ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ ಕೊಟ್ಟ ರಾಜ್ಯ ಸರ್ಕಾರ; ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಹೆಚ್ಚಳ
SSLC Exam Fee Hike: ಇತ್ತೀಚೆಗಷ್ಟೇ ಪಿಯುಸಿ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿದ್ದ ಸರ್ಕಾರ ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನೂ ಏರಿಕೆ ಮಾಡಿದೆ. ಶೇಕಡಾ 5ರಷ್ಟು ಹೆಚ್ಚಳ ಮಾಡಿದೆ. ಹೊಸದಾಗಿ ಪರೀಕ್ಷೆ ಬರೆಯುವವರು, ಪುನರಾವರ್ತಿತ ವಿದ್ಯಾರ್ಥಿಗಳ ನೋಂದಣಿ ಶುಲ್ಕದ ಜತೆಗೆ ಪರೀಕ್ಷಾ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
ಚಾಟ್‌ಜಿಪಿಟಿ ರಚಿತ ಚಿತ್ರ -
ಬೆಂಗಳೂರು, ಅ. 4: ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ರಾಜ್ಯ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಈ ಬಾರಿ ವಿದ್ಯಾರ್ಥಿಗಳ ಜೇಬಿಗೆ ಕತ್ತರಿ ಹಾಕಿದೆ. ಇತ್ತೀಚೆಗಷ್ಟೇ ಪಿಯುಸಿ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿದ್ದ ಸರ್ಕಾರ ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನೂ ಏರಿಕೆ ಮಾಡಿದೆ (SSLC Exam Fee Hike). ಶೇಕಡಾ 5ರಷ್ಟು ಹೆಚ್ಚಳ ಮಾಡಿದೆ. ಹೊಸದಾಗಿ ಪರೀಕ್ಷೆ ಬರೆಯುವವರು, ಪುನರಾವರ್ತಿತ ವಿದ್ಯಾರ್ಥಿಗಳ ನೋಂದಣಿ ಶುಲ್ಕದ ಜತೆಗೆ ಪರೀಕ್ಷಾ ಶುಲ್ಕ ಹೆಚ್ಚಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ.
2027ರ ಮಾರ್ಚ್, ಏಪ್ರಿಲ್‌ನಲ್ಲಿ ನಡೆಯುವ ಪರೀಕ್ಷೆಗಳಿಗೆ ಹೊಸ ಶುಲ್ಕ ಅನ್ವಯವಾಗಲಿದೆ. 2020ರ ಆದೇಶದಲ್ಲಿ ವಾರ್ಷಿಕವಾಗಿ ಪರೀಕ್ಷಾ ಶುಲ್ಕ ಪರಿಷ್ಕರಿಸಲು ನೀಡಿದ ಅವಕಾಶದ ಆಧಾರದ ಮೇಲೆ ಈ ಹೆಚ್ಚಳ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್. ಅಶೋಕ್ ಅವರ ಎಕ್ಸ್ ಪೋಸ್ಟ್:
ಬೊಕ್ಕಸ ಬರಿದಾದ ಸರ್ಕಾರದ ಕೆಟ್ಟ ಕಣ್ಣು ಪರೀಕ್ಷಾ ಶುಲ್ಕದ ಮೇಲೆ ಬಿದ್ದಿದೆ! SSLC ಪರೀಕ್ಷಾ ಶುಲ್ಕವನ್ನು ಶೇ.5ರಷ್ಟು ಹೆಚ್ಚಿಸಿ, ಸಾಮಾನ್ಯ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕವನ್ನು ₹710ರಿಂದ ₹746ಕ್ಕೆ ಏರಿಸಲಾಗಿದೆ. ಶಿಕ್ಷಣದ ಖರ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೇರುವ ನಿರ್ಧಾರವಿದು. ಮುಖ್ಯಮಂತ್ರಿ @DKShivakumar ಅವರ ರಾಜ್ಯ @INCKarnataka ಸರ್ಕಾರ ಹಾಗೂ ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಕುಟುಂಬಗಳ ಸಂಕಷ್ಟವನ್ನು ಅರ್ಥಮಾಡಿಕೊಂಡು ಈ ಶುಲ್ಕ ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕು. ಮಕ್ಕಳ ಶಿಕ್ಷಣದ ಮೇಲೂ ಹೊರೆ ಹಾಕುವುದನ್ನು ನಿಲ್ಲಿಸಿ! #CongressFailsKarnataka
— R. Ashoka (@RAshokaBJP) October 4, 2026
ಎಷ್ಟು ಹೆಚ್ಚಳ?
ಈ ಹಿಂದೆ 710 ರೂಪಾಯಿ ಶುಲ್ಕಪಾವತಿಸುತ್ತಿದ್ದ ಸಾಮಾನ್ಯ ಅಭ್ಯರ್ಥಿಗಳು (ಫ್ರೆಶರ್ಸ್) ಇನ್ಮುಂದೆ 746 ರೂಪಾಯಿ ಪಾವತಿಸಬೇಕಾಗುತ್ತದೆ. ಹೊಸ ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ 248 ರೂಪಾಯಿಯಿಂದ 260 ರೂಪಾಯಿಗೆ ಹೆಚ್ಚಿಸಲಾಗಿದೆ. ಈಗಾಗಲೇ ನೋಂದಣಿಯಾಗಿರುವ ಖಾಸಗಿ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕವನ್ನು ಸಹ ಹೆಚ್ಚಳ ಮಾಡಲಾಗಿದೆ. ಈ ಶುಲ್ಕವು 72 ರೂಪಾಯಿಯಿಂದ 76 ರೂಪಾಯಿಗೆ ಏರಿಸಲಾಗಿದೆ.
ಪ್ರವಾಸಿಗರ ಗಮನಕ್ಕೆ; ಇನ್ಮುಂದೆ ಬಂಡೀಪುರ ಸಫಾರಿಗೆ ನೀವು ಹೆಚ್ಚುವರಿ ಹಣ ಪಾವತಿಸ್ಲೇಬೇಕು
ಆರ್. ಅಶೋಕ್ ಕಿಡಿ
ಸರ್ಕಾರದ ಈ ನಡೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ʼʼಬೊಕ್ಕಸ ಬರಿದಾದ ಸರ್ಕಾರದ ಕೆಟ್ಟ ಕಣ್ಣು ಪರೀಕ್ಷಾ ಶುಲ್ಕದ ಮೇಲೆ ಬಿದ್ದಿದೆ! ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನು ಶೇಕಡಾ 5ರಷ್ಟು ಹೆಚ್ಚಿಸಿ, ಸಾಮಾನ್ಯ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕವನ್ನು ₹ 710ರಿಂದ ₹ 746ಕ್ಕೆ ಏರಿಸಲಾಗಿದೆ. ಶಿಕ್ಷಣದ ಖರ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೇರುವ ನಿರ್ಧಾರವಿದು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಕುಟುಂಬಗಳ ಸಂಕಷ್ಟವನ್ನು ಅರ್ಥಮಾಡಿಕೊಂಡು ಈ ಶುಲ್ಕ ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕು. ಮಕ್ಕಳ ಶಿಕ್ಷಣದ ಮೇಲೂ ಹೊರೆ ಹಾಕುವುದನ್ನು ನಿಲ್ಲಿಸಿʼʼ ಎಂದು ಆಗ್ರಹಿಸಿದ್ದಾರೆ.
ಎಸ್‌ಬಿಐ ಗ್ರಾಹಕರೇ ಗಮನಿಸಿ: ಅಕ್ಟೋಬರ್ 1ರಿಂದ ನಗದು ಹಿಂಪಡೆಯುವ ಶುಲ್ಕದಲ್ಲಿ ಬದಲಾವಣೆ
ಪಿಯುಸಿ ಪರೀಕ್ಷಾ ಶುಲ್ಕ ಶೇಕಡಾ 50ರಷ್ಟು ಹೆಚ್ಚಳ
ರಾಜ್ಯ ಸರ್ಕಾರವು ಇತ್ತೀಚೆಗೆ ಪಿಯುಸಿ ವಿದ್ಯಾರ್ಥಿಗಳ ಶುಲ್ಕ ಹೆಚ್ಚಿಸಿ ಶಾಕ್ ನೀಡಿತ್ತು. ಪರೀಕ್ಷಾ ಶುಲ್ಕ ಸೇರಿ ಒಟ್ಟು 26 ಬಗೆಯ ವಿವಿಧ ಸೇವೆಗಳ ದರವನ್ನು ಶೇ. 50ರಷ್ಟು ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಿತ್ತು. ಈ ಪರಿಷ್ಕೃತ ದರಗಳು 2026-27ನೇ ಶೈಕ್ಷಣಿಕ ಸಾಲಿನಿಂದಲೇ ಅನ್ವಯವಾಗಲಿದೆ. 8 ವರ್ಷಗಳಿಂದ ಯಾವುದೇ ಶುಲ್ಕ ಏರಿಕೆ ಮಾಡಿರದ ಕಾರಣ ಪ್ರಸ್ತುತ ದರ ಪರಿಷ್ಕರಣೆ ಅನಿವಾರ್ಯ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.