ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MUDA Scam: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪತ್ನಿಗೆ ನೋಟಿಸ್​ ಜಾರಿ ಮಾಡಲು ಹೈಕೋರ್ಟ್​ ಆದೇಶ

CM Siddaramaiah: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಮುಡಾ ಪ್ರಕರಣದ ಮೇಲ್ಮನವಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ, ಅವರ ಸಹೋದರ ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ, ಪೊಲೀಸ್‌ ಮಹಾನಿರ್ದೇಶಕರು ಮತ್ತು ಮೈಸೂರಿನ ವಿಜಯನಗರ ಠಾಣಾಧಿಕಾರಿಗೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಸಿದ್ದರಾಮಯ್ಯ ಪತ್ನಿಗೆ ನೋಟಿಸ್​ ಜಾರಿ ಮಾಡಲು ಹೈಕೋರ್ಟ್​ ಆದೇಶ

Profile Ramesh B Jul 10, 2025 5:18 PM

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪತ್ನಿ ಬಿ.ಎಂ.ಪಾರ್ವತಿ ಜತೆಗೆ ಅವರ ಸಹೋದರ ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ, ಪೊಲೀಸ್‌ ಮಹಾನಿರ್ದೇಶಕರು ಮತ್ತು ಮೈಸೂರಿನ ವಿಜಯನಗರ ಠಾಣಾಧಿಕಾರಿಗೆ ನೋಟಿಸ್​ ಜಾರಿಗೊಳಿಸುವಂತೆ ಹೈಕೋರ್ಟ್​ (High Court) ಆದೇಶ ನೀಡಿದೆ. ಮುಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ 14 ನಿವೇಶಗಳನ್ನು ಹಂಚಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಗುರುವಾರ (ಜು. 10) ನಡೆಯಿತು.

ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರ ವಿಭಾಗೀಯ ಪೀಠ ನಡೆಸಿತು. ಈ ವೇಳೆ ಸ್ನೇಹಮಯಿ ಕೃಷ್ಣ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ.ಜಿ.ರಾಘವನ್‌ ಪ್ರಕರಣದ ಬೆಳವಣಿಗೆಯ ಬಗ್ಗೆ ಪೀಠಕ್ಕೆ ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ: CM Siddaramaiah: 2028ರಲ್ಲೂ ನಾನೇ ಪಕ್ಷವನ್ನು ಮುನ್ನಡೆಸುತ್ತೇನೆ: ಸಿಎಂ ಸಿದ್ದರಾಮಯ್ಯ

ವಾದ ಆಲಿಸಿದ ಪೀಠವು ಸಿಬಿಐ ತನಿಖೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಮೇಲ್ಮನವಿಯಲ್ಲಿ ಬಿ.ಎಂ.ಪಾರ್ವತಿ ಅವರಿಗೆ ನೋಟಿಸ್‌ ಜಾರಿಯಾಗಿಲ್ಲ. ಜತೆಗೆ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣ ಎದುರಿಸುವಂತೆ ಮಾಡಿರುವ ಆದೇಶ ಬದಿಗೆ ಸರಿಸಲು ಕೋರಿ ಜೆ.ದೇವರಾಜು ಸಲ್ಲಿಸಿರುವ ಮೇಲ್ಮನವಿಯಲ್ಲಿ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ, ಪೊಲೀಸ್‌ ಮಹಾನಿರ್ದೇಶಕರು ಹಾಗೂ ಮೈಸೂರಿನ ವಿಜಯನಗರ ಠಾಣಾಧಿಕಾರಿಗೆ ನೋಟಿಸ್‌ ಜಾರಿಯಾಗಿಲ್ಲ. ಹೀಗಾಗಿ ಎಲ್ಲರಿಗೂ ನೋಟಿಸ್‌ ಮತ್ತು ಹ್ಯಾಂಡ್‌ ಸಮನ್ಸ್‌ ಜಾರಿ ಮಾಡುವಂತೆ ನಿರ್ದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೆ. 4ಕ್ಕೆ ಮುಂದೂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿಸಿದ್ದ ಆದೇಶವನ್ನು ಏಕಸದಸ್ಯ ಪೀಠವು 2024ರ ಸೆಪ್ಟೆಂಬರ್‌ 24ರಂದು ಎತ್ತಿ ಹಿಡಿದಿತ್ತು. ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಮೇಲ್ಮನವಿ ಸಲ್ಲಿಸಿದ್ದರು. ಏಕಸದಸ್ಯ ಪೀಠದ ಆದೇಶ ಹೊರಬಿದ್ದು 10 ತಿಂಗಳಾಗಿದ್ದು ಮೇಲ್ಮನವಿಗಳ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ.

ಏನಿದು ಪ್ರಕರಣ?

ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂದು ಮುಡಾ ನಿವೇಶನಗಳನ್ನು ಪತ್ನಿಯ ಹೆಸರಿಗೆ ಮಂಜೂರು ಮಾಡಿಸಿಕೊಂಡಿರುವ ಆರೋಪ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಬೇಕು ಎಂದು ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್‌ ಕುಮಾರ್‌ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಖಾಸಗಿ ದೂರು ಸಲ್ಲಿಸಿದ್ದರು.

ಮುಡಾದಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪ ಸಂಬಂಧ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು.