Road Accident: ಮದುವೆ ನಿಶ್ಚಯವಾಗಿದ್ದ ಯುವತಿ ರಸ್ತೆ ಅಪಘಾತದಲ್ಲಿ ಸಾವು
ಇಂಜಿನಿಯರ್ ಆಗಿದ್ದ ಹಾಗೂ ಮದುವೆ ನಿಶ್ಚಯವಾಗಿದ್ದ ಯುವತಿ ಬೈಕ್‌ಗಳು ಡಿಕ್ಕಿಯಾದ ಪರಿಣಾಮ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.


ಮಂಡ್ಯ: ಮದುವೆ ನಿಶ್ಚಯವಾಗಿದ್ದ 25 ವರ್ಷದ ಯುವತಿಯೊಬ್ಬರು ಮಂಡ್ಯ (Mandya News) ತಾಲೂಕಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಸಾವಿಗೀಡಾಗಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಸಾಪುರ ಗೇಟ್ ಬಳಿ ಈ ಘಟನೆ ನಡೆದಿದೆ. ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 25 ವರ್ಷದ ಬಿಕೆ ಶರಣ್ಯಗೌಡ ಎಂಬ ಯುವತಿ ಸಾವನ್ನಪ್ಪಿದ್ದಾರೆ. ಮೂಲತಃ ಮಂಡ್ಯದ ಮಳವಳ್ಳಿ ತಾಲೂಕಿನ ಬಳೆಹೊನ್ನಿಗ ಗ್ರಾಮದ ನಿವಾಸಿ ಕೃಷ್ಣೇಗೌಡ ಅವರ ಪುತ್ರಿ ಶರಣ್ಯ ಗೌಡ ಅವರು ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಕನಕಪುರ ತಾಲೂಕಿನ ಸಾತನೂರು ಪಂಚಾಯತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಕೆಲಸಕ್ಕಾಗಿ ಸ್ವಗ್ರಾಮ ಬಳೆಹೊನ್ನಿಗನದಿಂದ ಹಲಗೂರಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅವರ ಸ್ಕೂಟರ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ಶರಣ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲಗೂರು ಪೊಲೀಸರು ನೀಡಿರುವ ಮಾಹಿತಿ ಅನ್ವಯ, ಶರಣ್ಯ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ತಲೆಗೆ ತೀವ್ರ ಗಾಯಗಳಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಬೈಕ್ ಸವಾರನ ಕೈಗಳಿಗೆ ಗಾಯಗಳಾಗಿವೆ.
ಮೃತ ಶರಣ್ಯ ಗೌಡಗೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಮುಂದಿನ ತಿಂಗಳು ಫೆಬ್ರವರಿ 16ರಂದು ಶರಣ್ಯ ಮದುವೆ ನಿಶ್ಚಿಯವಾಗಿತ್ತು. ಆದರೆ, ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದಲೇ ಆಕೆ ದುರಂತ ಅಂತ್ಯ ಕಂಡಿದ್ದಾರೆ.
ಉತ್ತರ ಕನ್ನಡದಲ್ಲಿ ಗರ್ಭ ಧರಿಸಿದ ಹಸುವಿನ ತಲೆ ಕಡಿದು ಕ್ರೌರ್ಯ
ಕಾರವಾರ: ಬೆಂಗಳೂರಲ್ಲಿ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಘಟನೆ ನಡೆದ ಬೆನ್ನಲ್ಲೇ ಹೊನ್ನಾವರದ ಸಾಲ್ಕೋಡಿನ ಕೊಂಡಕುಳಿಯಲ್ಲಿ ದುರುಳರು, ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ವಿಕೃತಿ ಮರೆದಿರುವುದು ನಡೆದಿದೆ.
ಕೊಂಡಕುಳಿ ಕೃಷ್ಣ ಆಚಾರಿ ಎಂಬುವವರ ಹಸು ಮೇವಿಗಾಗಿ ಹೊರಗಡೆ ಹೋಗಿತ್ತು. ಆದರೆ ರಾತ್ರಿ ಹಸು ಬಾರದ ಹಿನ್ನೆಲೆಯಲ್ಲಿ ಮಾಲೀಕ ಹುಡುಕಾಡಿದ್ದಾರೆ. ಆಗ ಹಸು ಹುಡುಕಲು ಹೋದ ಮಾಲೀಕನಿಗೆ ಆಘಾತ ಕಾದಿತ್ತು. ಕಿರಾತಕರು ಹಸುವಿನ ರುಂಡ ಬೇರ್ಪಡಿಸಿ, ಕಾಲು ಕತ್ತರಿಸಿ, ದೇಹ ತೆಗೆದುಕೊಂಡು ಹೋಗಿದ್ದಾರೆ. ತನ್ನ ಹಸುವಿನ ರುಂಡ ನೋಡಿದ ಮಾಲೀಕ ಆಘಾತಕ್ಕೊಳಗಾಗಿದ್ದು, ಈ ಬಗ್ಗೆ ಹೊನ್ನಾವರ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.