ಅಳುವ ಇಮೋಜಿಯೊಂದಿಗೆ ಡೆತ್ ನೋಟ್ ಬರೆದಿದ್ದ ಆತ್ಮಹತ್ಯೆ ಮಾಡಿಕೊಂಡ ಸೋದರಿಯರು; ಪತ್ರದಲ್ಲಿ ಏನಿದೆ?
ಉತ್ತರ ಪ್ರದೇಶದ ಗಾಜಿಯಾಬಾದ್‍ನ ಅಪಾರ್ಟ್‌ಮೆಂಟ್‍ವೊಂದರಿಂದ ಜಿಗಿದು ಮೂವರು ಸಹೋದರಿಯರು ಆತ್ಮಹತ್ಯೆಗೆ ಶರಣಾದ ಘಟನೆ ಭಾರಿ ಸಂಚಲನ ಮೂಡಿಸಿದೆ. ಈ ದುರ್ಘಟನೆಗೆ ಆನ್‌ಲೈನ್ ಗೇಮ್ ಕಾರಣವೇ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ತ್ರಿವಳಿ ಸೋದರಿಯರು -
ಲಖನೌ, ಫೆ. 4: ಮೂವರು ಸಹೋದರಿಯರು ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ನಡೆದಿದೆ. ತ್ರಿವಳಿ ಆತ್ಮಹತ್ಯೆಯ ನಂತರ ಒಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಮೂವರು ಅಪ್ರಾಪ್ತ ಸಹೋದರಿಯರು ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ಒಂಬತ್ತನೇ ಮಹಡಿಯಿಂದ ಹಾರಿದ್ದರು. ಅವರ ಪೋಷಕರು ತಮ್ಮ ಗೇಮಿಂಗ್ ವ್ಯಸನವನ್ನು ವಿರೋಧಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ಮುನ್ನ ಅವರು ತಮ್ಮ ಡೈರಿಯಲ್ಲಿ ಎಂಟು ಪುಟಗಳ ಪತ್ರವನ್ನು ಬರೆದಿದ್ದಾರೆ. ಅದರಲ್ಲಿ ಅವರು ತಮ್ಮ ಪೋಷಕರಲ್ಲಿ ಕ್ಷಮೆಯಾಚಿಸಿದ್ದು, ತಮ್ಮ ಗೇಮಿಂಗ್ ಚಟುವಟಿಕೆಗಳನ್ನು (Online Game) ವಿವರಿಸಿದ್ದಾರೆ.
ಹಿಂದಿ-ಇಂಗ್ಲಿಷ್ ಮಿಶ್ರಿತ ಭಾಷೆಯಲ್ಲಿಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ತಾವು ಬರೆದಿರುವ ಪತ್ರವನ್ನು ಓದುವಂತೆ ಪೋಷಕರನ್ನು ಒತ್ತಾಯಿಸಿದ್ದಾರೆ. ಡೈರಿಯಲ್ಲಿ ಬರೆದಿರುವುದು ಸತ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ಈ ಡೈರಿಯಲ್ಲಿ ಬರೆದಿರುವ ಎಲ್ಲವನ್ನೂ ಓದಿ ಏಕೆಂದರೆ ಅದು ಸತ್ಯ. ನಮ್ಮನ್ನು ಕ್ಷಮಿಸಿಬಿಡಿ ಎಂದು ಬರೆದು, ದೊಡ್ಡ ಅಳುವ ಇಮೋಜಿಯನ್ನು ಹಾಕಿದ್ದಾರೆ.
ಅಲ್ಲದೆ ಅವರ ಕೋಣೆಯ ಗೋಡೆಯ ಮೇಲೆ, ʼʼನಾನು ತುಂಬಾ ತುಂಬಾ ಒಂಟಿಯಾಗಿದ್ದೇನೆ, ನನ್ನ ಜೀವನ ತುಂಬಾ ಒಂಟಿಯಾಗಿದೆʼʼ ಎಂದು ಒಬ್ಬ ಬಾಲಕಿ ಬರೆದಿದ್ದಾಳೆ. ವಸತಿ ಪಟ್ಟಣವಾದ ಭಾರತ್ ಸಿಟಿಯಲ್ಲಿ 12 ವರ್ಷದ ಪಖಿ, 14 ವರ್ಷದ ಪ್ರಾಚಿ ಮತ್ತು 16 ವರ್ಷದ ವಿಶಿಕಾ ಎಂಬ ಬಾಲಕಿಯರು ತಮ್ಮ ಕೋಣೆಯನ್ನು ಒಳಗಿನಿಂದ ಲಾಕ್ ಮಾಡಿ, ಬೆಳಗಿನ ಜಾವ 2.15ರ ಸುಮಾರಿಗೆ ಬಾಲ್ಕನಿಯ ಕಿಟಕಿಯಿಂದ ಒಬ್ಬೊಬ್ಬರಾಗಿ ಹಾರಿದ್ದರು.
ಆನ್‌ಲೈನ್ ಗೇಮ್ ಚಟ; 9 ನೇ ಮಹಡಿಯಿಂದ ಜಿಗಿದು ಮೂವರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ
ಶಬ್ಧ ಎಷ್ಟು ಜೋರಾಗಿತ್ತೆಂದರೆ ವಸತಿ ಸಂಕೀರ್ಣದಲ್ಲಿದ್ದ ಅನೇಕ ಜನರು ಎಚ್ಚರಗೊಂಡರು. ಅನೇಕ ನಿವಾಸಿಗಳು ಮತ್ತು ಭದ್ರತಾ ಸಿಬ್ಬಂದಿ ಏನಾಯ್ತು ಎಂದು ನೋಡಲು ಧಾವಿಸಿದರು. ಬಾಲಕಿಯರ ಕುಟುಂಬ ಸದಸ್ಯರು ಅವರ ಕೋಣೆಗೆ ಬಂದು ನೋಡುವಷ್ಟರಲ್ಲಿ ಮೂವರೂ ಜಿಗಿದಿದ್ದರು. ಬಾಲಕಿಯರನ್ನು ತಕ್ಷಣ ಲೋನಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಾಲಕಿಯರು ಆನ್‌ಲೈನ್ ಟಾಸ್ಕ್ ಆಧಾರಿತ ಕೊರಿಯನ್ ಗೇಮ್‌ನ ವ್ಯಸನಿಯಾಗಿದ್ದರು ಎಂದು ಹೇಳಲಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅವರಲ್ಲಿ ಈ ಗೀಳು ಬೆಳೆಯಿತು. ಈ ಗೀಳು ಎಷ್ಟಿತ್ತೆಂದರೆ, ಅವರು ಕೊರಿಯನ್ ಹೆಸರನ್ನು ತಮಗಾಗಿ ಇಟ್ಟುಕೊಂಡಿದ್ದರು. ಆಟಕ್ಕೆ ನಿಯೋಜಿಸಲಾದ ಕಾರ್ಯಗಳನ್ನು ನಿರ್ವಹಿಸಿದ್ದರು. ಇದು ಸೋದರಿಯರು ಬರೆದಿರುವ ಆತ್ಮಹತ್ಯಾ ಪತ್ರದಲ್ಲಿ ಸ್ಪಷ್ಟವಾಗಿದೆ.
ʼʼನಾವು ಕೊರಿಯಾ ಬಿಡಲು ಸಾಧ್ಯವಿಲ್ಲ. ಕೊರಿಯಾ ನಮ್ಮ ಜೀವನ. ನೀವು ನಮ್ಮನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ. ನಾವು ನಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದೇವೆʼʼ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಅವರ ತಂದೆ ಹೇಳಿದ್ದಾರೆ.
ಒಂಟಿಯಾಗಿದ್ದ ವೃದ್ಧೆಯನ್ನು ಕೊಂದು 73 ಗ್ರಾಂ ಚಿನ್ನಾಭರಣ ದರೋಡೆ
ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ ಆತ್ಮಹತ್ಯೆಗೆ ಕಾರಣವಾಗಿರಬಹುದೇಂಬ ಅನುಮಾನ ಆರಂಭದಲ್ಲೇ ವ್ಯಕ್ತವಾಗಿತ್ತು. ತ್ರಿವಳಿ ಆತ್ಮಹತ್ಯೆಯು ಟಾಸ್ಕ್‌ನ ಭಾಗವಾಗಿತ್ತೇ ಎಂಬುದನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ. ಮಧ್ಯದ ಸಹೋದರಿ ಪ್ರಾಚಿ ತನ್ನ ಒಡಹುಟ್ಟಿದವರನ್ನು ಮುನ್ನಡೆಸುತ್ತಿದ್ದರು ಎಂದು ಹೇಳಲಾಗುತ್ತದೆ.
ಈ ಆಟದ ಬಗ್ಗೆ ತನಗೆ ತಿಳಿದಿರಲಿಲ್ಲ, ಇಲ್ಲದಿದ್ದರೆ ಅವರಿಗೆ ಅದನ್ನು ಆಡಲು ಬಿಡುತ್ತಿರಲಿಲ್ಲ ಎಂದು ಮೃತ ಬಾಲಕಿಯರ ತಂದೆ ಹೇಳಿದರು. ʼʼಈ ಘಟನೆ ಅತ್ಯಂತ ಭಯಾನಕವಾಗಿದೆ. ಇದು ಇನ್ನೊಂದು ಮಗುವಿಗೆ ಎಂದಿಗೂ ಸಂಭವಿಸದಿರಲಿ ಎಂದು ನಾನು ಆಶಿಸುತ್ತೇನೆ. ಪೋಷಕರು ತಮ್ಮ ಮಕ್ಕಳು ವಿಡಿಯೋ ಗೇಮ್‌ಗಳನ್ನು ಆಡಲು ಬಿಡಬೇಡಿ. ನನಗೆ ಈ ಆಟದ ಬಗ್ಗೆ ತಿಳಿದಿರಲಿಲ್ಲ. ಇಲ್ಲದಿದ್ದರೆ, ನಾನು ಅವರನ್ನು ಆಡಲು ಬಿಡುತ್ತಿರಲಿಲ್ಲʼʼ ಎಂದು ಅವರು ಹೇಳಿದರು.
ಪ್ರಾಥಮಿಕ ತನಿಖೆಯ ಪ್ರಕಾರ, ಕಳೆದ ಎರಡು ವರ್ಷಗಳಿಂದ ಬಾಲಕಿಯರು ಶಾಲೆಗೆ ಹೋಗಿಲ್ಲ ಎಂದು ತಿಳಿದುಬಂದಿದೆ. ಕಳಪೆ ಶೈಕ್ಷಣಿಕ ಸಾಧನೆ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಅವರು ಮನೆಯಲ್ಲಿಯೇ ಇದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ನಿಮಿಷ್ ಪಾಟೀಲ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ, ಕುಟುಂಬವು ಮೊಬೈಲ್ ಫೋನ್ ಬಳಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು. ತ್ರಿವಳಿ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತನಿಖೆಯಲ್ಲಿದೆ ಎಂದು ಅವರು ಹೇಳಿದರು.