ಕೊಪ್ಪಳ ಸೇರಿ ಉತ್ತರ ಕರ್ನಾಟಕದಲ್ಲಿ ಆರೋಗ್ಯಸೇವೆ ವಿಸ್ತರಣೆ: ಸದ್ಗುರು ಶ್ರೀ ಮಧುಸೂದನ ಸಾಯಿ
ಕೊಪ್ಪಳ ನಗರದಲ್ಲಿ ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಮಾತನಾಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದುಕೊಂಡಿದ್ದೇವೆ ಎಂದು ಸದ್ಗುರು ತಿಳಿಸಿದ್ದಾರೆ.
-
ಕೊಪ್ಪಳ: ಇದೇ ಜಿಲ್ಲೆಯ ಹಲವು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಕ್ಷಣ ಸೇರಿದಂತೆ ಹಲವು ವಿಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅವರು ವೈದ್ಯರಾಗಿ ಸೇವೆ ಸಲ್ಲಿಸಲು ಸಿದ್ಧರಿರುತ್ತಾರೆ. ಆ ಬಳಿಕ ಕೊಪ್ಪಳ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ವಿಸ್ತರಿಸುವ ಉದ್ದೇಶವಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sri Madhusudan Sai) ಹೇಳಿದರು.
ನಗರದಲ್ಲಿ ಭಾನುವಾರ (ಆಗಸ್ಟ್ 23) ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದ ಮತ್ತು ವಾಗ್ಮಿ ಗಂಗಾವತಿ ಪ್ರಾಣೇಶ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸದ್ಗುರು, ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದುಕೊಂಡಿದ್ದೇವೆ. ಅನ್ನ ದಾಸೋಹ, ಅಕ್ಷರ ದಾಸೋಹ ಮತ್ತು ಆರೋಗ್ಯ ದಾಸೋಹದ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪೋಷಕರಿಬ್ಬರೂ ಉದ್ಯೋಗಸ್ಥರಾಗಿರುವುದರಿಂದ ಮಕ್ಕಳ ಬೆಳವಣಿಗೆ ಗಮನಿಸಲು ಸಾಕಷ್ಟು ಸಮಯ ದೊರೆಯುತ್ತಿಲ್ಲ. ಮತ್ತೊಂದೆಡೆ ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮಗಳ ಪ್ರಭಾವವೂ ವ್ಯಾಪಕವಾಗುತ್ತಿದೆ. ಮಕ್ಕಳು ದಾರಿ ತಪ್ಪುತ್ತಿರುವುದು ಭವಿಷ್ಯದ ಸಮಾಜಕ್ಕೆ ಗಂಭೀರ ಅಪಾಯವಾಗಿದೆ ಎಂದು ಎಚ್ಚರಿಸಿದರು.
ವಿದೇಶಗಳ ಮಕ್ಕಳಲ್ಲಿ ಕಂಡುಬರುವ ಹಿಂಸಾಚಾರ, ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ, ಶಸ್ತ್ರಾಸ್ತ್ರಗಳ ದುರುಪಯೋಗದಂತಹ ಸಮಸ್ಯೆಗಳು ಭಾರತದಲ್ಲಿಯೂ ಕಾಣಿಸಿಕೊಳ್ಳುವ ಆತಂಕವಿದೆ. ಇಂತಹ ಸಮಸ್ಯೆಗಳಿಗೆ ಮೌಲ್ಯಾಧಾರಿತ ಶಿಕ್ಷಣವೇ ಶಾಶ್ವತ ಪರಿಹಾರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ನಮ್ಮ ದೇಶವು ನಿಜವಾದ ಅರ್ಥದಲ್ಲಿ 'ವಿಕಸಿತ ಭಾರತ' ಆಗಬೇಕಾದರೆ ನಮ್ಮ ಹಳ್ಳಿಗಳು ಮೊದಲು ಅಭಿವೃದ್ಧಿಯಾಗಬೇಕು. ಗ್ರಾಮೀಣ ಜನರಿಗೆ ಅಗತ್ಯ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು. ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬಡತನ ಮತ್ತು ಮೂಲಸೌಲಭ್ಯಗಳ ಕೊರತೆಯನ್ನು ಗಮನಿಸಿದ್ದೇವೆ. ಕೊಪ್ಪಳದಲ್ಲಿ ಗುರುಕುಲದ ಮೂಲಕ ಶಿಕ್ಷಣ ಸೇವೆಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.
ಶಾಸಕ ರಾಘವೇಂದ್ರ ಹಿಟ್ನಾಳ್, ಕೈಗಾರಿಕೋದ್ಯಮಿ ಶ್ರೀನಿವಾಸ ಗುಪ್ತ, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಕರಡಿ ಸಂಗಣ್ಣ, ಶಾರದಾ ಶಿಕ್ಷಣ ಸಂಸ್ಥೆಗಳ ಸ್ಥಾಪಕ ವಿ.ಆರ್.ಪಾಟೀಲ್, ಗಂಗಾವತಿ ಕ್ಷೇತ್ರದ ಮಾಜಿ ಶಾಸಕರಾದ ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ.ಶರಣಪ್ಪ, ಉದ್ಯಮಿ ಗುರುರಾಜ್ ಹಾಲಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ವೇದಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆಸಕ್ತಿಯಿಂದ ಪಾಲ್ಗೊಂಡ ನೂರಾರು ನಾಗರಿಕರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ "ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್" ನಿರ್ವಹಿಸುತ್ತಿರುವ ಸೇವಾ ಚಟುವಟಿಕೆಗಳ ಅಗಾಧತೆಯ ಪರಿಚಯ ಮಾಡಿಕೊಂಡರು. ಸಂಸ್ಥೆಯ ಕಾರ್ಯಚಟುವಟಿಕೆಗಳ ವಿಡಿಯೊ ಪ್ರದರ್ಶಿಸಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಶಾಂತಗೌಡ ಬಿರಾದಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ "ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ" ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ಸ್ವರಮೇಳ (ಸಾಯಿ ಸಿಂಫನಿ ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.
ಡಾ. ಎಚ್.ಡಿ. ಪಾಟೀಲ ಅವರಿಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಕೆಪಿಎಸ್‌ಸಿ ಮಾಜಿ ಸದಸ್ಯರೂ ಆದ ಸಮಾಜ ಸೇವಕ ಡಾ. ಎಚ್.ಡಿ. ಪಾಟೀಲ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಕರ್ನಾಟಕ ಪರಿವರ್ತಕ ಪ್ರಶಸ್ತಿ' ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಚ್.ಡಿ.ಪಾಟೀಲ್, ಕಲ್ಯಾಣ ಕರ್ನಾಟಕವು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ತಮ್ಮ ವೈದ್ಯಕೀಯ ಕ್ಷೇತ್ರದ ಸೌಲಭ್ಯಗಳು ಈ ಭಾಗಕ್ಕೂ ವಿಸ್ತರಿಸಬೇಕು. 'ಕೃಷಿ ಋಷಿ' ಮೂಲಕ ನಮ್ಮ ಜಿಲ್ಲೆಯ ರೈತರನ್ನೂ ಗೌರವಿಸಿ ಎಂದು ಮನವಿ ಮಾಡಿದರು.
ಸೇವೆಗೆ ಮಿಗಿಲಾದ ಧರ್ಮವಿಲ್ಲ: ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ತಮ್ಮ ಅನುಪಸ್ಥಿತಿಯಲ್ಲಿ ಸಂದೇಶವನ್ನು ಕಳುಹಿಸಿದ್ದರು. "ಸೇವೆಗೆ ಮಿಗಿಲಾದ ಧರ್ಮವಿಲ್ಲ, ನಿಸ್ವಾರ್ಥ ಮನಸ್ಸಿಗಿಂತ ದೊಡ್ಡ ಸಂಪತ್ತಿಲ್ಲ. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸೇವಾಯಜ್ಞ ಶ್ಲಾಘನೀಯ. ಈ ಸಮಾಜಮುಖಿ ಸತ್ಕಾರ್ಯವು ಇನ್ನಷ್ಟು ಜನರಿಗೆ ತಲುಪಬೇಕು. ಇದು ನಿರಂತರವಾಗಿ ಹೀಗೆಯೇ ಮುಂದುವರಿಯಲಿ" ಎಂದು ಆಶಯ ವ್ಯಕ್ತಪಡಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ, "ಪ್ರತಿ ಜೀವಿಯಲ್ಲೂ ತನ್ನನ್ನು ಕಾಣುವ ಏಕತ್ವದ ಅನುಭವವೇ ನಿಜವಾದ ಜ್ಞಾನ. ಭಕ್ತನು ಕರುಣೆ ಮತ್ತು ಪ್ರೀತಿಯನ್ನು ಜಗತ್ತಿನ ಜೀವಿಗಳ ಮೇಲೆ ಸುರಿಸಿ ಸಂತೋಷ ನೀಡುವುದೇ ಶ್ರೇಷ್ಠ ಪೂಜೆ. ಸುಖ, ಭೋಗ ಮತ್ತು ಕೀರ್ತಿಗಳಲ್ಲಿ ನಿಜವಾದ ಸಂತೋಷವಿಲ್ಲ. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳ ಸಮಗ್ರ ಬೆಳವಣಿಗೆಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಮಾರ್ಗದರ್ಶನ ನೀಡುತ್ತಿದ್ದಾರೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತನ್ನ ಬದುಕಿನ ಕಥನ ಹಂಚಿಕೊಂಡ ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಗುರುಕುಲದ 7ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್, "ನನ್ನ ಪೋಷಕರು ಆರ್ಥಿಕ ಸಂಕಷ್ಟದಲ್ಲಿದ್ದರು. ನನಗೆ ಸರಿಯಾದ ಶಿಕ್ಷಣ ಸಿಗುವಂತೆ ಮಾಡುವುದು ಅವರಿಗೆ ದೊಡ್ಡ ಸವಾಲಾಗಿತ್ತು. ಆದರೆ ಗುರುಕುಲಕ್ಕೆ ಸೇರಿದ ಬಳಿಕ ಶಿಕ್ಷಣ, ಊಟ, ವಸತಿ ಹಾಗೂ ಕ್ರೀಡೆ ಸೇರಿದಂತೆ ಎಲ್ಲ ಸೌಲಭ್ಯಗಳು ಉಚಿತವಾಗಿ ದೊರೆಯುತ್ತಿವೆ. ಅಕ್ಕನಿಗೆ ನರ್ಸಿಂಗ್ ಓದಲು ಅವಕಾಶ ಮಾಡಿಕೊಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಂದೆಗೆ ಉಚಿತ ಚಿಕಿತ್ಸೆ ಸಿಕ್ಕಿದೆ. ಭವಿಷ್ಯದಲ್ಲಿ ದೊಡ್ಡ ವಿಜ್ಞಾನಿಯಾಗಿ ಸಾಕಷ್ಟು ಹಣ ಮಾಡಬೇಕು ಎನ್ನುವ ಆಸೆ ಈ ಮೊದಲು ಇತ್ತು. ವಿಜ್ಞಾನಿಯಾಗಬೇಕು ಎನ್ನುವ ಆಸೆ ಈಗಲೂ ಇದೆ. ಆದರೆ ಹಣ ಮಾಡಬೇಕೆನ್ನುವ ಆಸೆ ಹೋಗಿದೆ. ದೇಶಸೇವೆ ಮಾಡುವ ಆಸೆ ಮೊಳೆತಿದೆ" ಎಂದು ವಿವರಿಸಿದರು.

ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಪರಿಚಯ
ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಮಾಜಮುಖಿ ಸೇವೆ ಮತ್ತು ಸಂಸ್ಕಾರವನ್ನು ವಿದ್ಯಾರ್ಥಿಗಳ ಬದುಕಿನ ಭಾಗವಾಗಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ ಶ್ರೀ ಸತ್ಯ ಸಾಯಿ ಸೇವಾನಿಕೇತನಂ ಗುರುಕುಲ ಕಾರ್ಯನಿರ್ವಹಿಸುತ್ತಿದೆ. ಜೂನ್ 5, 2018ರಂದು ಸ್ಥಾಪನೆಯಾದ ಈ ಬಾಲಕರ ಕ್ಯಾಂಪಸ್, ಶಿಕ್ಷಣ ಮತ್ತು ಸೇವೆಯ ಸಮನ್ವಯದ ಕೇಂದ್ರವಾಗಿ ಬೆಳೆದಿದೆ. 50 ಎಕರೆ ಶುಷ್ಕ ಭೂಮಿಯಲ್ಲಿ ಆರಂಭವಾದ ಕ್ಯಾಂಪಸ್ ಇಂದು ಹಸಿರು ಪರಿಸರದ ಸುಂದರ ಆವರಣವಾಗಿ ರೂಪುಗೊಂಡಿದೆ.
ಈ ವರೆಗೆ 237 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದು, ಪ್ರಸ್ತುತ 58 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಶೇ 60ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯವರು, ಶೇ 93ರಷ್ಟು ವಿದ್ಯಾರ್ಥಿಗಳು ಬಿಪಿಎಲ್ ಕುಟುಂಬಗಳಿಗೆ ಸೇರಿದವರು. ಶಿಕ್ಷಣದ ಜೊತೆಗೆ ವೇದ, ಭಜನೆ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಮೂಲಕ ಸಂಸ್ಕಾರಯುತ ಹಾಗೂ ಸಮಾಜಮುಖಿ ನಾಗರಿಕರನ್ನು ರೂಪಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಶೀಘ್ರದಲ್ಲೇ ಆರೋಗ್ಯ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶವನ್ನೂ ಸಂಸ್ಥೆಯು ಹೊಂದಿದೆ.