MUDA case: 2019 ರಿಂದ 2023ರ ಅವಧಿಯಲ್ಲಿ ಹಂಚಿಕೆಯಾದ ಎಲ್ಲಾ ಮುಡಾ ಸೈಟ್‌ಗಳು ರದ್ದು!
Mysuru News: ರಸ್ತೆ ನಿರ್ಮಾಣಕ್ಕೆ ತಮ್ಮ ಜಮೀನು ನೀಡಿ ಈಗಾಗಲೇ ಪರಿಹಾರ ಪಡೆದುಕೊಂಡಿದ್ದ ಮಾಲೀಕರು ಸಹ ಮುಡಾದಿಂದ ಮತ್ತೆ ನಿವೇಶನಗಳನ್ನು ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನು 2018ಕ್ಕಿಂತ ಮೊದಲು ಹಂಚಿಕೆಯಾದ ನಿವೇಶನಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದ್ದು, ಅಲ್ಲೂ ಅಕ್ರಮಗಳು ನಡೆದಿರುವುದು ಕಂಡುಬಂದರೆ ಆ ಸೈಟುಗಳನ್ನೂ ಸಹ ರದ್ದುಗೊಳಿಸುವುದಾಗಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಚಿವ ಯತೀಂದ್ರ ಸಿದ್ದರಾಮಯ್ಯ. -
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಕೈಗೊಂಡಿದೆ. 2019 ರಿಂದ 2023ರ ಅವಧಿಯಲ್ಲಿ 50:50 ಅನುಪಾತದ ಯೋಜನೆಯಡಿ ಹಂಚಿಕೆ ಮಾಡಲಾಗಿರುವ 1000ಕ್ಕೂ ಹೆಚ್ಚು ನಿವೇಶನಗಳನ್ನು (Muda sites) ರದ್ದುಗೊಳಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಸೈಟುಗಳು ಹಾಗೂ ಈಗಾಗಲೇ ಆ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡಿರುವವರ ಸಂಪೂರ್ಣ ಪಟ್ಟಿಯನ್ನು ತರಿಸಿಕೊಳ್ಳಲಾಗುತ್ತಿದೆ. ಕಾನೂನಾತ್ಮಕವಾಗಿ ಸಿಲುಕಿರುವ ನಿವೇಶನಗಳ ಕುರಿತು ಮುಂದಿನ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ವಿವರಣೆ ನೀಡಿದ್ದಾರೆ.
ಸಂಸ್ಥೆಯ ಹಂತದಲ್ಲಿ ಆದೇಶ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಕುರಿತು ಸಂಪೂರ್ಣ ಆದೇಶದ ಪ್ರತಿಯನ್ನು ಮುಡಾ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಆದೇಶ ಜಾರಿಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರೊಂದಿಗೆ, 2018ಕ್ಕಿಂತ ಮೊದಲು ಹಂಚಿಕೆಯಾದ ನಿವೇಶನಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದ್ದು, ಅಲ್ಲೂ ಅಕ್ರಮಗಳು ನಡೆದಿರುವುದು ಕಂಡುಬಂದರೆ ಆ ಸೈಟುಗಳನ್ನೂ ಸಹ ರದ್ದುಗೊಳಿಸುವುದಾಗಿ ಸಚಿವರು ಎಚ್ಚರಿಸಿದ್ದಾರೆ.
ರಸ್ತೆ ನಿರ್ಮಾಣಕ್ಕೆ ತಮ್ಮ ಜಮೀನು ನೀಡಿ ಈಗಾಗಲೇ ಪರಿಹಾರ ಪಡೆದುಕೊಂಡಿದ್ದ ಮಾಲೀಕರು ಸಹ ಮುಡಾದಿಂದ ಮತ್ತೆ ನಿವೇಶನಗಳನ್ನು ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಯೋಜನೆಯಡಿ ವ್ಯಾಪಕ ಪ್ರಮಾಣದ ಅಕ್ರಮಗಳು ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ, ಪ್ರಾಧಿಕಾರದ ಪಾರದರ್ಶಕತೆ ಕಾಯ್ದುಕೊಳ್ಳಲು ಈ ಎಲ್ಲಾ ಹಂಚಿಕೆಗಳನ್ನು ರದ್ದುಪಡಿಸುವ ಕಠಿಣ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ ನೇಮಕಾತಿಯಲ್ಲಿ ಬೃಹತ್ ಅಕ್ರಮ; ಮಹತ್ವದ ದಾಖಲೆ ಬಿಡುಗಡೆ ಮಾಡಿದ ಎಚ್‌ಡಿಕೆ
ಇದೇ ವೇಳೆ, ಮಾಜಿ ಸಚಿವ ನಾಗೇಂದ್ರ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಪ್ರತಿಪಕ್ಷ ಬಿಜೆಪಿಯ ಧೋರಣೆಯನ್ನು ಟೀಕಿಸಿದ ಅವರು, 'ಪ್ರತಿಪಕ್ಷಗಳಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಸದನದಲ್ಲಿ ಚರ್ಚೆಗೆ ಬರಬೇಕಿತ್ತು. ಆದರೆ ಅವರು ಗದ್ದಲ ಎಬ್ಬಿಸಿ ಅಧಿವೇಶನದ ಸಮಯ ಹಾಳುಗೆಡವಿದರು. ನಾಗೇಂದ್ರ ಅವರ ವಿಷಯದಲ್ಲಿ ಮುಖ್ಯಮಂತ್ರಿಗಳು ಮತ್ತು ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ' ಎಂದು ಹೇಳಿದರು.