ಒಳಮೀಸಲಾತಿ ಜಾರಿ ಸರ್ಕಾರದ ಐತಿಹಾಸಿಕ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣನೆ
CM Siddaramaiah: ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿನ ಅಸಮಾನತೆ ಹೋಗಲಾಡಿಸಲು ಐತಿಹಾಸಿಕ ಒಳ ಮೀಸಲಾತಿಯನ್ನು ಜಾರಿಗೊಳಿಸಿದೆ. ಎಡಗೈಗೆ ಶೇ. 5.25, ಬಲಗೈಗೆ ಶೇ. 5.25 ಹಾಗೂ ಇತರ ಉಪಜಾತಿಗಳಿಗೆ ಶೇ. 4.5ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ. -
ಮೈಸೂರು, ಮೇ 6: ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಗಾಗಿ ಶಿಕ್ಷಣ ಅಗತ್ಯವಾಗಿದ್ದು, ಭೋವಿ ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಸಿದ್ದರಾಮೇಶ್ವರ ಜಯಂತಿಯ ಶುಭ ಕೋರಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಸಮಸಮಾಜ ನಿರ್ಮಿಸುವ ಸಂಕಲ್ಪವನ್ನು ಸರ್ಕಾರ ಹೊಂದಿದೆ. ಉತ್ಪಾದಿಸಿದ ಸಂಪತ್ತು ಸಮಾನವಾಗಿ ಹಂಚಿಕೆಯಾಗಿಬೇಕು. ರಾಜ್ಯದ ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬುದೇ ಸರ್ಕಾರದ ಉದ್ದೇಶ. ಸಿದ್ದರಾಮೇಶ್ವರ ಸೇರಿ ಸಂತ ಮಹಾಶಯರು, ಸಮಾಜದಲ್ಲಿ ಜಾತಿವರ್ಗಗಳ ವ್ಯವಸ್ಥೆ ತೊಲಗಬೇಕು ಎಂದು ಬಯಸಿದ್ದರು. ಬಸವಾದಿ ಶರಣರು 12ನೇ ಶತಮಾನದಲ್ಲಿ ಸಮಾನತೆಯ ಸಿದ್ಧಾಂತವನ್ನು ಬೋಧಿಸಿದ್ದರು. ಶೋಷಣೆಗೊಳಗಾದ ಹಾಗೂ ಅವಕಾಶವಂಚಿತ ಸಮುದಾಯಗಳು ಸಂಘಟಿತರಾಗುವ ಸಮ್ಮೇಳನಗಳು ಉತ್ತಮ ಕಾರ್ಯಗಳಾಗಿವೆ ಎಂದರು.
ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರಿಸಿದ್ದೇನೆ
ಬಸವ ಜಯಂತಿಯಂದು ನಾನು 2013 ಮೇ 13ರಂದು ನಾನು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದೆ. ಬಸವಣ್ಣ ಬೋಧಿಸಿದಂತೆ ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರಿಸಿದ್ದೇನೆ. ರಾಜಕೀಯ ಸ್ವಾತಂತ್ರ್ಯವು, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯದ ತಳಹದಿಯ ಮೇಲೆ ನಿಂತಿದೆ. ಶಿಕ್ಷಣ ಪಡೆದಾಗ ಮಾತ್ರ ಸಾಮಾಜಿಕ ಆರ್ಥಿಕ ಶಕ್ತಿ ದೊರಕಲು ಸಾಧ್ಯ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ಮಹಿಳಾ ಸಮೂಹಕ್ಕೆ ವರದಾನ
ಆರ್ಥಿಕವಾಗಿ ಶಕ್ತಿಯಿಲ್ಲದವರಿಗೆ ಗ್ಯಾರಂಟಿ ಯೋಜನೆಗಳನ್ನು ಸಮಾನವಾಗಿ ನೀಡಲಾಗಿದೆ. ಮಹಿಳೆಯರಿಗೆ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ತಾರತಮ್ಯವಿಲ್ಲದೆ ನೀಡಲಾಗುತ್ತಿದೆ. ನಮ್ಮ ಸರ್ಕಾರ ಭೋವಿ ನಿಗಮವೂ ಸೇರಿ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲ ಮನ್ನಾ ಮಾಡಲಾಗಿದೆ. ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿನ ಅಸಮಾನತೆ ಹೋಗಲಾಡಿಸಲು ಐತಿಹಾಸಿಕ ಒಳ ಮೀಸಲಾತಿಯನ್ನು ಜಾರಿಗೊಳಿಸಿದೆ. ಎಡಗೈಗೆ ಶೇ. 5.25, ಬಲಗೈಗೆ ಶೇ. 5.25 ಹಾಗೂ ಇತರ ಉಪಜಾತಿಗಳಿಗೆ ಶೇ. 4.5ರಷ್ಟು ಹಂಚಿಕೆ ಮಾಡಲಾಗಿದೆ ಎಂದರು.
ಅವಕಾಶಗಳಿಂದ ಯಾರೂ ವಂಚಿತರಾಗಬಾರದು
ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದ ಮುಖ್ಯಮಂತ್ರಿ, ಸಮುದಾಯದವರಿಗೆ ಕುಲಪತಿ, ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಏಳು ಕೋಟಿ ಜನರಿಗೂ ನ್ಯಾಯ ಸಿಗಬೇಕು ಹಾಗೂ ಯಾರೂ ಅವಕಾಶಗಳಿಂದ ವಂಚಿತರಾಗಬಾರದು ಎಂದರು. ಸಂವಿಧಾನ ರಚನೆಯಾದ ನಂತರ ಸಮಾನತೆಯನ್ನು ಸಾಧಿಸುವತ್ತ ದೇಶ ಸಾಗಿದ್ದು, ಸಂವಿಧಾನ ಹೇಳುವಂತೆಯೇ ನಡೆದುಕೊಳ್ಳುತ್ತೇವೆ ಎಂದರು.
ಕ್ರಿಮಿನಲ್ ಸಂಚಿನಿಂದ ಶೃಂಗೇರಿಯಲ್ಲಿ ಬಿಜೆಪಿಗೆ ಗೆಲುವು; ಸಿದ್ದರಾಮಯ್ಯ ಆರೋಪ
ಸಹಿಷ್ಣುತೆ ರೂಡಿಸಿಕೊಳ್ಳಬೇಕು
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಸಂವಿಧಾನದ ಮೂಲ ತತ್ವಗಳು. ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ಎಲ್ಲ ಜಾತಿಗಳನ್ನು ಪ್ರೀತಿಸಿ, ಅವರೂ ನಮ್ಮನ್ನು ಪ್ರೀತಿಸುವಂತೆ ಮಾಡಬೇಕು ಹಾಗೂ ಸಹಿಷ್ಣುತೆಯನ್ನು ರೂಡಿಸಿಕೊಳ್ಳಬೇಕು. ಉತ್ಪಾದನೆಯಲ್ಲಿ ಎಲ್ಲರೂ ಭಾಗವಹಿಸಿ ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಿದ್ಧರಾಮೇಶ್ವರರು ನಮಗೆ ಬೋಧಿಸಿದ್ದರು. ಅವರು ನಡೆದ ಹಾದಿಯಲ್ಲಿಯೇ ನಮ್ಮ ಸರ್ಕಾರವೂ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.