Kumbh Mela: ಕರ್ನಾಟಕದಲ್ಲೂ ಮುಂದಿನ ತಿಂಗಳು ಕುಂಭಮೇಳ, ದಿನಾಂಕ ಫಿಕ್ಸ್
ಕರ್ನಾಟಕದಲ್ಲೂ ಮುಂದಿನ ತಿಂಗಳು ಕುಂಭ ಮೇಳ ನಡೆಯಲಿದೆ. ದಿನಾಂಕ ಇತ್ಯಾದಿ ವಿವರ ಇಲ್ಲಿದೆ.
ಮೈಸೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿನ ಮಹಾ ಕುಂಭಮೇಳದ ಬೆನ್ನಲ್ಲೇ ಕರ್ನಾಟಕದಲ್ಲೂ ಕುಂಭಮೇಳ (Kumbh Mela) ಆಯೋಜಿಸಲು ದಿನಾಂಕ ಫಿಕ್ಸ್ ಆಗಿದೆ. ಈ ಕುರಿತು ಮೈಸೂರು (Mysuru news) ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ (Mahadeavappa) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು.
ಇದೇ ಫೆಬ್ರವರಿ 10, 11 ಮತ್ತು 12ರಂದು ಮೂರು ದಿನಗಳ ಕಾಲ ಟಿ.ನರಸೀಪುರದ ಮೂರು ನದಿಗಳ ಸಂಗಮ ಸ್ಥಳದಲ್ಲಿ ಕುಂಭಮೇಳವನ್ನು ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಪ್ರತಿ ಮೂರು ವರ್ಷಗಳಿಗೊಮ್ಮೆ ಟಿ.ನರಸೀಪುರದಲ್ಲಿ ಕುಂಭಮೇಳ ನಡೆಯುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ 10 ಕೋಟಿ ನೀಡುವಂತೆ ಜಿಲ್ಲಾಡಳಿತ ಪ್ರಸ್ತಾವನೆಯನ್ನು ಸಲ್ಲಿಸಿದೆ. ಕಳೆದ ಬಾರಿ 4 ಕೋಟಿ ಕೊಡಲಾಗಿತ್ತು. ಈ ಬಾರಿ 5 ರಿಂದ 6 ಕೋಟಿ ನೀಡುವ ನಿರೀಕ್ಷೆಯಿದೆ ಎಂದರು.
ಮೂರು ದಿನಗಳ ಕಾಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಟಿ.ನರಸೀಪುರದಲ್ಲಿನ ಕುಂಭಮೇಳದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ನಾನು ಕೂಡ ಪುಣ್ಯಸ್ನಾನ ಮಾಡುತ್ತೇನೆ. ನನಗೆ ಧಾರ್ಮಿಕ ಆಚರಣೆಗಳಿಗೆ ವೈಯಕ್ತಿಕವಾಗಿ ವಿರೋಧವಿಲ್ಲ. ಅವರವರ ಧಾರ್ಮಿಕ ನಂಬಿಕೆಯಂತೆ ಆಚರಣೆ ಮಾಡುತ್ತಾರೆ. ಇದು ಸಂವಿಧಾನಾತ್ಮಕ ಹಕ್ಕು ಕೂಡ ಎಂದವರು ನುಡಿದರು.