ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಮೀಸಲಾತಿ ನಿಗದಿ ಪ್ರಕ್ರಿಯೆ ಚುರುಕುಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

Local Body Elections: ಅವಧಿ ಮುಗಿದು ಚುನಾವಣೆ ನಡೆಯಬೇಕಿರುವ ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ನಿಗದಿ ಪ್ರಕ್ರಿಯೆಗೆ ಚುರುಕುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ಜತಗೆ ಮುಂದಿನ ವಿಚಾರಣೆ ವಿಚಾರಣೆಯನ್ನು ಜೂನ್ 19ಕ್ಕೆ ನಿಗದಿಪಡಿಸಿದೆ.

ಮೀಸಲಾತಿ ನಿಗದಿ ಪ್ರಕ್ರಿಯೆ ಚುರುಕುಗೊಳಿಸಲು ಹೈಕೋರ್ಟ್‌ ಸೂಚನೆ

ಕರ್ನಾಟಕ ಹೈಕೋರ್ಟ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole May 1, 2026 9:45 PM

ಬೆಂಗಳೂರು, ಮೇ 1: ಅವಧಿ ಮುಗಿದು ಚುನಾವಣೆ ನಡೆಯಬೇಕಿರುವ ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ನಿಗದಿ ಪ್ರಕ್ರಿಯೆಗೆ ಚುರುಕುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಸೂಚನೆ ನೀಡಿದೆ (Local Body Elections). ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ವಾರು ಮೀಸಲಾತಿಯ ಅಂತಿಮ ಅಧಿಸೂಚನೆಯನ್ನು ತುರ್ತಾಗಿ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿ ಈ ತೀರ್ಪು ನೀಡಿತು.

ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿ, ʼʼಕಾಲಮಿತಿಯೊಳಗೆ ಚುನಾವಣೆ ನಡೆಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಯೋಗ ಅನಿವಾರ್ಯವಾಗಿ ಹೈಕೋರ್ಟ್ ಮೆಟ್ಟಿಲೇರಿದೆ. ನಗರ ಸ್ಥಳೀಯ ಸಂಸ್ಥೆಗಳು, ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌, ಗ್ರಾಮ ಪಂಚಾಯತ್‌ ಚುನಾವಣೆ ವಿಚಾರವಾಗಿ ಆಯೋಗ ಈಗಾಗಲೇ ವಿಭಾಗೀಯ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಅದನ್ನು ಹೊರತುಪಡಿಸಿ ಈ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ಶಿವಮೊಗ್ಗ, ಮೈಸೂರು ಮಹಾನಗರ ಪಾಲಿಕೆ ಅವಧಿ 2023ರಲ್ಲಿ, ತುಮಕೂರು ಮಹಾನಗರ ಪಾಲಿಕೆ ಅವಧಿ 2024ರಲ್ಲಿ ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆಗಳ ಅವಧಿ 2025ರಲ್ಲಿ ಕೊನೆಗೊಂಡಿದೆʼʼ ಎಂದರು.

ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ; ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಮೇಲ್ಮನವಿ ಅರ್ಜಿ

ಸರ್ಕಾರದ ಪ್ರತಿನಿಧಿ ಹೇಳಿದ್ದೇನು?

ʼʼಚುನಾವಣೆ ನಡೆಯಬೇಕಿರುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ನಿಗದಿ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಸೇರಿ 56 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿರುವ ಪರಿಣಾಮ ಹೊಸ ಮಹಾನಗರ ಪಾಲಿಕೆಗೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ನಡೆದಿದೆʼʼ ಎಂದು ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪೂರ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ತುರ್ತಾಗಿ ನಡೆಸುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿತು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಮತಪತ್ರ ಬಳಕೆ; ವಿಧಾನಸಭೆಯಲ್ಲಿ ಅಂಗೀಕಾರ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್‌ ಪೇಪರ್‌

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರ (EVM) ಬದಲು ಮತಪತ್ರ (Ballot Papers) ಬಳಕೆಗೆ ಅವಕಾಶ ಕಲ್ಪಿಸುವ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಇತ್ತೀಚೆಗೆ ಅಂಕಿತ ಹಾಕಿದ್ದಾರೆ. ವಿಧಾನಮಂಡಲ ಅಧಿವೇಶನದ ವೇಳೆ ವಿಪಕ್ಷಗಳ ವಿರೋಧದ ನಡುವೆಯೂ ವಿಧೇಯಕಕ್ಕೆ ಅನುಮೋದನೆ ಪಡೆಯಲಾಗಿತ್ತು. ಅದಾದ ನಂತರ ರಾಜ್ಯಪಾಲರು ಉಳಿದೆಲ್ಲ ವಿಧೇಯಕಗಳಿಗೆ ಅನುಮೋದನೆ ನೀಡಿದ್ದರೂ, ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ವಿಧೇಯಕಕ್ಕೆ ಒಪ್ಪಿಗೆ ನೀಡದೇ ತಮ್ಮ ಬಳಿಯಲ್ಲೇ ಉಳಿಸಿಕೊಂಡಿದ್ದರು. ಇದೀಗ ವಿಧೇಯಕವನ್ನು ಕೂಲಂಕಷವಾಗಿ ಪರಿಶೀಲಿಸಿ ರಾಜ್ಯಪಾಲರು ಅನುಮೋದಿಸಿದ್ದು, ರಾಜ್ಯಪತ್ರ ಪ್ರಕಟಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.