Pahalgam Terror Attack: ಕೊಪ್ಪಳದ 19 ಮಂದಿ ಶ್ರೀನಗರದಲ್ಲಿ ಸೇಫ್; ಕೂದಲೆಳೆ ಅಂತರದಲ್ಲಿ ಪಾರಾದ ಯಾದಗಿರಿ ಕುಟುಂಬ!
Pahalgam Terror Attack: ಕರ್ನಾಟಕ ರಾಜ್ಯದಿಂದ ಕೂಡ ಹಲವು ಪ್ರವಾಸಿಗರು ಕಾಶ್ಮೀರಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಇದೀಗ ಕೊಪ್ಪಳದ 4 ಕುಟುಂಬಗಳ 19 ಸದಸ್ಯರು ಹಾಗೂ ಯಾದಗಿರಿಯ ಕುಟುಂಬ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.


ಕೊಪ್ಪಳ/ಯಾದಗಿರಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿ 26 ಜನರು ಮೃತಪಟ್ಟಿದ್ದಾರೆ. ಇನ್ನು ರಾಜ್ಯದಿಂದ ಕೂಡ ಹಲವು ಪ್ರವಾಸಿಗರು ಕಾಶ್ಮೀರಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಇದೀಗ ಕೊಪ್ಪಳದ 4 ಕುಟುಂಬಗಳ 19 ಸದಸ್ಯರು ಹಾಗೂ ಯಾದಗಿರಿಯ ಕುಟುಂಬ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ. ಸಚಿವ ಸಂತೋಷ್ ಲಾಡ್ ಅವರು ಬುಧವಾರ ಕೊಪ್ಪಳದ ಪ್ರವಾಸಿಗರನ್ನು ಕಾಶ್ಮೀರದಲ್ಲಿ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.
ಕೊಪ್ಪಳದ ಸಿದ್ದು ಗಣವಾರಿ, ಉದ್ಯಮಿ ಶರಣಪ್ಪ ಸಜ್ಜನ, ಕಾಂಗ್ರೆಸ್ ಮುಖಂಡ ಕಾಟನ್ ಪಾಷಾ ಮತ್ತು ಶಿವಕುಮಾರ ಪಾವಲಿ ಶೆಟ್ಟರ್ ಕುಟುಂಬದ 19 ಸದಸ್ಯರು ಮಂಗಳವಾರ ಶ್ರೀನಗರ ಪ್ರವಾಸಕ್ಕೆ ತೆರಳಿದ್ದರು. ಮುಂಬೈನಿಂದ ಮಂಗಳವಾರ ಸಂಜೆ ವಿಮಾನದ ಮೂಲಕ ಶ್ರೀನಗರಕ್ಕೆ ಹೋಗಿದ್ದರು. ವಿಮಾನ ಶ್ರೀನಗರದಲ್ಲಿ ಭೂ ಸ್ಪರ್ಶ ಮಾಡುವಷ್ಟರಲ್ಲಿ ಭಯೋತ್ಪಾದಕರ ದಾಳಿ ಬಗ್ಗೆ ಮಾಹಿತಿ ತಿಳಿದಿದೆ. ಘಟನೆಯಿಂದ ಆತಂಕಗೊಂಡಿದ್ದ ಇವರು ಪ್ರವಾಸ ಮುಂದುವರಿಸಬೇಕೇ, ವಾಪಸ್ ಬರಬೇಕೇ? ಎನ್ನುವ ಗೊಂದಲದಲ್ಲಿದ್ದಾರೆ. ಭಯೋತ್ಪಾದಕರ ದಾಳಿ ನಡೆದ ಸ್ಥಳದಿಂದ ಶ್ರೀನಗರ 100 ಕಿ.ಮೀ. ದೂರದಲ್ಲಿದೆ.

ಇನ್ನು ಮಂಗಳವಾರ ರಾತ್ರಿಯೇ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸಚಿವ ಸಂತೋಷ ಲಾಡ್‌ಗೆ ಕರೆ ಮಾಡಿ, ಕೊಪ್ಪಳದ ಪ್ರವಾಸಿಗರ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಶ್ರೀನಗರಕ್ಕೆ ಹೋಗಿರುವ ಸಚಿವ ಸಂತೋಷ್ ಲಾಡ್ ಅವರು ಕೊಪ್ಪಳದ ಪ್ರವಾಸಿಗರನ್ನು ಭೇಟಿ ಮಾಡಿ, ಧೈರ್ಯ ಹೇಳಿದ್ದಾರೆ.
![]()
ಮಂಗಳವಾರ ಸಂಜೆ 6.30ರ ಸುಮಾರಿಗೆ ಶ್ರೀನಗರ ತಲುಪಿದ್ದೆವು. ಹೋಟೆಲ್‌ಗೆ ಬಂದ ಬಳಿಕ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು ಗೊತ್ತಾಯಿತು. ಹೀಗಾಗಿ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದೆವು. ಐದು ದಿನ ಪ್ರವಾಸಕ್ಕೆ ಬಂದಿದ್ದೇವೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಂದು ಭೇಟಿ ಮಾಡಿ, ಧೈರ್ಯ ಹೇಳಿದ್ದಾರೆ.
ಕಾಟನ್ ಪಾಷಾ, ಶ್ರೀನಗರ ಪ್ರವಾಸದಲ್ಲಿ ಇರುವ ಕೊಪ್ಪಳ ನಿವಾಸಿ
![]()
ಶ್ರೀನಗರದಲ್ಲಿರುವ ಕೊಪ್ಪಳದ ನಿವಾಸಿಗಳು ಸುರಕ್ಷಿತವಾಗಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಯಾವುದೇ ತೊಂದರೆ ಇಲ್ಲ.
ಡಾ. ರಾಮ್ ಎಲ್. ಅರಸಿದ್ಧಿ, ಎಸ್ಪಿ, ಕೊಪ್ಪಳ
ಕೂದಲೆಳೆ ಅಂತರದಲ್ಲಿ ಪಾರಾದ ಯಾದಗಿರಿ ಪ್ರವಾಸಿಗರು

ಯಾದಗಿರಿ: ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ವೇಳೆ ಯಾದಗಿರಿ ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆ ನಿವಾಸಿಗಳಾದ ಪ್ರಭಾಕರ್ ಹಾಗೂ ಮಹೇಶ್ವರಿ ದಂಪತಿ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಗುಂಡಿನ ಸದ್ದಿಗೆ ಭಯಭೀತಗೊಂಡು ಇವರ ಸ್ಥಳದಿಂದ ಓಡಿ ಹೋಗಿ ಬಚಾವ್ ಆಗಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯಮಿ ಆಗಿರುವ ಪ್ರಭಾಕರ್ ಜುಜಾರೆ ಅವರು ಬೇಸಿಗೆ ರಜೆ ಹಿನ್ನೆಲೆ ಕುಟುಂಬ ಸಮೇತ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿ ಸ್ಥಳದಿಂದ ನೂರು ಮೀಟರ್ ಅಂತರದಲ್ಲಿ ಇದ್ದೆವು. ಕಾರು ಚಾಲಕನ ಸಮಯ ಪ್ರಜ್ಞೆಯಿಂದ ನಾವು ಏಳು ಕಿಲೋಮೀಟರ್ ದೂರ ಬಂದೆವು. ಲಾಡ್ಜ್‌ನಲ್ಲಿ ಸೇಪ್ ಆಗಿ ಉಳಿದಿದ್ದೆವು. ಸದ್ಯ ಸೇಫ್ ಆಗಿ ಶ್ರೀನಗರ ಕಡೆಗೆ ಹೊರಟ್ಟಿದ್ದೇವೆ. ರಿಟರ್ನ್ ಫ್ಲೈಟ್ ಶುಕ್ರವಾರ ಇದೆ. ಸರ್ಕಾರ ಏರ್ ಲಿಫ್ಟ್ ಮಾಡಿದರೇ ಬೆಂಗಳೂರಿಗೆ ಬರಲು ಅನುಕೂಲ ಆಗುತ್ತೆ ಎಂದು ಜಮ್ಮು ಮತ್ತು ಕಾಶ್ಮೀರದಿಂದ ವಿಡಿಯೋ ಮೂಲಕ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Pahalgam terror attack: ಉಗ್ರರ ಪೈಶಾಚಿಕ ಕೃತ್ಯಕ್ಕೆ ಟೀಮ್ ಇಂಡಿಯಾ ಕ್ರಿಕೆಟಿಗರ ಖಂಡನೆ