್ ಲ್ಯಾಂಪ್’ಗಾಗಿ (Heart Lamp) ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು (Booker Prize) ಗೆದ್ದುಕೊಂಡಿದ್ದು, ಈ ಗೌರವಕ್ಕೆ ಅರ್ಹರಾದ ಕನ್ನಡದ ಮೊದಲ ಲೇಖಕಿ ಎನಿಸಿಕೊಂಡಿದ್ದಾರೆ. ಈ ಕೃತಿಯನ್ನು ಲೇಖಕಿ, ಅನುವಾದಕಿ ಮತ್ತು ಸಂಶೋಧಕಿ ದೀಪಾ ಭಾಸ್ತಿ (Deepa Bhasth) ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಇಂಗ್ಲೆಂಡ್‌ನ ಟೇಟ್ ಮಾಡರ್ನ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಬಾನು ಮುಷ್ತಾಕ್, ಈ ಗೌರವವನ್ನು ವೈಯಕ್ತಿಕ ಸಾಧನೆಯಾಗಿ ಒಪ್ಪಿಕೊಳ್ಳದೆ, ಇತರರೊಂದಿಗೆ ಒಗ್ಗೂಡಿದ ಧ್ವನಿಯಾಗಿ ಸ್ವೀಕರಿಸುವುದಾಗಿ ತಿಳಿಸಿದರು.

ತಮ್ಮ ಭಾಷಣದಲ್ಲಿ ಬಾನು ಮುಷ್ತಾಕ್, “ತೀರ್ಪುಗಾರರೇ, ಲೇಖಕರೇ, ವಿಶ್ವದಾದ್ಯಂತ ಇರುವ ಓದುಗರೇ, ನನ್ನ ಸಂಸ್ಕೃತಿಯ ಒಂದು ಶಬ್ದವನ್ನು ಎರವಲು ಪಡೆದರೆ, ಈ ಕ್ಷಣವು ಒಂದೇ ಆಕಾಶದಲ್ಲಿ ಸಾವಿರ ದೀಪಗಳ ಜ್ವಾಲೆಯಂತೆ ಭಾಸವಾಗುತ್ತದೆ. ಈ ಅದ್ಭುತ ಫೈನಲಿಸ್ಟ್‌ಗಳೊಂದಿಗೆ ನಿಲ್ಲುವುದೇ ಒಂದು ಗೌರವ ಮತ್ತು ಈ ಪ್ರಶಸ್ತಿಯನ್ನು ನಾನು ವೈಯಕ್ತಿಕವಾಗಿ ಸ್ವೀಕರಿಸುವುದಿಲ್ಲ, ಬದಲಿಗೆ ಇತರರೊಂದಿಗಿನ ಸಾಮೂಹಿಕ ಧ್ವನಿಯಾಗಿ ಸ್ವೀಕರಿಸುತ್ತೇನೆ” ಎಂದರು.

ವೈವಿಧ್ಯತೆಯ ಮಹತ್ವವನ್ನು ಪುನರುಚ್ಚರಿಸಿದ ಅವರು, ʼʼಇದು ನನಗೆ ಮತ್ತು ನನ್ನ ಅನುವಾದಕಿ ದೀಪಾ ಭಾಸ್ತಿ ಅವರಿಗೆ ಸಂತಸದ ಕ್ಷಣ. ಇದು ವೈಯಕ್ತಿಕ ಸಾಧನೆಗಿಂತ ದೊಡ್ಡದು. ವೈವಿಧ್ಯತೆಯನ್ನು ಸ್ವೀಕರಿಸಿ, ಭಿನ್ನತೆಯನ್ನು ಆಚರಿಸಿ, ಒಬ್ಬರನ್ನೊಬ್ಬರು ಉನ್ನತಿಗೊಳಿಸಿದಾಗ ನಾವು ವೈಯಕ್ತಿಕವಾಗಿ ಮತ್ತು ಜಾಗತಿಕ ಸಮುದಾಯವಾಗಿ ಯಶಸ್ವಿಯಾಗಬಹುದು ಎಂಬುದಕ್ಕೆ ಸಾಕ್ಷಿ. ಒಟ್ಟಿಗೆ, ಪ್ರತಿಯೊಂದು ಧ್ವನಿಯೂ ಕೇಳಿಸುವ, ಪ್ರತಿಯೊಂದು ಕಥೆಯೂ ಮುಖ್ಯವಾದ, ಪ್ರತಿಯೊಬ್ಬರೂ ಸೇರಿಕೊಂಡ ಜಗತ್ತನ್ನು ನಾವು ಸೃಷ್ಟಿಸುತ್ತೇವೆ” ಎಂದರು.

ಗಡಿಗಳನ್ನು ದಾಟುವ ಕಥೆಗಳಿಗೆ ಮನ್ನಣೆ

“ಗಡಿಗಳನ್ನು ದಾಟುವ ಕಥೆಗಳನ್ನು ಗುರುತಿಸಿದ್ದಕ್ಕಾಗಿ ಬೂಕರ್ ಪ್ರಶಸ್ತಿ ಸಮಿತಿಗೆ ಧನ್ಯವಾದಗಳು. ಈ ಪುಸ್ತಕಕ್ಕೆ ಜನರ ಸ್ಪಂದನೆಗೂ ಮುನ್ನ ಅದನ್ನು ನಂಬಿದ್ದಕ್ಕಾಗಿ ನನ್ನ ತಂಡಕ್ಕೆ, ನನ್ನ ಸಾಹಿತ್ಯಿಕ ಏಜೆಂಟ್ ಕನೇಸ್ಕಾ ಗುಪ್ತಾಗೆ, ನನ್ನ ಶಬ್ದಗಳನ್ನು ಸೇತುವೆಗಳಾಗಿ ಮಾರ್ಪಡಿಸಿದ ದೀಪಾ ಭಾಸ್ತಿಗೆ ಮತ್ತು ನನ್ನ ಪ್ರಕಾಶಕರಾದ ಪೆಂಗ್ವಿನ್ ರ‍್ಯಾಂಡಮ್ ಹೌಸ್ ಮತ್ತು ಆ್ಯಂಡ್‌ ಅದರ್ ಸ್ಟೋರೀಸ್‌ನ ತಾರಾ ಮತ್ತು ಸ್ಟೆಫಾನ್‌ಗೆ ಧನ್ಯವಾದಗಳು. ಭಾಷೆಗಳು ಮತ್ತು ಗಡಿಗಳನ್ನು ದಾಟಿದ ಈ ಯಾತ್ರೆಯಲ್ಲಿ ಇದು ನಿಮ್ಮ ಗೆಲುವೂ ಆಗಿದೆ” ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಓದಿ: Booker Prize 2025: ಬೂಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌: ಇವರ ಬಗ್ಗೆ ನಿಮಗಿವು ತಿಳಿದಿರಲಿ

ಕನ್ನಡದ ಸಾಹಿತ್ಯಿಕ ಪರಂಪರೆಗೆ ಪ್ರೀತಿಯ ಕಾಣಿಕೆ

ತಮ್ಮ ಕುಟುಂಬ ಮತ್ತು ಸಾಹಿತ್ಯಿಕ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಬಾನು, “ನನ್ನ ಕುಟುಂಬ, ಸ್ನೇಹಿತರು ಮತ್ತು ಓದುಗರೇ, ನೀವು ನನ್ನ ಕಥೆಗಳು ಬೆಳೆಯುವ ಮಣ್ಣು. ಈ ಪುಸ್ತಕವು ಯಾವುದೇ ಕಥೆ ಸ್ಥಳೀಯವಲ್ಲ ಎಂಬ ಆಲೋಚನೆಗೆ ನನ್ನ ಪ್ರೀತಿಯ ಕಾಣಿಕೆ. ನನ್ನ ಗ್ರಾಮದ ಆಲದ ಮರದ ಕೆಳಗೆ ಜನಿಸಿದ ಕಥೆಯೊಂದು ಈ ವೇದಿಕೆಯವರೆಗೆ ತನ್ನ ನೆರಳನ್ನು ಬೀರಬಲ್ಲದು. ನನ್ನೊಂದಿಗೆ ಪಯಣಿಸಿದ ಪ್ರತಿಯೊಬ್ಬ ಓದುಗರಿಗೆ, ನೀವು ಕನ್ನಡ ಭಾಷೆಯನ್ನು ಸಾಮೂಹಿಕ ಆಗರವನ್ನಾಗಿಸಿದ್ದೀರಿ. ಕನ್ನಡವು ಸ್ಥಿತಿಸ್ಥಾಪಕತ್ವ ಮತ್ತು ಸೂಕ್ಷ್ಮತೆಯನ್ನು ಹಾಡಾಗಿಸುವ ಭಾಷೆ” ಎಂದರು.

ಇದು ಅಂತ್ಯವಲ್ಲ, ದೀಪದ ರವಾನೆ

“ಈ ಪುಸ್ತಕವು ಯಾವುದೇ ಕಥೆ ಚಿಕ್ಕದಲ್ಲ ಎಂಬ ನಂಬಿಕೆಯಿಂದ ಜನಿಸಿತು. ಮಾನವ ಅನುಭವದ ವಸ್ತ್ರದಲ್ಲಿ, ಪ್ರತಿಯೊಂದು ದಾರವೂ ಸಂಪೂರ್ಣತೆಯ ತೂಕವನ್ನು ಹೊಂದಿದೆ. ವಿಭಜನೆಗೆ ಒಳಗಾಗುವ ಜಗತ್ತಿನಲ್ಲಿ, ಸಾಹಿತ್ಯವು ಒಂದಿಷ್ಟು ಪುಟಗಳಾದರೂ ಒಬ್ಬರ ಮನಸ್ಸಿನೊಳಗೆ ಒಬ್ಬರು ಬದುಕಬಹುದಾದ ಕೊನೆಯ ಪವಿತ್ರ ಸ್ಥಳವಾಗಿದೆ. ನನ್ನ ಕಥೆಗಳಿಗೆ ತಮ್ಮ ಸಮಯವನ್ನು ನಂಬಿದ ಓದುಗರಿಗೆ, ನನ್ನ ಶಬ್ದಗಳನ್ನು ನಿಮ್ಮ ಹೃದಯದೊಳಗೆ ಸಂಚರಿಸಲು ಬಿಟ್ಟಿದ್ದಕ್ಕಾಗಿ ಧನ್ಯವಾದಗಳು. ಇದು ಅಂತ್ಯವಲ್ಲ; ಇದು ದೀಪದ ರವಾನೆ. ಇದು ಕೇಳದ ಕೋಣೆಗಳಿಂದ ಹೆಚ್ಚಿನ ಕಥೆಗಳಿಗೆ, ಗಡಿಗಳನ್ನು ಧಿಕ್ಕರಿಸುವ ಭಾಷಾಂತರಗಳಿಗೆ, ಮತ್ತು ಪ್ರತಿಯೊಬ್ಬರ ಕಣ್ಣಿನೊಳಗೆ ವಿಶ್ವವನ್ನು ಒಡಗೊಡಿಸುವ ಧ್ವನಿಗಳಿಗೆ ಬೆಳಕು ಚೆಲ್ಲಲಿ” ಎಂದು ಭಾವುಕವಾಗಿ ಮಾತನಾಡಿದರು.

ದೀಪಾ ಭಾಸ್ತಿಯಿಂದ ಕನ್ನಡದಲ್ಲಿ ಆರಂಭಿಕ ಭಾಷಣ

ಸಮಾರಂಭದಲ್ಲಿ ಮಾತನಾಡಿದ ಅನುವಾದಕಿ ದೀಪಾ ಭಾಸ್ತಿ, ಕನ್ನಡದಲ್ಲಿ ತಮ್ಮ ಭಾಷಣವನ್ನು ಆರಂಭಿಸಿದರು. “ನನಗೆ ಏನಾಯಿತೆಂದೇ ತಿಳಿಯುತ್ತಿಲ್ಲ. ‘ಹಾರ್ಟ್ ಲ್ಯಾಂಪ್’ ಗೆದ್ದರೆ, ವೇದಿಕೆಯ ಮೇಲೆ ಗಾಬರಿಯಾಗಿ, ಜೀವನದಲ್ಲಿ ಎಂದೂ ಅನುಭವಿಸದ ಸ್ಟೇಜ್ ಫಿಯರ್ ಎದುರಿಸಿ, ಮೂರ್ಖರಂತೆ ಕಾಣಬಹುದೆಂದು ತಿಳಿದಿದ್ದೆ. ಆದ್ದರಿಂದ ಕೆಲವು ಟಿಪ್ಪಣಿಗಳನ್ನು ತಯಾರಿಸಿದೆ. ಇದಕ್ಕಾಗಿಯೇ ಒಂದು ಸೊಗಸಾದ ಕಾಗದದ ಬದಲು ಫೋನ್‌ನಿಂದ ಓದುತ್ತಿದ್ದೇನೆ” ಎಂದು ತಮಾಷೆಯಾಗಿ ಹೇಳಿದರು.

ಕನ್ನಡದ ಸೌಂದರ್ಯಕ್ಕೆ ಮನ್ನಣೆ

ಕನ್ನಡ ಭಾಷೆಯ ಕುರಿತು ಮಾತನಾಡಿದ ಅವರು, “ಕನ್ನಡವು ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಈ ಗೆಲುವು ಕನ್ನಡದಲ್ಲಿ ಓದುವ, ಬರೆಯುವ ಮತ್ತು ಭಾಷಾಂತರಿಸುವ ಆಸಕ್ತಿಯನ್ನು ಹೆಚ್ಚಿಸಲಿ. ‘ಜೇನಿನ ಹೊಳೆಯೋ ಹಾಲಿನ ಮಳೆಯೋ’ ಎಂಬ ಕನ್ನಡ ಗೀತೆಯ ಸಾಲಿನಂತೆ, ಕನ್ನಡವು ಜೇನಿನ ನದಿ, ಹಾಲಿನ ಮಳೆ, ಸಿಹಿಯಾದ ಅಮೃತದಂತಿದೆ” ಎಂದರು.