Prakash Hegde Column: ಗಂಗೆಯ ಹರಿವಿಗೆ ಜಲ ರಾಜಕಾರಣದ ಸಂಕೋಲೆ !
ಕಣ್ಣೆದುರಿಗೆ ವಿಶಾಲವಾಗಿ ಹರಡಿಕೊಂಡಿದ್ದ ಫರಕ್ಕಾ ಬ್ಯಾರೇಜ್ ಮೇಲಿನಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದ್ದ ಗಂಗೆಯ ದೃಶ್ಯ ಮನಸೂರೆಗೊಳ್ಳುವಷ್ಟು ರಮಣೀಯವಾಗಿತ್ತು. ಒಂದೆಡೆ, ಗಡಿಯಾಚೆಗಿನ ಉಗ್ರರನ್ನು ನಿಗ್ರಹಿಸಲು ಬಂದೂಕು ಹಿಡಿದ ಸೈನಿಕರು, ಮತ್ತೊಂದೆಡೆ, ಗಡಿಗಳನ್ನೂ ರಾಜಕೀಯವನ್ನೂ ಲೆಕ್ಕಿಸದೆ ತನ್ನ ಪಾಡಿಗೆ ತಾನು ಹರಿಯುತ್ತಿದ್ದ ಗಂಗೆ.
-
ನೀರನೋಟ
ಪ್ರಕಾಶ ಹೆಗಡೆ
ಅಸ್ಸಾಂನಲ್ಲಿ ಉಗ್ರಗಾಮಿಗಳ ಹೋರಾಟ ತೀವ್ರವಾಗಿದ್ದ ದಿನಗಳವು. ರೈಲಿನಲ್ಲಿ ಗುವಾಹಟಿಯತ್ತ ಪ್ರಯಾಣಿಸುತ್ತಿದ್ದೆ. ಸಿಲಿಗುರಿ ನಿಲ್ದಾಣದಲ್ಲಿ ಗಡಿ ಭದ್ರತಾ ಪಡೆಯ ಅನೇಕ ಸೈನಿಕರು ರೈಲನ್ನೇರಿದರು. ಇದು ಅವರ ದಿನಚರಿ. ಉಗ್ರಗಾಮಿಗಳಿಂದ ಸಂಭವಿಸಬಹುದಾದ ದಾಳಿಗಳು ಅಥವಾ ಅಹಿತಕರ ಘಟನೆಗಳನ್ನು ತಡೆದು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲಿಗೆ ಭದ್ರತೆ ಒದಗಿಸುವ ಉದ್ದೇಶದಿಂದ.
ಫರಕ್ಕಾ ಬ್ಯಾರೇಜ್ ಬಳಿ ಬರುತ್ತಿದ್ದಂತೆ, ಇದ್ದಕ್ಕಿದ್ದಂತೆ ರೈಲು ನಿಂತಿತು. ಯಾರೋ ಚೈನ್ ಎಳೆದಿದ್ದರು. ರೈಲಿನಲ್ಲಿದ್ದ ಪ್ರಯಾಣಿಕರಲ್ಲಿ ಕೆಲವರು ತಕ್ಷಣ ಕೆಳಕ್ಕೆ ಜಿಗಿದು, ಪಕ್ಕದಲ್ಲಿದ್ದ ಭತ್ತದ ಗದ್ದೆಗಳ ನಡುವೆ ಓಡತೊಡಗಿದರು. ಗಡಿ ಭದ್ರತಾ ಪಡೆಯ ಸೈನಿಕರೂ ಬೆನ್ನಟ್ಟಿದರು. ಕೆಲಕಾಲ ಝಟಾಪಟಿಯ ಬಳಿಕ, ಆ ಪ್ರಯಾಣಿಕರನ್ನು ಬಂಧಿಸಿ ರೈಲಿಗೆ ಕರೆತಂದರು. ರೈಲು ಮುಂದೆ ಚಲಿಸಿತು. ಈ ಮಾರ್ಗದಲ್ಲಿ ಇಂತಹ ಘಟನೆಗಳು ಸಾಮಾನ್ಯವೆಂದು ಸಹಪ್ರಯಾಣಿಕರೊಬ್ಬರು ತಿಳಿಸಿದರು.
ಕಣ್ಣೆದುರಿಗೆ ವಿಶಾಲವಾಗಿ ಹರಡಿಕೊಂಡಿದ್ದ ಫರಕ್ಕಾ ಬ್ಯಾರೇಜ್ ಮೇಲಿನಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದ್ದ ಗಂಗೆಯ ದೃಶ್ಯ ಮನಸೂರೆಗೊಳ್ಳುವಷ್ಟು ರಮಣೀಯವಾಗಿತ್ತು. ಒಂದೆಡೆ, ಗಡಿಯಾಚೆಗಿನ ಉಗ್ರರನ್ನು ನಿಗ್ರಹಿಸಲು ಬಂದೂಕು ಹಿಡಿದ ಸೈನಿಕರು, ಮತ್ತೊಂದೆಡೆ, ಗಡಿಗಳನ್ನೂ ರಾಜಕೀಯವನ್ನೂ ಲೆಕ್ಕಿಸದೆ ತನ್ನ ಪಾಡಿಗೆ ತಾನು ಹರಿಯುತ್ತಿದ್ದ ಗಂಗೆ. ಇಂತಹ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಫರಕ್ಕಾ ಪ್ರದೇಶವು ಗಂಗೆಯ ನೀರಿನ ಹಂಚಿಕೆ, ಗಡಿ ಭದ್ರತೆ ಮತ್ತು ಉಭಯ ರಾಷ್ಟ್ರಗಳ ರಾಜತಾಂತ್ರಿಕ ಹಿತಾಸಕ್ತಿಗಳು ಮುಖಾಮುಖಿಯಾಗುವ ಸದಾ ಸೂಕ್ಷ್ಮ ಸಂಘರ್ಷದ ಕೇಂದ್ರವಾಗಿದೆ. ಆಕೆಯ ನೀರನ್ನು ಹಂಚಿಕೊಳ್ಳುವ ಮನುಷ್ಯನಿಗೆ ಮಾತ್ರ ಗಡಿಗಳಿವೆ, ಹಕ್ಕುಗಳಿವೆ, ಲೆಕ್ಕಾಚಾರಗಳಿವೆ, ಸಂಘರ್ಷಗಳಿವೆ.
ಇದನ್ನೂ ಓದಿ: Prakash Shesharaghavachar Column: ಸಚಿವ ಖರ್ಗೆಯವರು ಆರೆಸ್ಸೆಸ್ ಬ್ರ್ಯಾಂಡ್ ಅಂಬಾಸಿಡರೇ ?
ಕಾವೇರಿ-ಕೃಷ್ಣಾ ನದಿಗಳ ನೀರಿಗಾಗಿ ನಮ್ಮ ರಾಷ್ಟ್ರದ ರಾಜ್ಯಗಳೇ ದಶಕಗಳಿಂದ ಸಂಘರ್ಷಿಸುತ್ತಿರು ವಾಗ, ಗಂಗಾ ಮತ್ತು ಸಿಂಧೂ ನದಿಗಳ ನೀರಿನ ಹಂಚಿಕೆಯಲ್ಲಿ ನೆರೆರಾಷ್ಟ್ರಗಳೊಂದಿಗೆ ಭಾರತ ಎದುರಿಸುತ್ತಿರುವ ಅಂತಾರಾಷ್ಟ್ರೀಯ ಸವಾಲುಗಳೂ ಅದೇ ಜಲರಾಜಕಾರಣದ ಮತ್ತೊಂದು ಮುಖವಷ್ಟೇ. ಗಂಗಾ ಜಲ ಒಪ್ಪಂದದ ಮರುಪರಿಶೀಲನೆಯ ನಿರ್ಣಾಯಕ ಘಟ್ಟದಲ್ಲಿ ಭಾರತ-ಬಾಂಗ್ಲಾದೇಶ ಸಂಬಂಧಗಳ ಮುಂದಿನ ನಡೆಯೇನು ಎಂಬ ಪ್ರಶ್ನೆ ಎದುರಾಗಿದ್ದು, ಗಂಗೆಯ ನೀರಿನ ಪ್ರತಿಯೊಂದು ಹನಿಯ ಹಿಂದೆಯೂ ರಾಜತಾಂತ್ರಿಕ ಹಿತಾಸಕ್ತಿಗಳು, ಪ್ರಾದೇಶಿಕ ಸಂಘರ್ಷಗಳು ಮತ್ತು ಕೋಟ್ಯಂತರ ಜನರ ಬದುಕಿನ ಸಂಕೀರ್ಣ ಕಥೆ ಅನಾವರಣಗೊಂಡಿದೆ.
1996ರ ಡಿಸೆಂಬರ್ 12ರಂದು ಭಾರತದ ಪ್ರಧಾನಿ ಎಚ್ .ಡಿ. ದೇವೇಗೌಡ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸಹಿ ಹಾಕಿದ ಭಾರತ-ಬಾಂಗ್ಲಾದೇಶ ಗಂಗಾ ಜಲ ಹಂಚಿಕೆ ಒಪ್ಪಂದಕ್ಕೆ ಮೂರು ದಶಕಗಳು ಪೂರ್ಣಗೊಳ್ಳುತ್ತಿವೆ. 2026ರ ಡಿಸೆಂಬರ್ 12ರಂದು ಈ ಒಪ್ಪಂದದ ಅವಧಿ ಮುಕ್ತಾಯಗೊಳ್ಳಲಿದ್ದು, ಅದರ ನವೀಕರಣದ ಪ್ರಶ್ನೆ ಉಭಯ ರಾಷ್ಟ್ರಗಳ ಮುಂದಿರುವ ಅತ್ಯಂತ ದೊಡ್ಡ ರಾಜತಾಂತ್ರಿಕ ಸವಾಲಾಗಿ, ಜಲರಾಜಕೀಯದ ಸಂಘರ್ಷಕ್ಕೆ ಮುನ್ನುಡಿ ಬರೆಯುತ್ತಿದೆ.
ಗಂಗಾ ಜಲ ವಿವಾದದ ಬೇರುಗಳು ಇಂದಿನ ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗುವುದಕ್ಕೂ ಹಿಂದಿನವು. ಅಂದರೆ ಪೂರ್ವ ಪಾಕಿಸ್ತಾನದ ಜಮಾನದ್ದು. ಪಶ್ಚಿಮ ಬಂಗಾಳದ ಫರಕ್ಕಾದಲ್ಲಿ ಗಂಗಾ ನದಿಗೆ ಬ್ಯಾರೇಜ್ ನಿರ್ಮಿಸುವ ಯೋಜನೆಯನ್ನು ಭಾರತ 1950ರ ದಶಕದ ರೂಪಿಸಿತು. ಬಾಂಗ್ಲಾದೇಶದ ಗಡಿಯಿಂದ ಸುಮಾರು 18 ಕಿಲೋಮೀಟರ್ ದೂರದಲ್ಲಿರುವ ಈ ಬ್ಯಾರೇಜ್, 1961ರಲ್ಲಿ ನಿರ್ಮಾಣ ಆರಂಭವಾಗಿ, 1975ರಲ್ಲಿ ಯೋಜನೆ ಪೂರ್ಣಗೊಂಡಿತು. ಈ 1996ರ ಒಪ್ಪಂದವು ಬೇಸಿಗೆಯಲ್ಲಿ ಗಂಗೆಯ ನೀರಿನ ಹಂಚಿಕೆಯನ್ನು ನಿಯಂತ್ರಿಸುತ್ತದೆ.
ಪ್ರತಿವರ್ಷ ಜನವರಿ 1ರಿಂದ ಮೇ 31ರವರೆಗೆ ಫರಕ್ಕಾ ಬ್ಯಾರೇಜ್ ಬಳಿ ಲಭ್ಯವಿರುವ ನೀರನ್ನು ಹತ್ತು ದಿನಗಳ ಅವಧಿಗಳ ಆಧಾರದಲ್ಲಿ ಹಂಚಿಕೊಳ್ಳುವ ವ್ಯವಸ್ಥೆಯಿದು. ಲಭ್ಯವಿರುವ ಹರಿವು 70000 ಕ್ಯೂಸೆಕ್ ಅಥವಾ ಅದಕ್ಕಿಂತ ಕಡಿಮೆಯಿದ್ದರೆ ಭಾರತ ಮತ್ತು ಬಾಂಗ್ಲಾದೇಶ ತಲಾ ಶೇ.50ರಷ್ಟು ನೀರು ಪಡೆಯುತ್ತವೆ. ಹರಿವು 70000ರಿಂದ 75000 ಕ್ಯೂಸೆಕ್ ನಡುವಿದ್ದರೆ ಬಾಂಗ್ಲಾದೇಶಕ್ಕೆ 75000 ಕ್ಯೂಸೆಕ್ ನೀಡಿ ಉಳಿದ ನೀರನ್ನು ಭಾರತ ಪಡೆಯುತ್ತದೆ.
ಹರಿವು 75000 ಕ್ಯೂಸೆಕ್ಗಿಂತ ಹೆಚ್ಚಿದ್ದರೆ ಭಾರತಕ್ಕೆ 40000 ಕ್ಯೂಸೆಕ್ ನೀಡಿ ಉಳಿದ ನೀರನ್ನು ಬಾಂಗ್ಲಾದೇಶಕ್ಕೆ ಹಂಚಲಾಗುತ್ತದೆ. ಮಾರ್ಚ್ 11ರಿಂದ ಮೇ 10ರವರೆಗಿನ ನಿರ್ದಿಷ್ಟ ಮೂರು ಹತ್ತು ದಿನಗಳ ಅವಧಿಗಳಲ್ಲಿ ಎರಡೂ ದೇಶಗಳಿಗೆ ಪರ್ಯಾಯವಾಗಿ ತಲಾ 35000 ಕ್ಯೂಸೆಕ್ ನೀರು ದೊರೆಯುವ ಖಾತರಿಯೂ ಇದೆ.
ಗಂಗೆಯು ಬಾಂಗ್ಲಾದೇಶ ಪ್ರವೇಶಿಸಿದ ಬಳಿಕ ಪದ್ಮಾ ನದಿಯಾಗಿ ಬಂಗಾಳ ಕೊಲ್ಲಿಯತ್ತ ಹರಿಯುತ್ತದೆ. ಅದರ ನೀರು ಕೃಷಿ, ಮೀನುಗಾರಿಕೆ, ನದಿ ಸಾರಿಗೆ ಮತ್ತು ನದಿಯ ಸುತ್ತಲಿನ ಪರಿಸರ ವ್ಯವಸ್ಥೆಗೆ ಮಹತ್ವದ ಆಧಾರವಾಗಿದೆ. ಬಾಂಗ್ಲಾದೇಶದ ದೃಷ್ಟಿಯಲ್ಲಿ ದೇಶದ ಆಹಾರ ಭದ್ರತೆ, ಗ್ರಾಮೀಣ ಆರ್ಥಿಕತೆ ಮತ್ತು ಪರಿಸರದ ಭವಿಷ್ಯಕ್ಕೆ ಸಂಬಂಧಿಸಿದ ವಿಷಯ.
ಹೀಗಾಗಿ, ಬಾಂಗ್ಲಾ ದೇಶಕ್ಕೆ ಒಪ್ಪಂದ ನವೀಕರಣದಿಂದ ಪರಣಾಮಕಾರಿಯಾದ ಪರಿಹಾರದ ಅಪೇಕ್ಷೆಯಿದೆ. ಅಂತೆಯೇ ಭಾರತಕ್ಕೂ ತನ್ನ ಸಂಬಂಧಿತ ರಾಜ್ಯಗಳ ಹಿತರಕ್ಷಣೆಯ ಬೃಹತ್ ಜವಾಬ್ದಾರಿಯಿದೆ. ಇಂದು ವಿಮರ್ಶಕರು ಬಹುಮಟ್ಟಿಗೆ ಒಪ್ಪಿಕೊಳ್ಳುವ ಸಂಗತಿಯೆಂದರೆ, ಫರಕ್ಕಾ ಬ್ಯಾರೇಜ್ ಕಾರ್ಯಾರಂಭ ವಾದಾಗಿನಿಂದ, ಸಮುದ್ರದತ್ತ ಸಾಗುತ್ತಿದ್ದ ಹೂಳು ಮೇಲ್ಭಾಗದ ಸಂಗ್ರಹವಾಗತೊಡಗಿತ್ತು.
ಮೂವತ್ತು ವರ್ಷಗಳ ಸಂಗ್ರಹದ ಪರಿಣಾಮವಾಗಿ ಗಂಗೆಯ ಅಡೆತಡೆಯಿಲ್ಲದ ಹರಿವು ಒಳನಾಡಿನ ಮುರುಟಿಹೋಗುತ್ತಿದೆ. ನದಿಪಾತ್ರದಲ್ಲಿ ಹೂಳು ಸಂಗ್ರಹವಾಗುತ್ತಿದೆ. ನದಿಯ ತಳ ಏರುತ್ತಿದೆ. ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಹಿಂದೆ ನದಿಯ ಕಾಲುವೆಯೊಳಗೆ ಹರಿಯುತ್ತಿದ್ದ ನೀರು ಈಗ ದಡಗಳ ಮೇಲ್ಮಟ್ಟ ದವರೆಗೆ ಏರಿ ನಿಲ್ಲುವುದರಿಂದ ನದಿಯು ತನ್ನ ದಿಕ್ಕು ಬದಲಿಸಿ ಪ್ರವಾಹ ಉಂಟುಮಾಡುತ್ತದೆ.
ಜಲಾಶಯಗಳ ಸಂಗ್ರಹ ಸಾಮರ್ಥ್ಯದ, ಕಳೆದ ಐದು ವರ್ಷಗಳಲ್ಲಿ ಸರಾಸರಿ ಶೇ.35ರಷ್ಟೇ ಬಳಕೆ ಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ದಕ್ಷಿಣ ಏಷ್ಯಾದ ಅತಿದೊಡ್ಡ ರಾಷ್ಟ್ರವಾದ ಭಾರತ ಪ್ರತಿಯಾಗಿ ಯಾವುದೇ ನಿರೀಕ್ಷೆಯಿಲ್ಲದೆ ತನ್ನ ನೆರೆಹೊರೆಯ ದೇಶಗಳಿಗೆ ಏಕಪಕ್ಷೀಯ ರಿಯಾಯಿತಿಗಳನ್ನು ನೀಡಬೇಕೆಂಬ ಸಿದ್ಧಾಂತದಿಂದ ಈ ಒಪ್ಪಂದ ಮಾಡಲಾಗಿತ್ತು.
ಇಲ್ಲಿಂದಲೇ ರಾಷ್ಟ್ರೀಯ ಹಿತಾಸಕ್ತಿಯ ಪ್ರಶ್ನೆ ಆರಂಭವಾಗುತ್ತದೆ. ಈ ಒಪ್ಪಂದವು ಭಾರತಕ್ಕೆ ಪ್ರಯೋಜನ ಕಾರಿಯಾಗಿ ಕಾರ್ಯನಿರ್ವಹಿಸಿಲ್ಲವೆನ್ನುವುದನ್ನು ಕೋಟ್ಯಾಂತರ ಜನ ಅನುಭವಿಸಿ ದ್ದಾರೆ. ಅರ್ಥಪೂರ್ಣ ನಿರ್ಗಮನದ ಅವಕಾಶವಿಲ್ಲದೆ, ಪ್ರತಿಯಾಗಿ ಯಾವುದೇ ಖಾತರಿಯಿಲ್ಲದೆ ಭಾರತವು 30 ವರ್ಷಗಳ ಕಾಲ ತನ್ನನ್ನು ತಾನೇ ಬದ್ಧಗೊಳಿಸಿಕೊಂಡಿದೆ. ಗಂಗೆ ಹರಿಯುವ ರಾಜ್ಯಗಳಾದ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಅಥವಾ ಪಶ್ಚಿಮ ಬಂಗಾಳಕ್ಕೆ ಭಾರತವು ವೈಜ್ಞಾನಿಕ ಆಧಾರದ ಮೇಲೆ ನೀರನ್ನು ಹಂಚಿಕೆ ಮಾಡಿಲ್ಲ.
ತನ್ನದೇ ರಾಜ್ಯಗಳಿಗೆ ನ್ಯಾಯಯುತ ಪಾಲು ನೀಡದ ರಾಷ್ಟ್ರವು, ಆ ಹಂಚಿಕೆಯನ್ನು ಮೊದಲು ನಿರ್ಧರಿಸದೆ ವಿದೇಶಿ ರಾಷ್ಟ್ರದೊಂದಿಗೆ ಜವಾಬ್ದಾರಿಯುತವಾಗಿ ಒಪ್ಪಂದ ಮುಂದುವರಿಸುವುದು ಸಾಧುವಲ್ಲ. ಭಾರತ-ಬಾಂಗ್ಲಾದೇಶ ಗಂಗಾ ಜಲ ಒಪ್ಪಂದವನ್ನು ನವೀಕರಿಸುವ ಅಗತ್ಯವಿದೆಯೇ ಎಂಬುದನ್ನು ಮೊದಲು ಭಾರತ ಗಂಭೀರವಾಗಿ ಪರಿಗಣಿಸಬೇಕು. ಒಪ್ಪಂದವನ್ನು ನವೀಕರಿಸ ದಿರುವುದೆಂದರೆ ಬಾಂಗ್ಲಾದೇಶದ ವಿರುದ್ಧದ ವೈರತ್ವವಲ್ಲ. ಅದು ನಿಗದಿತ ಅವಧಿಯ ಒಪ್ಪಂದದ ಅಂತ್ಯವಷ್ಟೇ.
ಒಪ್ಪಂದವನ್ನು ನವೀಕರಿಸಲೇಬೇಕಾದ ಸಂದರ್ಭ ಬಂದರೆ, ಕಳೆದ ಮೂವತ್ತು ವರ್ಷಗಳ ಅನುಭವ, ಹೊಸ ವೈಜ್ಞಾನಿಕ ಮಾಹಿತಿ ಮತ್ತು ಬದಲಾಗಿರುವ ಹವಾಮಾನ ಪರಿಸ್ಥಿತಿಗಳನ್ನು ಆಧರಿಸಿ ಹೆಚ್ಚು ಸಮಗ್ರವಾದ ಒಪ್ಪಂದವನ್ನು ರೂಪಿಸುವುದು ಅತ್ಯಗತ್ಯ. ಈ ಸಂದರ್ಭದಲ್ಲಿ, ನಮ್ಮ ಇನ್ನೊಂದು ನೆರೆಯ ರಾಷ್ಟ್ರವಾದ ಪಾಕಿಸ್ತಾನದೊಂದಿಗೆ 1960ರಲ್ಲಿ ಮಾಡಿಕೊಂಡಿರುವ ಸಿಂಧೂ ಜಲ ಒಪ್ಪಂದದ ಉಲ್ಲೇಖವೂ ಮುಖ್ಯವಾಗುತ್ತದೆ.
ಎರಡೂ ಒಪ್ಪಂದಗಳು ನದಿಗಳ ನೀರನ್ನು ಅಂತಾರಾಷ್ಟ್ರೀಯ ಗಡಿಗಳಾಚೆಗೆ ಹಂಚಿಕೊಳ್ಳುವ ವ್ಯವಸ್ಥೆ ಗಳಾದರೂ, ಅವುಗಳಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಗಂಗಾ ಒಪ್ಪಂದವು ನಿರ್ದಿಷ್ಟ ಸ್ಥಳದಲ್ಲಿ ಲಭ್ಯವಿರುವ ನೀರನ್ನು ಅವಧಿ ಆಧಾರಿತ ಸೂತ್ರದಂತೆ ಹಂಚುತ್ತದೆ. ಸಿಂಧೂ ಒಪ್ಪಂದವು ಆರು ಪ್ರಮುಖ ನದಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಅವುಗಳ ಬಳಕೆಯ ಹಕ್ಕುಗಳನ್ನು ನಿರ್ಧರಿಸುತ್ತದೆ.
ಪೂರ್ವದ ನದಿಗಳು (ರಾವಿ, ಬಿಯಾಸ್ ಮತ್ತು ಸಟ್ಲೆಜ್) ಭಾರತದ ಬಳಕೆಗೆ ಹಂಚಿಕೆಯಾದರೆ, ಪಶ್ಚಿಮದ ನದಿಗಳು (ಸಿಂಧೂ, ಝೀಲಂ ಮತ್ತು ಚೆನಾಬ್) ಪಾಕಿಸ್ತಾನದ ಬಳಕೆಗೆ ಮೀಸಲಾಗಿದೆ. ಭಾರತವು 2025ರ ಏಪ್ರಿಲ್ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನ ದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಮುಂದಿನ ಸೂಚನೆ ಬರುವವರೆಗೆ ತಡೆಹಿಡಿದಿರುವು ದಾಗಿ ಘೋಷಿಸಿತು. ಆದರೆ, 2026ರ ಆಗಸ್ಟ್ನಲ್ಲಿ ಹೇಗ್ನಲ್ಲಿರುವ ಶಾಶ್ವತ ಮಧ್ಯಸ್ಥಿಕೆ ನ್ಯಾಯ ಮಂಡಳಿಯು 1960ರ ಒಪ್ಪಂದ ಇನ್ನೂ ಜಾರಿಯಲ್ಲಿರುವುದರಿಂದ ಭಾರತ ಏಕಪಕ್ಷೀಯವಾಗಿ ಒಪ್ಪಂದವನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು.
ಭಾರತವು ಈ ನ್ಯಾಯಮಂಡಳಿಯ ರಚನೆ ಮತ್ತು ಅಧಿಕಾರವ್ಯಾಪ್ತಿಯನ್ನೇ ಪ್ರಶ್ನಿಸಿ ತೀರ್ಪನ್ನು ತಿರಸ್ಕರಿಸಿದೆ. ಆದರೆ ಭಾರತ ತೀರ್ಪನ್ನು ಒಪ್ಪದಿರುವುದರಿಂದ ಅದು ಸ್ವಯಂಚಾಲಿತವಾಗಿ ರzಗುವುದಿಲ್ಲ. ನ್ಯಾಯಮಂಡಳಿಯ ದೃಷ್ಟಿಯಲ್ಲಿ ಅದರ ತೀರ್ಪು ಮಾನ್ಯವಾಗಿಯೇ ಉಳಿಯುತ್ತದೆ. ಪಾಲಿಸದಿದ್ದರೆ ಅಂತಾರಾಷ್ಟ್ರೀಯ ಕಾನೂನು ಮತ್ತು ರಾಜತಾಂತ್ರಿಕ ಒತ್ತಡದ ಪ್ರಶ್ನೆಗಳು ಉದ್ಭವಿಸಬಹುದು.
ಅದೇ ಸಮಯದಲ್ಲಿ, ತೀರ್ಪನ್ನು ಜಾರಿಗೊಳಿಸಲು ನ್ಯಾಯಮಂಡಳಿಗೆ ಸ್ವತಂತ್ರ ಬಲವಂತದ ವ್ಯವಸ್ಥೆ ಇಲ್ಲದಿರುವುದರಿಂದ, ಈ ವಿವಾದದ ಮುಂದಿನ ಹಂತವು ಕಾನೂನು, ರಾಜತಾಂತ್ರಿಕತೆ ಮತ್ತು ಎರಡೂ ದೇಶಗಳ ಕಾರ್ಯತಂತ್ರದ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ. ನಾವು ಚೀನಾ ಮತ್ತು ಅಮೇರಿಕಾದ ಜಲನೀತಿಯಿಂದ ಜಲರಾಜತಾಂತ್ರಿಕತೆಯ ಪಾಠ ಕಲಿಯಬೇಕಾಗಿದೆ. ಚೀನಾವು ನದಿಗಳ ಮೇಲ್ಭಾಗದಲ್ಲಿ ರುವ ರಾಷ್ಟ್ರವಾಗಿ ತನಗಿರುವ ಭೌಗೋಳಿಕ ಅನುಕೂಲವನ್ನು ರಾಷ್ಟ್ರೀಯ ಜಲಭದ್ರತೆಯಾಗಿ ಪರಿವರ್ತಿಸಿ ದೂರದೃಷ್ಟಿ, ಯೋಜನಾ ಸಾಮರ್ಥ್ಯ ಮತ್ತು ದೃಢ ನಿರ್ಧಾರದ ಶಕ್ತಿಯನ್ನು ಬೆಳೆಸಿಕೊಂಡಿದೆ.
ಹಾಗೆಯೇ ಅಮೇರಿಕಾ ಭೌಗೋಳಿಕ ಅನುಕೂಲವನ್ನು ರಾಷ್ಟ್ರೀಯ ಹಿತಾಸಕ್ತಿಗೆ ರಾಜತಾಂತ್ರಿಕತೆ ಯಿಂದ ಬಳಸಿಕೊಂಡಿರುವ ಉದಾಹರಣೆ ಕೂಡ ಅಷ್ಟೇ ಮಹತ್ವವೆನಿಸಿದೆ. ಕೊಲೊರಾಡೊ ನದಿಯ ನೀರನ್ನು ಅಣೆಕಟ್ಟುಗಳು, ಕಾಲುವೆಗಳು ಮತ್ತು ವಿಶಾಲ ನೀರಾವರಿ ಜಾಲಗಳ ಮೂಲಕ ಅಮೇರಿಕ ತನ್ನ ಕೃಷಿ ಹಾಗೂ ನಗರಗಳ ಅಗತ್ಯಗಳಿಗೆ ಸಮರ್ಥವಾಗಿ ಬಳಸಿಕೊಂಡಿದ್ದು, ಮೆಕ್ಸಿಕೊಗೆ ತಲುಪುವ ನೀರಿನ ಪ್ರಮಾಣವನ್ನು ಐತಿಹಾಸಿಕವಾಗಿ ಬಹಳಷ್ಟು ಸೀಮಿತಗೊಳಿಸಿದೆ.
ಭಾರತದ ಜಲರಾಜತಾಂತ್ರಿಕತೆಯ ನಿಜವಾದ ಸವಾಲು ಪಾಕಿಸ್ತಾನದ ಸಂಘರ್ಷಾತ್ಮಕ ಧೋರಣೆ ಯನ್ನೂ, ಬಾಂಗ್ಲಾದೇಶದೊಂದಿಗಿನ ಜಲ ಹಂಚಿಕೆ ವಿವಾದಗಳನ್ನೂ ಸಮರ್ಥವಾಗಿ ಎದುರಿಸುತ್ತಾ, ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಾಗಿದೆ. ನೆರೆರಾಷ್ಟ್ರಗಳ ಒತ್ತಡಕ್ಕೆ ಮಣಿಯುವುದೂ ಬೇಡ, ಭೌಗೋಳಿಕ ಮೇಲುಗೈಯನ್ನು ದುರುಪಯೋಗಪಡಿಸಿಕೊಳ್ಳುವುದೂ ಸರಿಯಲ್ಲ. ಬದಲಾಗಿ, ಅಂತಾರಾಷ್ಟ್ರೀಯ ಕಾನೂನಿನ ಚೌಕಟ್ಟಿನಲ್ಲಿ ತನ್ನ ಹಕ್ಕುಗಳನ್ನು ದೃಢವಾಗಿ ಪ್ರತಿಪಾದಿಸಿ, ನ್ಯಾಯಯುತ ಸಹಕಾರಕ್ಕೆ ಬದ್ಧವಿರುವ ರಾಷ್ಟ್ರವೆಂಬ ಸಂದೇಶವನ್ನು ಭಾರತ ಸ್ಪಷ್ಟವಾಗಿ ನೀಡಬೇಕು.
ನೆರೆಹೊರೆಯವರ ಹಿತಕ್ಕಾಗಿ ತನ್ನ ಹಿತಾಸಕ್ತಿಯನ್ನೇ ಬಲಿಕೊಡುವ ಉದಾತ್ತತೆಯ ಯುಗ ಈಗ ಅಂತ್ಯವಾಗಿದೆ. ತನ್ನ ಹಕ್ಕುಗಳನ್ನು ಕಾಪಾಡಿಕೊಳ್ಳುವ ಆದ್ಯತೆ ಮತ್ತು ವಿವೇಕವೇ ಭಾರತದ ಗುರಿಯಾಗಬೇಕು. ಗಾಂಽವಾದದ ಹೆಸರಿನಲ್ಲಿ ಏಕಪಕ್ಷೀಯ ರಿಯಾಯಿತಿಗಳನ್ನು ನೀಡುವ ಕಾಲ ಇತಿಹಾಸದ ಪುಟಗಳಲ್ಲಿನ ಕಹಿ ಅಧ್ಯಾಯಗಳು ಮಾತ್ರ. ನೆರೆರಾಷ್ಟ್ರಗಳೊಂದಿಗೆ ಸ್ನೇಹದ ಸೇತುವೆಗಳನ್ನು ಖಂಡಿತವಾಗಿಯೂ ಕಟ್ಟೋಣ. ಆದರೆ ಆ ಸೇತುವೆಗಳು ಭಾರತೀಯರ ಹಿತಾಸಕ್ತಿ ಯನ್ನೂ ಅಷ್ಟೇ ದೃಢವಾಗಿ ಕಾಪಾಡುವ ಬಲಿಷ್ಠ ಸೌಧಗಳಾಗಲಿ.