Dinesh Gundu Rao: ಗುಡ್ ನ್ಯೂಸ್, ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲೇ ಮೊಣಕಾಲು, ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ ಲಭ್ಯ
2023-24ರಲ್ಲಿ ಕೇವಲ 633 ಇದ್ದ ಶಸ್ತ್ರಚಿಕಿತ್ಸೆಗಳ ಸಂಖ್ಯೆ, 2025-26ರ ಆರ್ಥಿಕ ವರ್ಷದಲ್ಲಿ 1,119ಕ್ಕೆ ಏರಿಕೆಯಾಗಿದೆ. ಸರ್ಕಾರಿ ಆಸ್ಪತ್ರೆಗಳ ಪಾಲು ಶೇ. 35 ರಿಂದ ಶೇ. 99ಕ್ಕೆ ಏರಿದೆ. ಪರಿಣಿತ ಮೂಳೆ ಶಸ್ತ್ರಚಿಕಿತ್ಸಕರನ್ನು ನಿಯೋಜಿಸಲಾಗಿದೆ ಮತ್ತು ಅಲ್ಲಿನ ವೈದ್ಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ -
ಬೆಂಗಳೂರು, ಏ.24: ರಾಜ್ಯದ ಜನಸಾಮಾನ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರಿ ಆರೋಗ್ಯ ಸೇವೆಯಲ್ಲಿ ಮಹತ್ವದ ಸುಧಾರಣೆ ತರಲಾಗಿದೆ. ಇನ್ನು ಮುಂದೆ ರಾಜ್ಯದ 39 ಸರ್ಕಾರಿ ಜಿಲ್ಲಾ, ತಾಲೂಕು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ (government hospitals) ಮೊಣಕಾಲು ಹಾಗೂ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳು (Surgery) ಲಭ್ಯವಿರಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundu Rao) ತಿಳಿಸಿದ್ದಾರೆ.
ನಗರದ ಆರೋಗ್ಯ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೇವಲ 17 ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಶಸ್ತ್ರಚಿಕಿತ್ಸೆ ಲಭ್ಯವಿತ್ತು. ಈಗ ಹೆಚ್ಚುವರಿಯಾಗಿ 22 ಆಸ್ಪತ್ರೆಗಳನ್ನು ಸೇರ್ಪಡಿಸುವ ಮೂಲಕ ಒಟ್ಟು 39 ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಹಿಂದೆ ಶೇ. 63ರಷ್ಟು ರೋಗಿಗಳನ್ನು ಸರ್ಕಾರಿ ವೈದ್ಯರೇ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಿದ್ದರು. ಇದರಿಂದ ಬಡವರಿಗೆ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟವಾಗುತ್ತಿತ್ತು. ಇದನ್ನು ತಪ್ಪಿಸಲು ಸರ್ಕಾರಿ ಆಸ್ಪತ್ರೆಗಳಲ್ಲೇ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗಿದೆ.
2023-24ರಲ್ಲಿ ಕೇವಲ 633 ಇದ್ದ ಶಸ್ತ್ರಚಿಕಿತ್ಸೆಗಳ ಸಂಖ್ಯೆ, 2025-26ರ ಆರ್ಥಿಕ ವರ್ಷದಲ್ಲಿ 1,119ಕ್ಕೆ ಏರಿಕೆಯಾಗಿದೆ. ಸರ್ಕಾರಿ ಆಸ್ಪತ್ರೆಗಳ ಪಾಲು ಶೇ. 35 ರಿಂದ ಶೇ. 99ಕ್ಕೆ ಏರಿದೆ. ಪರಿಣಿತ ಮೂಳೆ ಶಸ್ತ್ರಚಿಕಿತ್ಸಕರನ್ನು ನಿಯೋಜಿಸಲಾಗಿದೆ ಮತ್ತು ಅಲ್ಲಿನ ವೈದ್ಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಇಂಪ್ಲಾಂಟ್ ಹಾಗೂ ಉಪಕರಣಗಳ ಗುಣಮಟ್ಟದಲ್ಲಿ ಸುಧಾರಣೆ ತರಲಾಗಿದೆ.
ಶಸ್ತ್ರಚಿಕಿತ್ಸೆಯ ನಂತರದ ಫಿಸಿಯೋಥೆರಪಿ, ಕಾಲ್ ಸೆಂಟರ್ ಮಾನಿಟರಿಂಗ್ ಮತ್ತು ಜಿಲ್ಲಾ ಮಟ್ಟದ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಇದರಿಂದ ರೋಗಿಗಳು ಚಿಕಿತ್ಸೆಗಾಗಿ 300-500 ಕಿ.ಮೀ ಪ್ರಯಾಣಿಸುವುದು ತಪ್ಪಿದಂತಾಗಿದೆ.
ಸಾರ್ವಜನಿಕರು ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗದೆ, ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಚಿತ ಹಾಗೂ ಗುಣಮಟ್ಟದ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.