Lokayukta Raid: ಮಂಡ್ಯದಲ್ಲಿ ಲೋಕಾಯುಕ್ತ ದಾಳಿ; ಹಾಸ್ಟೆಲ್ ನಿವೃತ್ತ ಸೂಪರಿಂಟೆಂಡೆಂಟ್ ಬಳಿ ಬರೋಬ್ಬರಿ 2.71 ಕೋಟಿ ರೂ. ಆಸ್ತಿ ಪತ್ತೆ!
Mandya News: ಮಂಡ್ಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆದಿದೆ. ವಸತಿನಿಲಯದ ನಿವೃತ್ತ ಅಧೀಕ್ಷಕ ಎಂ.ಶಿವರಾಜು ಎಂಬುವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಒಟ್ಟು 2.71 ಕೋಟಿ ಆಸ್ತಿ ಪತ್ತೆಯಾಗಿದೆ.
-
ಮಂಡ್ಯ: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿನಿಲಯದ ನಿವೃತ್ತ ಅಧೀಕ್ಷಕ (retired hostel superintendent) ಎಂ.ಶಿವರಾಜು ಅವರಿಗೆ ಸೇರಿದ ಮನೆ ಮತ್ತು ಫಾರ್ಮ್ ಹೌಸ್ ಮೇಲೆ ಏಕಕಾಲದಲ್ಲಿ ಮಂಡ್ಯ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದು, ದಾಳಿಯ ವೇಳೆ ಬರೋಬ್ಬರಿ 2.71 ಕೋಟಿ ರೂ. ಆಸ್ತಿ ಪತ್ತೆಯಾಗಿದೆ.
ಮಂಡ್ಯ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆದಿದೆ. ಮದ್ದೂರು ನಗರದ ಕೊಪ್ಪ ವೃತ್ತದ ವಿನಾಯಕ ಬಡಾವಣೆಯಲ್ಲಿ 3 ವರ್ಷಗಳ ಹಿಂದೆ ಕಟ್ಟಿಸಿರುವ ಮೂರಂತಸ್ತಿನ ಬಂಗಲೆ ಹಾಗೂ ತಾಲೂಕಿನ ಕೆಸ್ತೂರು ಬಳಿಯ ಅವಸರದಹಳ್ಳಿಯ ಫಾರ್ಮ್ ಹೌಸ್ ಅನ್ನು ಲೋಕಾಯುಕ್ತ ಪೊಲೀಸರು ತಪಾಸಣೆ ಮಾಡಿದ್ದಾರೆ. ಮನೆಯಲ್ಲಿ 2.50 ಲಕ್ಷ ನಗದು, 600 ಗ್ರಾಂ ಚಿನ್ನಾಭರಣ, 2 ಕಾರುಗಳು ಪತ್ತೆಯಾಗಿವೆ. 5 ನಿವೇಶನ, 2 ಮನೆ, 2 ವಾಣಿಜ್ಯ ಕಟ್ಟಡಗಳು, 1 ಫಾರ್ಮ್‌ಹೌಸ್, 6 ಎಕರೆ ಕೃಷಿಭೂಮಿ ಸೇರಿದಂತೆ ಒಟ್ಟು ₹2.71 ಕೋಟಿ ಆಸ್ತಿ ಪತ್ತೆಯಾಗಿದೆ.
ಫಾರ್ಮ್‌ಹೌಸ್‌ನಲ್ಲಿ ಮಿನಿ ಬಾರ್ ಮಾದರಿಯಲ್ಲಿ ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ಶೇಖರಿಸಿಟ್ಟಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೇ ಹಾಸ್ಟೆಲ್‌ನ ಬಡ ಮಕ್ಕಳಿಗೆ ವಿತರಿಸಬೇಕಿದ್ದ ಸರ್ಕಾರಿ ಪಠ್ಯಪುಸ್ತಕ, ನೋಟ್ ಪುಸ್ತಕ, ಹಾಸಿಗೆ, ಬೆಡ್‌ಶೀಟ್‌ಗಳು, ಕೊಬ್ಬರಿ ಎಣ್ಣೆಯ ಡಬ್ಬಿಗಳೂ ಸೇರಿದಂತೆ ಹಲವು ಸಾಮಗ್ರಿಗಳು ಸಿಕ್ಕಿವೆ.
ಸೋಮನಹಳ್ಳಿ ಮತ್ತು ಬೆಸಗರಹಳ್ಳಿಯ ಹಾಸ್ಟೆಲ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಶಿವರಾಜು ಒಂದು ತಿಂಗಳ ಹಿಂದಷ್ಟೇ ನಿವೃತ್ತರಾಗಿದ್ದಾರೆ. ಹಾಸ್ಟೆಲ್ ವಾರ್ಡನ್ ಮತ್ತು ಅಧೀಕ್ಷಕರಾಗಿ ಇವರು ಕೆಲಸ ಮಾಡಿದ್ದರು.