Shantaram siddi: ಪರಿಷತ್ ಸಭಾಪತಿ ಪೀಠ ಅಲಂಕರಿಸಿದ ಶಾಂತಾರಾಮ ಸಿದ್ಧಿ, ಕೋಟ ಶ್ರೀನಿವಾಸ ಪೂಜಾರಿ ಹರ್ಷ
ಸಿದ್ದಿ ಸಮುದಾಯದ ರಾಜಕಾರಣಿಯೊಬ್ಬರು ಪೀಠದಲ್ಲಿ ಆಸೀನರಾಗಿರುವುದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು. ಪರಿಷತ್ ಸಭಾಪತಿ ವಿರಮಿಸಿದ್ದ ವೇಳೆ, ಸದನದಲ್ಲಿದ್ದ ಹಿರಿಯ ಸದಸ್ಯ ಶಾಂತರಾಮ ಸಿದ್ದಿಯವರಿಗೆ ಅವಕಾಶ ಸಿಕ್ಕಿದ್ದು, ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಬಗ್ಗೆ ಬಿಜೆಪಿ ಹರ್ಷ ವ್ಯಕ್ತಪಡಿಸಿದೆ.
ಶಾಂತಾರಾಮ ಸಿದ್ದಿ -
ಬೆಂಗಳೂರು, ಮಾರ್ಚ್ 26: ಕರ್ನಾಟಕ ವಿಧಾನ ಪರಿಷತ್ (Karnataka Legislative Council) ಕಲಾಪದ ವೇಳೆ ಸಭಾಪತಿ (Speaker) ಪೀಠವನ್ನು ಅಲಂಕರಿಸುವ ಹೊಣೆಗಾರಿಕೆ ಬಿಜೆಪಿಯಿಂದ (BJP) ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಅವರದಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು ವಿರಮಿಸಿದ್ದ ವೇಳೆ, ಶಾಂತರಾಮ ಸಿದ್ದಿಯವರಿಗೆ (Shantaram Siddi) ಕೆಲಕಾಲ ಕಲಾಪ ನಡೆಸುವ ಅವಕಾಶ ದೊರಕಿದೆ. ಈ ಬಗ್ಗೆ ಬಿಜೆಪಿ ಹರ್ಷ ವ್ಯಕ್ತಪಡಿಸಿದೆ.
ಸಿದ್ದಿ ಸಮುದಾಯದ ರಾಜಕಾರಣಿಯೊಬ್ಬರು ಪೀಠದಲ್ಲಿ ಆಸೀನರಾಗಿರುವುದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು. ವಿಧಾನ ಪರಿಷತ್ ಕಲಾಪದ ವೇಳೆ ಪರಿಷತ್ ಸಭಾಪತಿ ವಿರಮಿಸುವ ವೇಳೆ, ಸದನದಲ್ಲಿರುವ ಹಿರಿಯ ಸದಸ್ಯರಿಗೆ ಕೆಲವು ಬಾರಿ ಕಲಾಪ ನಡೆಸಲು ಅವಕಾಶ ನೀಡಲಾಗುತ್ತದೆ. ಅದರಂತೆ ನಿನ್ನೆ (ಮಾರ್ಚ್ 25) ಕಲಾಪದ ವೇಳೆ ಶಾಂತರಾಮ ಸಿದ್ದಿಯವರಿಗೆ ಅವಕಾಶ ಸಿಕ್ಕಿದ್ದು, ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಶಾಂತಾರಾಮ ಬುಡ್ನಾ ಸಿದ್ದಿ ಅವರು 2020ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ತಿಗೆ ನಾಮನಿರ್ದೇಶಿತರಾಗಿದ್ದರು. ಈ ಮೂಲಕ ರಾಜ್ಯದ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗಗಳಲ್ಲಿ ಒಂದಾದ ಸಿದ್ದಿ ಸಮುದಾಯದಿಂದ ರಾಜಕೀಯಕ್ಕೆ ಪ್ರವೇಶಿಸಿದ ಮೊದಲಿಗರು ಎನಿಸಿಕೊಂಡಿದ್ದರು. ಸಿದ್ಧಿ ಜನಾಂಗ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ಶಾಂತರಾಮ ಸಿದ್ಧಿ ಅವರು ತಮ್ಮ ಜನಾಂಗದಲ್ಲಿ ಪದವಿ (ಬಿಎ) ಪಡೆದ ಮೊದಲ ಕೆಲವು ವ್ಯಕ್ತಿಗಳಲ್ಲಿ ಒಬ್ಬರು. 1989 ರಿಂದಲೇ ಆರ್‌ಎಸ್‌ಎಸ್‌ನ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ವನವಾಸಿ ಕಲ್ಯಾಣ ಆಶ್ರಮದ ಮೂಲಕ ಅರಣ್ಯವಾಸಿಗಳ, ಬುಡಕಟ್ಟು ಜನರ ಹಕ್ಕುಗಳಿಗಾಗಿ ಮತ್ತು ಅವರ ಶಿಕ್ಷಣಕ್ಕಾಗಿ ದಶಕಗಳ ಕಾಲ ಶ್ರಮಿಸಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಹರ್ಷ
ಈ ಕುರಿತು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ. ಅವರ ಪೋಸ್ಟ್ ಈ ಕೆಳಗಿನಂತಿದೆ:
"ವನವಾಸಿ ಸಿದ್ಧಿ ಎಂಬ ಸಾತ್ವಿಕ, ಸಭಾಪತಿ ಪೀಠದಲ್ಲಿ... ಸರಿಸುಮಾರು ಆರು ವರ್ಷಗಳ ಹಿಂದೆ ಶಾಂತರಾಮ ಸಿದ್ಧಿ ಎಂಬ ಮುಗ್ಧಗಣ್ಣಿನ, ಗುಂಗುರು ತಲೆ ಕೂದಲಿನ ರಾಜಕೀಯ ಕ್ಷೇತ್ರಕ್ಕೆ ಮಾತ್ರವಲ್ಲ, ಸುತ್ತಲ ಪ್ರಪಂಚಕ್ಕೆ ಹೊಸಬರಾದ ಹೆಚ್ಚಾಗಿ ಅರಣ್ಯ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುವ ತನಗಿಂತ, ತನ್ನ ಜಾತಿ ಧರ್ಮಕ್ಕಿಂತ ದೇಶ ಮೊದಲು ಎಂದು ಬದುಕಿದ ಸಂಘದ ಕಾರ್ಯಕರ್ತ ಬುಡಕಟ್ಟು ಸಿದ್ದಿ ಜನಾಂಗದ ಶಾಂತರಾಮರ ಮನೆಗೆ ಧಾವಿಸಿದ್ದೆ. ಉತ್ತರಕನ್ನಡ ಜಿಲ್ಲೆಯ, ಯಲ್ಲಾಪುರ ಸನಿಹದಲ್ಲಿ ಪ್ಲಾಸ್ಟಿಕ್ ಹೊದಿಸಿದ ಹಳೆಯ ಹಂಚಿನ ಮನೆ ಎದುರು ನಿಂತು ನಿಮ್ಮನ್ನು ನಮ್ಮ ಪಾರ್ಟಿ ಮೇಲ್ಮನೆಯ ನಾಮನಿರ್ದೇಶಿತ ಶಾಸಕರಾಗಿ ಘೋಷಿಸಿದೆ. ಅಭಿನಂದಿಸಲು ಬಂದೆ ಎಂದಿದ್ದೆ.. ನನ್ನ ಕೈ ಹಿಡಿದು ಮನೆಯೊಳಗೆ ಕರೆದೊಯ್ದ ಶಾಂತರಾಮ ಸಿದ್ಧಿ ಪುಟ್ಟ ಮನೆಯ ಗೋಡೆಗೆ ತಗಲಿ ಕುಳ್ಳಿರಿಸಿದ ದೇವರ ಫೋಟೋದೊಂದಿಗೆ ಭಾರತಮಾತೆ, ಡಾಕ್ಟರ್‌ಜಿ, ಗುರೂಜಿ ಭಾವಚಿತ್ರಗಳೆದುರು ಕೈಮುಗಿದು ನಿಂತು ಭಾವುಕರಾಗಿದ್ದರು. ಮರುದಿವಸ ಪ್ರಜಾವಾಣಿಯಲ್ಲಿ ಕಮಲದಲ್ಲಿ ಅರಳಿದ ಕಾಡ ಕುಸುಮ ಎಂಬ ಶಿರೋನಾಮೆಯಡಿ ನಾನೊಂದು ಲೇಖನ ಬರೆದಿದ್ದೆ. ಕಮಲದಲ್ಲಿ ಅರಳಿದ ಎಂಬ ಶಬ್ದದ ಕಾರಣಕ್ಕೆ ಪರಂಪರೆಯ ಸಂಘ ವಿರೋಧಿಗಳಿಂದ ಕಟುಶಬ್ಧಗಳಿಂದ ಬೈಸಿಕೊಂಡಿದ್ದೆ. ನನ್ನ ಪ್ರೀತಿಯ ಶಾಂತರಾಮ ಸಿದ್ದಿ ಗಟ್ಟಿ ಧ್ವನಿಯಲ್ಲಿ ಅರಣ್ಯ ವಾಸಿಗಳ ಬದುಕಿನ ಬಗ್ಗೆ, ಸ್ವಂತ ಸೂರಿಲ್ಲದ ಅಲೆಮಾರಿಗಳ ಬಗ್ಗೆ, ನಡೆಯಲು ದಾರಿ ಇಲ್ಲದ, ಕುಡಿಯುವ ನೀರಿಲ್ಲದ ಕಡು ಬಡವರ ಬಗ್ಗೆ ಮಾತನಾಡುವುದು ಕೇಳಿ ಖುಷಿಗೊಂಡಿದ್ದೆ.
ಇಂದು ನಾನಿಲ್ಲದ ಮೇಲ್ಮನೆಯ ಸದನದಲ್ಲಿ ಶಾಂತರಾಮ ಸಿದ್ಧಿ ಎಂಬ ವನವಾಸಿ ಪ್ರತಿನಿಧಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದು ಕಂಡು ರೋಮಾಂಚನಗೊಂಡೆ. ನನ್ನ ದೃಷ್ಟಿಯಲ್ಲಿ ಭಾರತ ದೇಶದ ರಾಷ್ಟ್ರಪತಿಯಾದ ದ್ರೌಪದಿ ಮುರ್ಮರಿಂದ ಆರಂಭವಾಗಿ ಯಲ್ಲಾಪುರದ ಕಾಡಂಚಿನ ಶಾಂತರಾಮ ಸಿದ್ಧಿಯವರವರೆಗೆ ಅನೇಕ ಮಂದಿ ಕಮಲದಲ್ಲಿ ಅರಳಿದ ಕಾಡ ಕುಸುಮಗಳು. ಬಾಬಾ ಸಾಹೇಬರ ಸಂವಿಧಾನದ ಮೂಲ ಆಶಯ ಸಮಾಜದ ಕಟ್ಟ ಕಡೆಯ ಮನುಷ್ಯರು ಮುಖ್ಯ ವಾಹಿನಿಗೆ ಬರಬೇಕೆಂಬುದು. ಇದರ ಸೃಷ್ಟಿಕರ್ತ ಮೋದಿ ಎಂಬ ಸಾಮಾಜಿಕ ನ್ಯಾಯದ ಹರಿಕಾರ ಎಂದರಷ್ಟೇ ಸಾಕೆ..? ಅಥವಾ ಸಂಘದ ಮೂಲ ಆಶಯವೂ ಇದೇ ಎನ್ನಬೇಕೆ..?"
ಅಭಿಮಾನ ಹೆಚ್ಚಾಗುತ್ತಿದೆ: ಕಟೀಲ್
ಈ ಬಗ್ಗೆ ಕರ್ನಾಟಕ ಬಿಜೆಪಿಯ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ವಿಧಾನಪರಿಷತ್ ಸ್ಥಾನಕ್ಕೆ ಸಿದ್ಧಿ ಜನಾಂಗದ ಶ್ರೀ ಶಾಂತಾರಾಮ್ ಸಿದ್ದಿಯವರನ್ನು ಆಯ್ಕೆ ಮಾಡಿ, ಪ್ರಸ್ತುತ ಸಭಾಪತಿ ಸ್ಥಾನದಲ್ಲಿ ಅವರು ವಿಧಾನಪರಿಷತ್ ಕಲಾಪವನ್ನು ನಡೆಸುವುದನ್ನು ನೋಡುವಾಗ ನಮ್ಮ ಪಕ್ಷದ ಮೇಲಿರುವ ನಮ್ಮೆಲ್ಲರ ಅಭಿಮಾನ ಇನ್ನಷ್ಟು ಹೆಚ್ಚಾಗುತ್ತಿದೆ ಎಂದಿದ್ದಾರೆ.