ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂದು ಮೈಸೂರಿಗೆ ಗಜಪಡೆ ಆಗಮನ

ಅರಣ್ಯದಿಂದ ಅರಮನೆಯತ್ತ: ಮೈಸೂರು ಮಹಾ ರಾಜರ ಕಾಲದಿಂದಲೂ ದಸರಾ ಆನೆಗಳನ್ನು ಅರಣ್ಯ ಶಿಬಿರಗಳಲ್ಲಿ ಪಳಗಿಸಿ, ಶುಭದಿನದಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾಲ್ನಡಿಗೆಯಲ್ಲಿ ಮೈಸೂರಿಗೆ ಕರೆತರುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಕಾಲ ಬದಲಾದಂತೆ ರಸ್ತೆ ಸಂಚಾರ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ಆನೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯ ಎದುರಾಯಿತು

ಇಂದು ಮೈಸೂರಿಗೆ ಗಜಪಡೆ ಆಗಮನ

-

Profile
Ashok Nayak Aug 26, 2026 2:19 PM

ಕೆ.ಜೆ.ಲೋಕೇಶ್ ಬಾಬು

ಮೈಸೂರು: ಮೈಸೂರು ದಸರಾ ಎಂದರೆ ಕೇವಲ ವೈಭವದ ಉತ್ಸವವಲ್ಲ, ಅದು ಶತಮಾನಗಳ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಕರ್ನಾಟಕದ ಅರಣ್ಯ- ವನ್ಯಜೀವಿ ಪರಂಪರೆಯ ಜೀವಂತ ಪ್ರತಿಬಿಂಬ. ಈ ಭವ್ಯ ಪರಂಪರೆಯ ಪ್ರಮುಖ ಆರಂಭಿಕ ಘಟ್ಟವೇ ಗಜಪಯಣ. ಮೈಸೂರು ಅರಮನೆ ಅಂಗಳದಿಂದ ಹೊರಡುವ ಜಂಬೂಸವಾರಿಯ ಗಾಂಭೀರ್ಯಕ್ಕೆ ಜೀವ ತುಂಬುವ ಗಜರಾಜರನ್ನು ಆ.26ರ ಬುಧವಾರ ಅರಣ್ಯ ಶಿಬಿರಗಳಿಂದ ಮೈಸೂರಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಗುತ್ತಿದೆ.

2026ರ ಗಜಪಯಣ ಕೇವಲ ದಸರಾ ಆನೆಗಳ ಮೈಸೂರಿನತ್ತ ಪಯಣವಲ್ಲ. ಇದು ಅರಣ್ಯದಿಂದ ಅರಮನೆ ಯವರೆಗೆ ಸಾಗುವ ಕರ್ನಾಟಕದ ಜೀವಂತ ಪರಂಪರೆಯ ಪಯಣ. ಇದು ಗಜರಾಜ ಮತ್ತು ಮೈಸೂರಿನ ನಡುವಿನ ಶತಮಾನಗಳ ನಂಟಿನ ಸಂಭ್ರಮ. ಇದು ದಸರಾ ವೈಭವಕ್ಕೆ ಚಾಲನೆ ನೀಡುವ ಕ್ಷಣ. ಈ ಬಾರಿ ತನ್ನ ಬದುಕಿನ ಅಮೂಲ್ಯ ಸೇವೆಗೆ ಗೌರವಪೂರ್ವಕ ವಿದಾಯ ಪಡೆಯು ತ್ತಿರುವ ಅಭಿಮನ್ಯುವಿನ ಭಾವಪೂರ್ಣ ಪಯಣವೂ ಹೌದು.

ಅರಣ್ಯದಿಂದ ಅರಮನೆಯತ್ತ: ಮೈಸೂರು ಮಹಾ ರಾಜರ ಕಾಲದಿಂದಲೂ ದಸರಾ ಆನೆಗಳನ್ನು ಅರಣ್ಯ ಶಿಬಿರಗಳಲ್ಲಿ ಪಳಗಿಸಿ, ಶುಭದಿನದಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾಲ್ನಡಿಗೆ ಯಲ್ಲಿ ಮೈಸೂರಿಗೆ ಕರೆತರುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಕಾಲ ಬದಲಾದಂತೆ ರಸ್ತೆ ಸಂಚಾರ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ಆನೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯ ಎದುರಾಯಿತು. ಇದರ ಪರಿಣಾಮವಾಗಿ 2004ರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಾಗಿಲಂತಿರುವ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿ ಸಾಂಪ್ರ ದಾಯಿಕ ಪೂಜೆ ನೆರವೇರಿಸಿ, ವಿಶೇಷವಾಗಿ ವ್ಯವಸ್ಥೆಗೊಳಿಸಲಾದ ವಾಹನಗಳಲ್ಲಿ ದಸರಾ ಆನೆಗಳನ್ನು ಮೈಸೂರಿಗೆ ಸುರಕ್ಷಿತವಾಗಿ ಕರೆ ತರುವ ಪದ್ಧತಿ ಜಾರಿಗೆ ಬಂದಿದೆ.

ಇದನ್ನೂ ಓದಿ: World Elephant Day: ಆನೆಗಳಿರುವ ಭಾರತದ ಜನಪ್ರಿಯ 6 ರಾಷ್ಟ್ರೀಯ ಉದ್ಯಾನವನಗಳಿವು; ಕರ್ನಾಟಕದ ತಾಣವೂ ಇದೆ

ಗಜಪಯಣವು ಕೇವಲ ಆನೆಗಳ ಪ್ರಯಾಣ ವಲ್ಲ. ಧಾರ್ಮಿಕ ಆಚರಣೆಗಳು, ಜಾನಪದ ಕಲೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಅರಣ್ಯ -ವನ್ಯಜೀವಿ ಸಂರಕ್ಷಣೆಯ ಸಂದೇಶಗಳು ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯಿಂದ ಇದು ಸಮಗ್ರ ಸಾಂಸ್ಕೃತಿಕ ಸಂಭ್ರಮವಾಗಿ ರೂಪು ಗೊಂಡಿದೆ.

ಮೈಸೂರು ದಸರಾ 2026ರ ಸಿದ್ಧತೆಗಳ ಅಂಗವಾಗಿ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಪಶುವೈದ್ಯಕೀಯ ತಂಡ ಗಳು ಮತ್ತಿಗೋಡು, ದುಬಾರೆ ಮತ್ತು ರಾಮಪುರ ಆನೆ ಶಿಬಿರಗಳಿಗೆ ಭೇಟಿ ನೀಡಿ ಆನೆಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಿವೆ. ದೈಹಿಕ ಪರೀಕ್ಷೆ ಜತೆಗೆ ರಕ್ತ ಮತ್ತು ಮಲದ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದ್ದು, ಹೆಣ್ಣಾನೆಗಳ ಗರ್ಭಧಾರಣೆಯ ಸ್ಥಿತಿಯನ್ನು ಅಲ್ಟ್ರಾಸೌಂಡ್ ಮೂಲಕ ಪರಿಶೀಲಿಸಲಾಗಿದೆ. ವಿಶೇಷವಾಗಿ, 2026ರಲ್ಲಿ ಇದೇ ಮೊದಲ ಬಾರಿಗೆ ದಸರಾ ಆನೆಗಳ ಹೃದಯ ಆರೋಗ್ಯ ಪರಿಶೀಲನೆ ಗಾಗಿ ಇಸಿಜಿ ಪರೀಕ್ಷೆಯನ್ನೂ ನಡೆಸಲಾಗಿದೆ. ಆರೋಗ್ಯ ತಪಾಸಣೆ, ಪಶುವೈದ್ಯಕೀಯ ವರದಿಗಳು ಮತ್ತು ದಸರಾ ಆನೆಗಳ ಆಯ್ಕೆ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಒಟ್ಟು 14 ಆನೆಗಳನ್ನು ಗುರುತಿಸಲಾಗಿದೆ.

ಮೊದಲನೇ ತಂಡದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀ ರಾಮ, ಶ್ರೀಕಂಠ, ಲಕ್ಷ್ಮಿ ಮತ್ತು ಕಾವೇರಿ. ಎರಡನೇ ತಂಡದಲ್ಲಿ ರೂಪ, ಚೈತ್ರ ಮತ್ತು ಸುಗ್ರೀವ ಹಾಗೂ ಮೀಸಲು ಆನೆಗಳಾಗಿ ಭೀಮ ಮತ್ತು ಹರ್ಷ ಆನೆಗಳು ಇವೆ.

Gajapade 2+2

ಇಂದು ಗಜಪಯಣಕ್ಕೆ ಚಾಲನೆ: ಆ.26ರ ಬುಧವಾರ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ಗ್ರಾಮದ ಬಳಿ ಗಜಪಯಣ ನಡೆಯಲಿದೆ. ಸಚಿವರು, ವಿಧಾನಸಭಾ ಸದಸ್ಯರು, ಜನಪ್ರತಿನಿಧಿಗಳು, ಗಣ್ಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮೊದಲನೇ ತಂಡದ ಒಂಬತ್ತು ಆನೆಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗುವುದು. ಇದರೊಂದಿಗೆ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಪೂಜಾ ವಿಧಿವಿಧಾನಗಳ ನಂತರ ಆನೆಗಳನ್ನು ವಿಶೇಷ ವಾಹನಗಳ ಮೂಲಕ ಮೈಸೂರಿಗೆ ಕರೆತರಲಾಗುವುದು.

ಅಭಿಮನ್ಯುವಿಗೆ ಬೀಳ್ಕೊಡುಗೆ

1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಸಿಕ್ಕ ಕಾಡಾನೆ ಮುಂದೆ ಅಭಿಮನ್ಯು ಆಗಿ ಬೆಳೆದು ಕನ್ನಡಿಗರ ಅಪಾರ ಪ್ರೀತಿಗೆ ಪಾತ್ರನಾಗುತ್ತಾನೆ. ಪುಂಡಾನೆಗಳ ಸೆರೆ ಹಾಗೂ ಹುಲಿಗಳ ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗೆ ಸಾಥ್ ನೀಡಿ ಸೈ ಎನಿಸಿಕೊಂಡ ಗಜರಾಜ. ತರಬೇತಿ ಪಡೆದು ಕುಮ್ಕಿ ಆನೆಯಾಗಿ ರೂಪು ಗೊಂಡನು. 2019ರಿಂದ ಸತತವಾಗಿ 6 ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತ ಹೆಗ್ಗಳಿಕೆ ಅಭಿಮನ್ಯ ಆನೆಗೆ ಇದೆ. ಸದ್ಯ ಈತನಿಗೆ 60 ವರ್ಷ ದಾಟಿರುವುದರಿಂದ ಈ ಬಾರಿಯ ಜಂಬೂ ಸವಾರಿಯಿಂದ ಕೊಕ್ ನೀಡಲಾಗಿದೆ. ದಸರಾ ದಲ್ಲಿ ವಿಶೇಷ ಆಕರ್ಷಣೀಯವಾಗಿದ್ದ ಅಭಿಮನ್ಯುವಿಗೆ ಗೌರವ ಪೂರ್ವಕ ವಿದಾಯ ಹೇಳಲು ಅರಣ್ಯ ಇಲಾಖೆ ಮುಂದಾಗಿದ್ದು, ಇಂದು ಆಗಮಿಸುವ ಗಜಪಡೆಯಲ್ಲಿ ಈತನು ಅರಮನೆ ಪ್ರವೇಶ ಮಾಡ ಲಿದ್ದಾನೆ. ಸಕಲ ಗೌರವ, ಪೂಜೆ ಪುನಸ್ಕಾರ ಸಲ್ಲಿಸಿ ಅಭಿಮನ್ಯುವನ್ನು ಅರಣ್ಯ ಇಲಾಖೆ ಗೌರವ ಯುತವಾಗಿ ದಸರಾ ಜವಾಬ್ದಾರಿಯಿಂದ ನಿವೃತ್ತಿ ಮಾಡಲಿದೆ.

ನಿವೃತ್ತಿಯಾದರೂ ಮುಗಿಯದ ದಂತಕಥೆ

ಅಭಿಮನ್ಯು ಸಕ್ರಿಯ ದಸರಾ ಕರ್ತವ್ಯಗಳಿಂದ ನಿವೃತ್ತಿಯಾಗ ಬಹುದು. ಆದರೆ, ಮೈಸೂರು ದಸರಾ ನೆನಪುಗಳಿಂದ ಎಂದಿಗೂ ನಿವೃತ್ತಿಯಾಗುವು ದಿಲ್ಲ. ಚಿನ್ನದ ಅಂಬಾರಿಯ ಭಾರವನ್ನು ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಆ ಗಜರಾಜನ ಚಿತ್ರ, ಜಂಬೂಸವಾರಿಯ ವೈಭವದೊಂದಿಗೆ ಶಾಶ್ವತವಾಗಿ ಬೆಸೆದುಕೊಂಡಿದೆ. ಅವನ ಧೈರ್ಯ, ಶಿಸ್ತು, ಗಾಂಭೀರ್ಯ, ಶಾಂತ ಸ್ವಭಾವ ಮತ್ತು ದಶಕಗಳ ಸೇವೆ ಮೈಸೂರು ದಸರಾ ಇತಿಹಾಸದ ಅವಿಭಾಜ್ಯ ಅಧ್ಯಾಯವಾಗಿ ಉಳಿಯಲಿದೆ.

ಆ.28ರಂದು ಅರಮನೆ ಪ್ರವೇಶ

ದಸರಾ ಸಿದ್ಧತೆಗಳ ಮುಂದಿನ ಸಾಂಪ್ರದಾಯಿಕ ಹಂತವಾಗಿ ಆಗಸ್ಟ್ 28ರಂದು ದಸರಾ ಆನೆಗಳನ್ನು ಮೈಸೂರು ಅರಮನೆ ಪ್ರಾಧಿಕಾರಕ್ಕೆ ಔಪಚಾರಿಕವಾಗಿ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

*

ಮತ್ತಿಗೋಡು, ದುಬಾರೆ, ರಾಮಪುರ ಶಿಬಿರಗಳಿಂದ ಪ್ರಯಾಣ

ದಸರಾದಲ್ಲಿ ಪಾಲ್ಗೊಳ್ಳುವ 14 ಆನೆಗಳಿಗೆ ಆರೋಗ್ಯ ತಪಾಸಣೆ

ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ,

ಶ್ರೀ ರಾಮ, ಶ್ರೀಕಂಠ, ಲಕ್ಷ್ಮಿ, ಕಾವೇರಿ ಆನೆಗಳು ಮುಂಚೂಣಿ