Honey Trap Case: ಕೊನೆಗೂ ಹನಿಟ್ರ್ಯಾಪ್ ದೂರು ನೀಡಿದ ಸಚಿವ ರಾಜಣ್ಣ
ಹನಿಟ್ರ್ಯಾಪ್ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟಿರುವ ರಾಜಣ್ಣ, ಗೃಹ ಸಚಿವ ಪರಮೇಶ್ವರ್ ಎಲ್ಲೇ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆ ಎಂದು ಹೇಳಿದ್ದರು. ಹೇಳಿದಂತೆಯೇ ರಾಜಣ್ಣ ಸದಾಶಿವನಗರದಲ್ಲಿರುವ ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿ ದೂರು ನೀಡಿದ್ದಾರೆ.

ಸಚಿವ ರಾಜಣ್ಣ

ಬೆಂಗಳೂರು: ಸಚಿವ ಕೆಎನ್ ರಾಜಣ್ಣ (KN Rajanna) ತಾವು ಆರೋಪಿಸಿರುವ ಹನಿಟ್ರ್ಯಾಪ್ (honey trap) ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ದೂರು ನೀಡಿದ್ದಾರೆ. ಹನಿಟ್ರ್ಯಾಪ್ ಯತ್ನ ನಡೆದಿರುವ ಬಗ್ಗೆ ಸದನದಲ್ಲೇ ರಾಜಣ್ಣ ಬಹಿರಂಗಪಡಿಸಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ದೂರು ನೀಡಿರಲಿಲ್ಲ. ಅಂತಿಮವಾಗಿ ನಿನ್ನೆ (ಮಾರ್ಚ್ 25) ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹ ಸಚಿವ ಜಿ. ಪರಮೇಶ್ವರ್ (Home Minister Dr G Parameshwar) ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಈಗ ಗೃಹ ಸಚಿವರು ಈ ಪ್ರಕರಣವನ್ನು ಯಾವ ತನಿಖೆಗೆ ಆದೇಶಿಸುತ್ತಾರೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.
ಹನಿಟ್ರ್ಯಾಪ್ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟಿರುವ ರಾಜಣ್ಣ, ಗೃಹ ಸಚಿವ ಪರಮೇಶ್ವರ್ ಎಲ್ಲೇ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆ ಎಂದು ಹೇಳಿದ್ದರು. ಹೇಳಿದಂತೆಯೇ ರಾಜಣ್ಣ ನೆಲಮಂಗಲದಲ್ಲಿದ್ದ ಪರಮೇಶ್ವರ್ರನ್ನು ಹುಡುಕಿಕೊಂಡು ಹೋಗಿದ್ದರು. ಆದರೆ, ಇಲ್ಲಿ ಬೇಡ ಸದಾಶಿವನಗರದ ನಿವಾಸಕ್ಕೆ ಬನ್ನಿ ಎಂದು ಪರಮೇಶ್ವರ್ ಹೇಳಿ ಕಳುಹಿಸಿದ್ದರು. ಅದರಂತೆ ಇದೀಗ ರಾಜಣ್ಣ ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿ ದೂರು ನೀಡಿದ್ದಾರೆ.
ಗೃಹ ಸಚಿವರು ಹೇಳಿದ್ದೇನು?
ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸದನದಲ್ಲಿ ಹನಿಟ್ರ್ಯಾಪ್ ಆಗಿದೆ ಅಂತ ಚರ್ಚೆಗೆ ಬಂದಾಗ ಸಹಕಾರಿ ಸಚಿವ ರಾಜಣ್ಣನವರು ನನ್ನ ಮೇಲೂ ಪ್ರಯತ್ನ ಆಗಿದೆ ಎಂದು ಸರ್ಕಾರ, ಹಾಗೂ ಗೃಹ ಸಚಿವರಿಗೆ ಮನವಿ ಕೊಡುತ್ತೇನೆ ಎಂದು ಹೇಳಿದ್ದರು. ಇದು ನಿಜ ಆಗಿದ್ದರೆ ಉನ್ನತ ಮಟ್ಟದ ತನಿಖೆ ಮಾಡುವುದಾಗಿ ಹೇಳಿದ್ದೆ. ಆದರೆ ರಾಜಣ್ಣ ಅವರಿಗೆ ಪೂರ್ವ ನಿಯೋಜಿತ ಕೆಲಸದ ನಡುವೆ ದೂರು ಕೊಡಲು ಆಗಲಿಲ್ಲ. ಇಂದು ನನಗೆ ಮನವಿ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಂತೆ ಮನವಿ ಕೊಟ್ಟಿದ್ದು, ಮುಂದಿನ ಕ್ರಮದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಹನಿಟ್ರ್ಯಾಪ್ ಪ್ರಕರಣ ಯಾವ ತನಿಖೆಗೆ?
ಬಜೆಟ್ ಮೇಲಿನ ಚರ್ಚೆ ವೇಳೆ ಸಚಿವ ರಾಜಣ್ಣ ಅವರು ಸದನದಲ್ಲೇ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಬಹಿರಂಗಪಡಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ರಾಜಣ್ಣ ಅವರನ್ನ ಮಧುಬಲೆಗೆ ಬೀಳಿಸಲು ಪ್ರಯತ್ನಿಸಿದವರು ಯಾರು? ಈ ಹನಿಟ್ರ್ಯಾಪ್ ಯತ್ನ ಹಿಂದೆ ಯಾರ ಕೈವಾಡ ಇದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲ್ಲೇ ಇವೆ. ಈ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಆರೋಪ-ಪ್ರತ್ಯಾರೋಪಗಳ ನಡೆದಿವೆ. ಮತ್ತೊಂದೆಡೆ ಬಿಜೆಪಿ ನಾಯಕರು ಸಹ ಈ ಹನಿಟ್ರ್ಯಾಪ್ ಅನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಈ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ನೀಡುವಂತೆ ಬಿಜೆಪಿ ಪಟ್ಟು ಹಿಡಿದಿದೆ. ಹೀಗಾಗಿ ಗೃಹ ಸಚಿವ ಪರಮೇಶ್ವರ್ ಅವರೇ ಉನ್ನತ ಮಟ್ಟದ ತನಿಖೆ ಮಾಡಿಸುವುದಾಗಿ ಸದನದಲ್ಲೇ ಘೋಷಿಸಿದ್ದರು. ರಾಜಣ್ಣ ಅವರು ದೂರು ಕೊಟ್ಟ ಬಳಿಕ ಯಾವ ತನಿಖೆ ಎನ್ನುವುದನ್ನು ಹೇಳುವುದಾಗಿ ಪರಮೇಶ್ವರ್ ಹೇಳಿದ್ದರು. ಯಾವ ತನಿಖೆಗೆ ಆದೇಶಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ರಾಜಣ್ಣ ಅವರು ಇರುವ ಸಚಿವರ ಸರ್ಕಾರಿ ನಿವಾಸದಲ್ಲಿ ಸಿಸಿಟಿವಿಗಳೇ ಇಲ್ಲ. ಹೀಗಾಗಿ ಹನಿಟ್ರ್ಯಾಪ್ ಗ್ಯಾಂಗ್ ಬಂದು ಹೋಗಿರುವ ಬಗ್ಗೆ ಯಾವುದೇ ವಿಡಿಯೋ ಸಾಕ್ಷಿಗಳು ಇಲ್ಲ. ಹೀಗಾಗಿ, ಸರ್ಕಾರಿ ನಿವಾಸದಲ್ಲೇ ಹನಿಟ್ರ್ಯಾಪ್ಗೆ ಯತ್ನಿಸಿದ್ದಾರೆ ಎಂದಿದ್ದ ರಾಜಣ್ಣ ಸದ್ಯ ಅದನ್ನು ಸಾಬೀತುಪಡಿಸಲು ದಾಖಲೆಗಳಿಲ್ಲದೇ ಪರದಾಡುವಂತಾಗಿದೆ. ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಹೈಕಮಾಂಡ್ ಮುಂದೆಯೂ ಹೆಸರು ಹೇಳಲು ದಾಖಲೆ ಒದಗಿಸಬೇಕು. ಬಹಿರಂಗವಾಗಿ ಹೆಸರು ಹೇಳಲು ದಾಖಲೆಗಳನ್ನು ಒದಗಿಸಬೇಕು. ತನಿಖೆ ಶುರುವಾದರೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ರಾಜಕೀಯವಾಗಿ ಎಚ್ಚರಿಕೆ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ: KN Rajanna: ಬ್ಲೂ ಜೀನ್ಸ್ ಹುಡುಗಿ ಹನಿ ಟ್ರ್ಯಾಪ್ ಮಾಡಲು ಬಂದಿದ್ದಳು: ಸಚಿವ ಕೆ.ಎನ್.ರಾಜಣ್ಣ