ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾಲಕ ಸಿಗರೇಟ್ ಸೇದಿದ ವಿಡಿಯೊ ತೋರಿಸಿ ಬ್ಲ್ಯಾಕ್‌ಮೇಲ್; 120 ಗ್ರಾಂ ಚಿನ್ನ ವಸೂಲಿ ಮಾಡಿದ ಖದೀಮರು!

Koppal Blackmail Case: ತಾನು ಸಿಗರೇಟ್‌ ಸೇದುವ ವಿಚಾರ ಮನೆಯಲ್ಲಿ ತಿಳಿದರೆ ತಂದೆ ಹೊಡೆಯುತ್ತಾರೆ ಎಂಬ ಭಯದಿಂದ ಕಂಗಾಲಾದ ಬಾಲಕ, ಆರೋಪಿಗಳ ಬ್ಲ್ಯಾಕ್‌ಮೇಲ್‌ಗೆ ಹೆದರಿ, ಚಿನ್ನಾಭರಣಗಳನ್ನು ಕೊಟ್ಟಿದ್ದಾನೆ. ಮನೆಯಲ್ಲಿ ಚಿನ್ನದ ಒಡವೆಗಳು ನಾಪತ್ತೆ ಆಗಿರೋದನ್ನು ಗಮನಿಸಿದ ಪೋಷಕರು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಾಲಕನಿಗೆ ಬ್ಲ್ಯಾಕ್‌ಮೇಲ್ ಮಾಡಿ 120 ಗ್ರಾಂ ಚಿನ್ನ ವಸೂಲಿ!

ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆದಿರುವ ಚಿನ್ನಾಭರಣ. -

Prabhakara R
Prabhakara R Jun 10, 2026 8:29 PM

ಕೊಪ್ಪಳ: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸಿಗರೇಟ್ ಸೇದುವ ದುಶ್ಚಟ ಕಲಿಸಿ, ಬಳಿಕ ಆತನನ್ನೇ ಬ್ಲ್ಯಾಕ್‌ಮೇಲ್ ಮಾಡಿ ಬರೋಬ್ಬರಿ 120 ಗ್ರಾಂ ಚಿನ್ನಾಭರಣ ವಸೂಲಿ ಮಾಡಿದ್ದ ಇಬ್ಬರನ್ನು ಜಿಲ್ಲೆಯ (Koppal Blackmail Case) ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬಸವರಾಜ್ ಅಂಗಡಿ ಮತ್ತು ನವೀನ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಕುಷ್ಟಗಿಯ ಬಾಲಕನಿಗೆ ಮೊದಲು ಸಿಗರೇಟ್ ಸೇದುವ ಅಭ್ಯಾಸ ಮಾಡಿಸಿದ್ದರು. ಬಾಲಕ ಸಿಗರೇಟ್ ಸೇದುತ್ತಿದ್ದ ದೃಶ್ಯವನ್ನು ಖದೀಮರು ಗುಟ್ಟಾಗಿ ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದರು. ನಂತರ ಅಸಲಿ ಆಟ ಶುರುಮಾಡಿದ ಆರೋಪಿಗಳು, "ನೀನು ಸಿಗರೇಟ್ ಸೇದುತ್ತಿರುವ ವಿಡಿಯೊ ನಮ್ಮ ಬಳಿಯಿದೆ, ಇದನ್ನು ನಿನ್ನ ತಂದೆಗೆ ತೋರಿಸುತ್ತೇವೆ" ಎಂದು ಬಾಲಕನಿಗೆ ಹೆದರಿಸಿ ಹಣಕ್ಕಾಗಿ ಪೀಡಿಸಿದ್ದಾರೆ.

ಬ್ಲ್ಯಾಕ್‌ಮೇಲ್‌ಗೆ ಹೆದರಿ ಚಿನ್ನ ತಂದುಕೊಟ್ಟ ಬಾಲಕ

ಮನೆಯಲ್ಲಿ ವಿಷಯ ತಿಳಿದರೆ ತಂದೆ ಹೊಡೆಯುತ್ತಾರೆ ಎಂಬ ಭಯದಿಂದ ಕಂಗಾಲಾದ ಬಾಲಕ, ಆರೋಪಿಗಳ ಬ್ಲ್ಯಾಕ್‌ಮೇಲ್‌ಗೆ ಸಂಪೂರ್ಣವಾಗಿ ಶರಣಾಗಿದ್ದ. ಹಣ ನೀಡಲು ಸಾಧ್ಯವಾಗದಿದ್ದಾಗ ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಪೋಷಕರಿಗೆ ತಿಳಿಯದಂತೆ ಹಂತ ಹಂತವಾಗಿ ಕದ್ದು ತಂದು ಇಬ್ಬರು ಖದೀಮರಿಗೆ ಒಪ್ಪಿಸಿದ್ದ.

ಇತ್ತೀಚೆಗೆ ಮನೆಯಲ್ಲಿ ಬರೋಬ್ಬರಿ 120 ಗ್ರಾಂ ಚಿನ್ನದ ಒಡವೆಗಳು ನಾಪತ್ತೆಯಾಗಿರುವುದನ್ನು ಗಮನಿಸಿದ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಈ ಬಗ್ಗೆಕುಷ್ಟಗಿ ಪೊಲೀಸ್ ಠಾಣೆಗೆ ತೆರಳಿ ಕಳ್ಳತನದ ದೂರು ದಾಖಲಿಸಿದ್ದರು.

Bidar News: ಹೆಡ್‌ ಮಾಸ್ಟರ್‌ ಕಿರುಕುಳ ಆರೋಪ; ಶಾಲೆಯ 4ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಾಚರಣೆ ಕೈಗೊಂಡು ಬಾಲಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಇಬ್ಬರೂ ಆರೋಪಿಗಳನ್ನು ಜೈಲಿಗಟ್ಟಿದ್ದು, ಅವರಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.