ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಾ ಪ್ರಸಾದಕ್ಕೆ ಮೈಸೂರು ಪಾಕ್‌ !

ಸಿಂಧನೂರಿನ ಗವಿಸಿದ್ಧೇಶ್ವರ ಆಗ್ರೋ ಫುಡ್ಸ್ ಮತ್ತು ವಿಜಯಕುಮಾರ್ ಗೆಳೆಯರ ಬಳಗ ಈಗಾಗಲೇ ಮಹಾ ದಾಸೋಹದ ಆವರಣದಲ್ಲಿ ಮೈಸೂರ್‌ಪಾಕ್ ಸಿದ್ಧತೆ ಕಾರ್ಯ ಶುರು ಮಾಡಿದೆ. ಕಳೆದ 10 ವರ್ಷದಿಂದ ಈ ತಂಡ ಮಹಾ ದಾಸೋಹಕ್ಕೆ ವಿಶೇಷ ಸಿಹಿ ಮಾಡಿಸಿ ಕೊಂಡು ಬರುತ್ತಿರುವುದು ವಿಶೇಷ. ಈ ಬಾರಿ 10 ಲಕ್ಷ ಭಕ್ತರಿಗೆ ಆಗುವಷ್ಟು ಮೈಸೂರ್‌ಪಾಕ್ ತಯಾರಿ ಮಾಡುತ್ತಿದ್ದಾರೆ

ಗವಿ ಜಾತ್ರೆ ದಾಸೋಹದಲ್ಲಿ ತುಪ್ಪದ ಮೈಸೂರ್‌ಪಾಕ್ ಲಭ್ಯ

-

Ashok Nayak
Ashok Nayak Jan 4, 2026 11:41 PM

ಶರಣಬಸವ ಹುಲಿಹೈದರ, ಕೊಪ್ಪಳ

ಸಿಂಧನೂರಿನ ವಿಜಯಕುಮಾರ ಗೆಳೆಯರ ಬಳಗದಿಂದ ಖಾದ್ಯ ತಯಾರಿ ಮಹಾ ಪ್ರಸಾದಕ್ಕೆ ಮೈಸೂರು ಪಾಕ್

ಕೊಪ್ಪಳ: ಇಲ್ಲಿನ ಗವಿಸಿದ್ದೇಶ್ವರ ಜಾತ್ರೋತ್ಸವಕ್ಕೆ ಈಗಾಗಲೇ ವಿದ್ಯುಕ್ತ ಚಾಲನೆ ದೊರೆತಿದ್ದು, ಮಹಾ ರಥೋತ್ಸವಕ್ಕೆ ಒಂದೇ ದಿನ ಬಾಕಿ ಉಳಿದಿದೆ. ಈ ಬಾರಿ ಮಹಾ ರಥೋತ್ಸವ ಜರುಗುವ ಜ.5 ಮತ್ತು ಜ.6ರಂದು ಮಹಾ ದಾಸೋಹದಲ್ಲಿ ಭಕ್ತರು ತುಪ್ಪದ ಮೈಸೂರ್‌ಪಾಕ್ನ ಸವಿ ಸವಿಯಬಹುದು.

ಸಿಂಧನೂರಿನ ಗವಿಸಿದ್ಧೇಶ್ವರ ಆಗ್ರೋ ಫುಡ್ಸ್ ಮತ್ತು ವಿಜಯಕುಮಾರ್ ಗೆಳೆಯರ ಬಳಗ ಈಗಾಗಲೇ ಮಹಾ ದಾಸೋಹದ ಆವರಣದಲ್ಲಿ ಮೈಸೂರ್‌ಪಾಕ್ ಸಿದ್ಧತೆ ಕಾರ್ಯ ಶುರು ಮಾಡಿದೆ. ಕಳೆದ 10 ವರ್ಷದಿಂದ ಈ ತಂಡ ಮಹಾ ದಾಸೋಹಕ್ಕೆ ವಿಶೇಷ ಸಿಹಿ ಮಾಡಿಸಿ ಕೊಂಡು ಬರುತ್ತಿರುವುದು ವಿಶೇಷ. ಈ ಬಾರಿ 10 ಲಕ್ಷ ಭಕ್ತರಿಗೆ ಆಗುವಷ್ಟು ಮೈಸೂರ್‌ಪಾಕ್ ತಯಾರಿ ಮಾಡುತ್ತಿದ್ದಾರೆ.

ಮಹಾರಥೋತ್ಸವ ಹಾಗೂ ಮರುದಿನ ಮಹಾ ದಾಸೋಹದಲ್ಲಿ ಪ್ರಸಾದ ಸವಿಯುವ ಲಕ್ಷಂತರ ಭಕ್ತರು ಮೈಸೂರ್‌ಪಾಕ್‌ನ ಸಿಹಿ ಸವಿಯುವ ಅವಕಾಶ ಲಭಿಸುತ್ತದೆ. ಇದೇ ಬಳಗದ ಸ್ನೇಹಿತರು ಕಳೆದ ವರ್ಷ ಸುಮಾರು 12 ಲಕ್ಷ ಸಾವಯವ ಬೆಲ್ಲದ ಜಿಲೇಬಿ ತಯಾರಿಸಿ ದಾಸೋಹಕ್ಕೆ ಅರ್ಪಿಸಿದರು. ಈ ಮೊದಲು ಶೇಂಗಾ ಹೋಳಿಗೆ, ಸಿಹಿ ಬೂಂದಿ, ಸಿಹಿ ಮಾದಲಿ ಹೀಗೆ ತರಹೇವಾರಿ ತಿನಿಸು ಶ್ರೀಮಠಕ್ಕೆ ಅರ್ಪಿಸಿದ್ದರು.

ಇದನ್ನೂ ಓದಿ: Koppala news: ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಮುಗಿಸಿ ಬರುತ್ತಿದ್ದ ಜೋಡಿ ಅಪಘಾತದಲ್ಲಿ ಸಾವು

ಹೀಗಿದೆ ಮೈಸೂರ್‌ಪಾಕ್ ಸಿದ್ಧತೆ: ಗವಿಮಠದ ಮಹಾ ದಾಸೋಹ ಮಂಟಪದ ಆವರಣ ದಲ್ಲಿ ಈಗಾಗಲೇ ಮೈಸೂರ್‌ಪಾಕ್ ಸಿದ್ಧತೆ ಕಾರ್ಯ ಆರಂಭಗೊಂಡಿದೆ. 100 ಜನ ಮುಖ್ಯ ಬಾಣಸಿಗರು ಹಾಗೂ 100 ಜನ ಸಹಾಯಕರು ಸೇರಿ ಮೈಸೂರು ಪಾಕ್ ತಯಾರಿ ಶುರು ಮಾಡಿದ್ದಾರೆ.

ರಾಜ್ಯದ ಬೇರೆ ಬೇರೆ ಜಿಲ್ಲೆ ಹಾಗೂ ಆಂಧ್ರದಿಂದ ಮೈಸೂರ್‌ಪಾಕ್ ತಯಾರಿಯಲ್ಲಿ ಪರಿಣಿತಿ ಹೊಂದಿರುವ ಬಾಣಸಿಗರನ್ನು ಆಹ್ವಾನಿಸಲಾಗಿದೆ.

ಒಟ್ಟು 60 ಕ್ವಿಂಟಲ್ ಸಕ್ಕರೆ, 5 ಸಾವಿರ ಲೀಟರ್‌ ಅಡುಗೆ ಎಣ್ಣೆ, 30 ಕ್ವಿಂಟಲ್ ಹಸೆ ಕಡಲೇ ಹಿಟ್ಟು, ಐದು ಕ್ವಿಂಟಲ್ ಮೈದಾ, ಮೂರು ಕ್ವಿಂಟಾಲ್ ತುಪ್ಪ ಹಾಗೂ 50 ಕೆಜಿ ಏಲಕ್ಕಿ ಬಳಸಿ ಮೈಸೂರು ಪಾಕ್ ತಯಾರಿಸಲಾಗುತ್ತಿದೆ. ಒಟ್ಟು 60 ಬೃಹತ್ ಕಡಾಯಿ, 70 ಸಿಲಿಂಡರ್‌ ಸೇರಿ ಇತರೆ ಸಾಮಗ್ರಿಗಳನ್ನು ಬಳಕೆ ಮಾಡಲಾಗುತ್ತಿದೆ.

ಸರಿ ಸುಮಾರು 20 ಲಕ್ಷ ರು. ಖರ್ಚು

ಗವಿಮಠದ ಭಕ್ತರಾಗಿರುವ ಉದ್ಯಮಿ ವಿಜಯಕುಮಾರ ಸ್ನೇಹಿತರ ಬಳಗದೊಂದಿಗೆ ಪ್ರತಿ ವರ್ಷ ಈ ಕಾರ್ಯ ನಡೆದುಕೊಂಡು ಬಂದಿದೆ. ಸ್ನೇಹಿತರೆಲ್ಲರೂ ಹಣ ಹೊಂದಿಸಿ ಸಿಹಿ ತಿನಿಸು ತಯಾರಿಸಲು ಬೇಕಾಗುವ ಖರ್ಚು ಸರಿದೂಗಿಸುತ್ತಾರೆ. ಈ ವರ್ಷದ ಜಾತ್ರೆಗೆ ಮೈಸೂರು ಪಾಕ್ ತಯಾರಿಸಲು ಸುಮಾರು 18 ರಿಂದ 20 ಲಕ್ಷ ರು. ಖರ್ಚಾಗುತ್ತಿದೆ ಎಂದು ಅಂದಾಜಿಸಲಾಗಿದೆ.

*

ಗೆಳೆಯರ ಬಳಗದ ಸಹಕಾರದಿಂದ ಈ ಬಾರಿ ಗವಿಮಠದ ಭಕ್ತರಿಗೆ ಮೈಸೂರ್ ಪಾಕ್ ನೀಡಬೇಕು ಎಂದು ತಿರ್ಮಾನಿಸಿದ್ದೇವೆ. ಮೈಸೂರು ಪಾಕ್ ತಯಾರಿಸಲು 3 ದಿನ ಬೇಕಾಗ ಬಹುದು. ತಯಾರಿಯಾದ ನಂತರ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ, ಸಂಗ್ರಹಿಸಲಾಗುವುದು. ಇಲ್ಲಿ ಎಲ್ಲರೂ ಪಾಲ್ಗೊಂಡು ಕೆಲಸ ಮಾಡುವುದೇ ನಮಗೆ ಸಂಭ್ರಮ. ಪ್ರತಿ ವರ್ಷವೂ ಈ ಸೇವೆ ಮುಂದುವರಿಯಲಿದೆ.

-ಚನ್ನಬಸವ ಮುತ್ತೂರು, ಗೆಳೆಯರ ಬಳಗದ ಸದಸ್ಯ.